
ಮೈಸೂರು: ‘ಬೇಡಿಕೆ ಅಪಾರವಾಗಿರುವ ಹರಳು ಕೃಷಿಯನ್ನು ರೈತರು ಅಳವಡಿಸಿಕೊಂಡು, ಹೆಚ್ಚು ಖರ್ಚಿಲ್ಲದೆ ಬೆಳೆದು ಅದಾಯ ಹೆಚ್ಚಿಕೊಳ್ಳಬಹುದು. ಉತ್ತಮ ಇಳುವರಿ ಕೊಡುವ ಸುಧಾರಿತ ತಳಿಗಳೂ ಲಭ್ಯ ಇವೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹರಳು ಸಂಶೋಧನಾ ಯೋಜನೆಯ ಹಿರಿಯ ವಿಜ್ಞಾನಿ ಯಮನೂರ ತಿಳಿಸಿದರು.
ಇಲ್ಲಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಮತ್ತು ದೇಸಿರಿ ನ್ಯಾಚುರಲ್ಸ್ ಸಹಯೋಗದಲ್ಲಿ ಆಯೋಜಿಸಿರುವ ‘ದೇಸಿ ಎಣ್ಣೆ ಮೇಳ’ದ 2ನೇ ದಿನವಾದ ಶನಿವಾರ ರೈತರಿಗಾಗಿ ಹಮ್ಮಿಕೊಂಡಿದ್ದ ‘ಎಣ್ಣೆಕಾಳು ಕೃಷಿ ಮತ್ತು ಸಂಸ್ಕರಣೆ’ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹರಳೆಣ್ಣೆಯನ್ನು ಕೈಗಾರಿಕೆಗಳ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ಹರಳೆಣ್ಣೆ ಮಂದವಾಗಿರುವುದರಿಂದ, ಅದನ್ನು ವಾಹನಗಳ ಅದರಲ್ಲೂ ವಿಶೇಷವಾಗಿ ವಿಮಾನದ ಎಂಜಿನ್ ಆಯಿಲ್ ತಯಾರಿಕೆಯಲ್ಲೂ ಬಳಸುತ್ತಾರೆ. ಲಿಪ್‌ಸ್ಟಿಕ್, ಚರ್ಮದ ತೇವಾಂಶ ರಕ್ಷಿಸುವ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ’ ಎಂದು ಮಾಹಿತಿ ನೀಡಿದರು.
ಪೋಷಕಾಂಶಗಳಿವೆ:
ಬೆಂಗಳೂರು ಕೃಷಿ ವಿವಿಯ ಸೂರ್ಯಕಾಂತಿ ಸಂಶೋಧನಾ ಕೇಂದ್ರದ ವಿಜ್ಞಾನಿ ಕೆ.ಎಸ್. ಸೋಮಶೇಖರ್ ಮಾತನಾಡಿ, ‘ನಮ್ಮ ಸಾಂಪ್ರದಾಯಿಕ ಎಣ್ಣೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಪ್ರತಿ ವರ್ಷ ಭಾರತ ಸರ್ಕಾರ 1.61 ಲಕ್ಷ ಕೋಟಿ ಮೌಲ್ಯದ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ರೈತರು ಎಣ್ಣೆ ಕಾಳುಗಳನ್ನು ಬೆಳೆದು ಆರ್ಥಿಕ ಹೊರೆ ತಗ್ಗಿಸಬಹುದಾಗಿದೆ’ ಎಂದರು.
ಬೆಂಗಳೂರಿನ ಸುಗಂಧ ಮತ್ತು ಔಷಧೀಯ ಸಸ್ಯಗಳ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಯೋಗೇಂದ್ರ, ‘ನಾವು ನಿತ್ಯ 50ಕ್ಕೂ ಹೆಚ್ಚು ಔಷಧಿ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತೇವೆ. ಹೀಗಾಗಿ, ಕೃಷಿಕರು ಉಪ ಬೆಳೆಯಾಗಿ ಸುಗಂಧ ಮತ್ತು ಔಷಧೀಯ ಸಸ್ಯಗಳನ್ನು ಬೆಳೆದರೆ ಆದಾಯ ಗಳಿಸಬಹುದು’ ಎಂದು ತಿಳಿಸಿದರು.
ನಂಜನಗೂಡು ತಾಲ್ಲೂಕು ಹೆಗ್ಗೊಠಾರ ಗ್ರಾಮದ ಗುರುಮಲ್ಲಪ್ಪ ಶೇಂಗಾ ಮತ್ತಿತರ ಎಣ್ಣೆ ಬೆಳೆ ಕೃಷಿಯ ಅನುಭವ ಹಂಚಿಕೊಂಡರು.
ಮುಖ್ಯ ಅತಿಥಿಯಾಗಿದ್ದ ಆಹಾರ ವಿಜ್ಞಾನಿ ಮಮತಾ ಶೇಖರ್, ‘ಅಮೆರಿಕದಲ್ಲಿ ಆಲೀವ್ ಎಣ್ಣೆ ಮೊದಲಾದ ಸಂಸ್ಕರಿಸಿದ ರಿಫೈನ್ಡ್ ಎಣ್ಣೆಗಳನ್ನು ಬಳಸುತ್ತಿರುವುದರಿಂದಾಗಿ ಯುವ ದಂಪತಿಗಳಿಗೆ ಸಂತಾನೋತ್ಪತ್ತಿ ಸಮಸ್ಯೆ ಹೆಚ್ಚಾಗುತ್ತಿದೆ. ಅಂಥವರಿಗೆ ಗಾಣದ ಎಣ್ಣೆ ಬಳಸಲು ನಾನು ಸಲಹೆ ನೀಡುತ್ತಿರುತ್ತೇನೆ’ ಎಂದರು.
ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್, ದೇಸಿರಿ ನ್ಯಾಚುರಲ್ಸ್ ಸಂಸ್ಥಾಪಕ ನವೀನ್‌ಕುಮಾರ್ ಎಚ್.ಆರ್., ಎಂ. ಮಹೇಶ ಪಾಲ್ಗೊಂಡಿದ್ದರು.
ಪಲ್ಲವಿ ಫೌಂಡೇಷನ್ ಹಾಗೂ ಕೆಎಸ್ ಇಂಟರ್‌ನ್ಯಾಷನಲ್ ವತಿಯಿಂದ ಸಂಗೀತ ಕಛೇರಿ ಮತ್ತು ಹಳೆಯ ಚಲನಚಿತ್ರಗಳ ಗೀತಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.