ADVERTISEMENT

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ: ರಮೇಶ್‌ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:39 IST
Last Updated 21 ಫೆಬ್ರುವರಿ 2026, 5:39 IST
ಮೈಸೂರಿನ ಸೆಸ್ಕ್‌ ಆವರಣದಲ್ಲಿ ಶುಕ್ರವಾರ ನಡೆದ ನೇಮಕಾತಿ ಆದೇಶಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿದರು
ಮೈಸೂರಿನ ಸೆಸ್ಕ್‌ ಆವರಣದಲ್ಲಿ ಶುಕ್ರವಾರ ನಡೆದ ನೇಮಕಾತಿ ಆದೇಶಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿದರು   

ಮೈಸೂರು: ‘ಕಿರಿಯ ಪವರ್‌ಮ್ಯಾನ್‌ಗಳಾಗಿ ನೇಮಕಗೊಂಡಿರುವವರು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು’ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ ಸೂಚಿಸಿದರು.

ಇಲ್ಲಿನ ವಿಜಯನಗರ 2ನೇ ಹಂತದಲ್ಲಿರುವ ‘ಸೆಸ್ಕ್‌’ ಕೇಂದ್ರ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್‌ ಮತ್ತು ನೇಮಕಾತಿ ಆದೇಶಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಿಗುವುದೇ ಕಷ್ಟ. ಹೀಗಿರುವಾಗ, ಅಭ್ಯರ್ಥಿಗಳು ಸಿಕ್ಕಿರುವ ಕೆಲಸವನ್ನು ಉತ್ತಮವಾಗಿ ನಿರ್ವಹಿಸಬೇಕು. ದುಶ್ಚಟಗಳಿಗೆ ಬಲಿಯಾಗದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಕೆಲಸ ಮಾಡುವಾಗ ಬೇಜವಾಬ್ದಾರಿ ಅಥವಾ ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಸಂಭವಿಸಬಹುದು. ಆದ್ದರಿಂದ ತರಬೇತಿ ಅವಧಿಯಲ್ಲಿ ನೀಡುವ ಸಲಹೆಗಳನ್ನು ಅರಿತು, ಯಾವುದೇ ಅನುಮಾನವಿದ್ದರೂ ಪರಿಹರಿಸಿಕೊಳ್ಳಬೇಕು. ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನಸಾಮಾನ್ಯರು ದೂರು, ಸಮಸ್ಯೆಗಳನ್ನು ತಿಳಿಸಿದಾಗ ಸೌಜನ್ಯ ಹಾಗೂ ಗೌರವದಿಂದ ವರ್ತಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಸರ್ಕಾರದಿಂದ ಪಾರದರ್ಶಕ ಹಾಗೂ ಪ್ರಾಮಾಣಿಕ ರೀತಿಯಲ್ಲಿ ರಾಜ್ಯದೆಲ್ಲೆಡೆ ಮೂರು ಸಾವಿರಕ್ಕೂ ಹೆಚ್ಚು ಪವರ್‌ಮ್ಯಾನ್‌ಗಳ ನೇಮಕಾತಿ ನಡೆಸಿದೆ. ಮಾರ್ಗಸೂಚಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ಕೈಗೊಂಡಿದೆ. ಅರ್ಹತೆ ಆಧಾರದ ಮೇಲೆಯೇ ಆಯ್ಕೆ ಮಾಡಲಾಗಿದೆ. ಯಾವುದೇ ಪ್ರಭಾವ ಬಳಸದೆ ಸಿಕ್ಕಿರುವ ಕೆಲಸಕ್ಕೆ ಗೌರವ ನೀಡಬೇಕು’ ಎಂದರು.

ಮಧ್ಯವರ್ತಿಗಳಿಗೆ ಕಿವಿಗೊಡದಿರಿ: 

ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು, ‘ಒತ್ತಡ, ಶಿಫಾರಸು, ಪ್ರಭಾವ ಬೀರುವ ಪ್ರಯತ್ನಗಳಿಗೆ ಅವಕಾಶವಿಲ್ಲ. ಸಂಪೂರ್ಣ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಧ್ಯವರ್ತಿಗಳ ಮಾತಿಗೆ ಕಿವಿಗೊಡದೆ, ಪ್ರಭಾವ ಬೀರದೆ ನಿಯೋಜನೆಗೊಳ್ಳುವಲ್ಲಿ ಕರ್ತವ್ಯ ನಿರ್ವಹಿಸಬೇಕು’ ಎಂದು ಹೇಳಿದರು.

‘ಸೆಸ್ಕ್‌’ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕಿ (ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕಿ (ಆ. ಮತ್ತು ಮಾ.ಸಂ) ಬಿ.ಆರ್.ರೂಪಾ, ಹಾಸನ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಪಾಲ್ಗೊಂಡಿದ್ದರು.

293 ಮಂದಿ ನೇಮಕ...

ಸೆಸ್ಕ್‌ನ ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳ ನೇಮಕಾತಿಗೆ 2025ರ ಮೇ 16ರಂದು ಸಹನಾಶಕ್ತಿ ಪರೀಕ್ಷೆ ನಡೆಸಲಾಗಿತ್ತು. ಬಳಿಕ ವಿವಿಧ ಹಂತಗಳಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ 293 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿತ್ತು. ಅವರಿಗೆ ಕೌನ್ಸೆಲಿಂಗ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಅನುಸಾರ ಸ್ಥಳ ನಿಯುಕ್ತಿಗೊಳಿಸಿ ಆದೇಶ ಪತ್ರವನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.