
ಮೈಸೂರು: ‘ಕಿರಿಯ ಪವರ್‌ಮ್ಯಾನ್‌ಗಳಾಗಿ ನೇಮಕಗೊಂಡಿರುವವರು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು’ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಸೂಚಿಸಿದರು.
ಇಲ್ಲಿನ ವಿಜಯನಗರ 2ನೇ ಹಂತದಲ್ಲಿರುವ ‘ಸೆಸ್ಕ್’ ಕೇಂದ್ರ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಮತ್ತು ನೇಮಕಾತಿ ಆದೇಶಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಿಗುವುದೇ ಕಷ್ಟವಾಗಿದೆ. ಹೀಗಿರುವಾಗ, ಅಭ್ಯರ್ಥಿಗಳು ಸಿಕ್ಕಿರುವ ಕೆಲಸ ಉತ್ತಮವಾಗಿ ನಿರ್ವಹಿಸಬೇಕು. ಕರ್ತವ್ಯದ ಸಂದರ್ಭದಲ್ಲಿ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇತಿಮಿತಿ ಅರಿತು ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.
ಜವಾಬ್ದಾರಿ ಅರಿತುಕೊಳ್ಳಿ: ‘ಕೆಲಸ ಮಾಡುವಾಗ ಬೇಜವಾಬ್ದಾರಿ ಅಥವಾ ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಸಂಭವಿಸಬಹುದು. ಆದ್ದರಿಂದ ತರಬೇತಿ ಅವಧಿಯಲ್ಲಿ ನೀಡುವ ಸಲಹೆಗಳನ್ನು ಅರಿತು, ಯಾವುದೇ ಅನುಮಾನವಿದ್ದರೂ ಪರಿಹರಿಸಿಕೊಳ್ಳಬೇಕು. ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನಸಾಮಾನ್ಯರು ದೂರು, ಸಮಸ್ಯೆಗಳನ್ನು ತಿಳಿಸಿದಾಗ ಸೌಜನ್ಯ ಹಾಗೂ ಗೌರವದಿಂದ ವರ್ತಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಸರ್ಕಾರದಿಂ ಪಾರದರ್ಶಕ ಹಾಗೂ ಪ್ರಾಮಾಣಿಕ ರೀತಿಯಲ್ಲಿ ರಾಜ್ಯದೆಲ್ಲೆಡೆ ಮೂರು ಸಾವಿರಕ್ಕೂ ಹೆಚ್ಚು ಪವರ್‌ಮ್ಯಾನ್‌ಗಳ ನೇಮಕಾತಿ ನಡೆಸಿದೆ. ಯಾವುದೇ ಗೊಂದಲ ಅಥವಾ ಅಡೆತಡೆ ಇಲ್ಲದೆ ಮಾರ್ಗಸೂಚಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ಕೈಗೊಂಡಿದೆ. ಅರ್ಹತೆ ಆಧಾರದ ಮೇಲೆಯೇ ಆಯ್ಕೆ ಮಾಡಲಾಗಿದೆ. ಯಾವುದೇ ಪ್ರಭಾವ ಬಳಸದೆ ಸಿಕ್ಕಿರುವ ಕೆಲಸಕ್ಕೆ ಗೌರವ ನೀಡಬೇಕು’ ಎಂದರು.
ಮಧ್ಯವರ್ತಿಗಳಿಗೆ ಕಿವಿಗೊಡದಿರಿ: ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು, ‘ಯಾವುದೇ ಒತ್ತಡ, ಶಿಫಾರಸು, ಪ್ರಭಾವ ಬೀರುವ ಪ್ರಯತ್ನಗಳಿಗೆ ಅವಕಾಶವಿಲ್ಲ. ಸಂಪೂರ್ಣ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಧ್ಯವರ್ತಿಗಳ ಮಾತಿಗೆ ಕಿವಿಗೊಡದೆ, ಪ್ರಭಾವ ಬೀರದೆ ನಿಯೋಜನೆಗೊಳ್ಳುವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕು’ ಎಂದು ಹೇಳಿದರು.
‘ಸೆಸ್ಕ್’ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕಿ(ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕಿ (ಆ. ಮತ್ತು ಮಾ.ಸಂ) ಬಿ.ಆರ್.ರೂಪಾ, ಹಾಸನ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಪಾಲ್ಗೊಂಡಿದ್ದರು.
293 ಮಂದಿ ನೇಮಕ: ಸೆಸ್ಕ್‌ನ ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ 2025ರ ಮೇ 16ರಂದು ಸಹನಾಶಕ್ತಿ ಪರೀಕ್ಷೆ ನಡೆಸಲಾಗಿತ್ತು. ಬಳಿಕ ವಿವಿಧ ಹಂತಗಳಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ 293 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿತ್ತು. ಅವರಿಗೆ ಕೌನ್ಸೆಲಿಂಗ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಅನುಸಾರ ಸ್ಥಳ ನಿಯುಕ್ತಿಗೊಳಿಸಿ ಆದೇಶ ಪತ್ರವನ್ನು ವಿತರಿಸಲಾಯಿತು.