ADVERTISEMENT

ಮೈಸೂರು: ಸ್ಕೂಟರ್ ಅಡ್ಡಗಟ್ಟಿ ಸರಗಳವು

ಮೈಸೂರು ಮತ್ತು ನಂಜನಗೂಡಿನಲ್ಲಿ ಕಳ್ಳರ ಕೈಚಳಕ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 5:56 IST
Last Updated 11 ಆಗಸ್ಟ್ 2021, 5:56 IST

ಮೈಸೂರು: ಜಿಲ್ಲೆಯಲ್ಲಿ ಸರಗಳ್ಳತನ ಮುಂದುವರಿದಿದೆ. ಹೆಬ್ಬಾಳದ ಸೂರ್ಯಬೇಕರಿ ಸಮೀಪ ಸಂಜೆ 6 ಗಂಟೆ ಸಮಯದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಂಜುಳಾ (36) ಅವರ ಕುತ್ತಿಗೆಯಲ್ಲಿದ್ದ 70 ಗ್ರಾಂ ತೂಕ ಚಿನ್ನದ ಸರವನ್ನು ಸ್ಕೂಟರ್‌ನಲ್ಲಿ ಎದುರಿನಿಂದ ಬಂದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಎದುರಿನಿಂದ ಬಂದ ಕಳ್ಳರು ತಮ್ಮ ವಾಹನದ ಹೆಡ್‌ಲೈಟ್‌ನ್ನು ಪ್ರಖರವಾಗಿ ಬೆಳಗಿಸಿದರು. ಇದರಿಂದ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಮಂಜುಳಾ ತಮ್ಮ ವಾಹನದ ವೇಗವನ್ನು ಕಡಿಮೆ
ಮಾಡಿದರು.

ಈ ವೇಳೆ ಹಿಂಬದಿ ಸವಾರ ಕುತ್ತಿಗೆಗೆ ಕೈಹಾಕಿದಾಗ ಸರವನ್ನು ಮಂಜುಳಾ ಅವರು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. 90 ಗ್ರಾಂ ತೂಕದ ಸರದಲ್ಲಿ 70 ಗ್ರಾಂನಷ್ಟು ಕಳ್ಳರ ಕೈಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ನಂಜನಗೂಡಿನ ಮಹದೇಶ್ವರ ಬಡಾವಣೆ ಸಮೀಪದ ಕುಮಾರ ಬಡಾವಣೆಯ ನಿವಾಸಿ ಗೀತಾ (52) ಮಂಗಳವಾರ ಸಂಬಂಧಿಕರ ಮನೆಯಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ವಾಪಸಾಗುವ ವೇಳೆ ಮಹದೇಶ್ವರ ಬಡಾವಣೆ ಮುಖ್ಯ ರಸ್ತೆಯಲ್ಲಿ ಬೈಕಿನಲ್ಲಿ ಬಂದ ಇಬ್ಬರು ಕುತ್ತಿಗೆಯಲ್ಲಿದ್ದ80 ಗ್ರಾಂ ತೂಕದ ಚಿನ್ನದಸರವನ್ನು ಕಿತ್ತುಕೊಂಡುಪರಾರಿಯಾಗಿದ್ದಾರೆ.

ದೂರು, ಪ್ರತಿದೂರು ದಾಖಲು

ಮೈಸೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರಿಗೆ ವಾಹನ ಚಾಲನಾ ತರಬೇತಿ ಶಾಲೆಯೊಂದರ 7 ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕುರಿತು ಎನ್‌.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಶಾಲೆಯ ಮಹಿಳೆಯೊಬ್ಬರು ಜಾತಿನಿಂದನೆ ದೂರನ್ನು ಮಹಿಳಾ ನೌಕರರ ಮೇಲೆ ನೀಡಿದ್ದಾರೆ. ಎರಡೂ ದೂರಿನ ಕುರಿತು ವಿಚಾರಣೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.