ADVERTISEMENT

ನಾರಾಯಣಸ್ವಾಮಿ ಅವರಿಂದ ಚಡ್ಡಿಗಳ ಮೆರವಣಿಗೆ ಮಾಡಿಸಿ ದಲಿತರಿಗೆ ಅವಮಾನ: ಶಾಂತರಾಜು

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 6:28 IST
Last Updated 10 ಜೂನ್ 2022, 6:28 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಮೈಸೂರು: 'ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರಿಂದ ಆರ್‌ಎಸ್ಎಸ್ ಚಡ್ಡಿಗಳ ಮೆರವಣಿಗೆ ಮಾಡಿಸುವ ಮೂಲಕ ಬಿಜೆಪಿಯು ದಲಿತರನ್ನು ಅವಮಾನಿಸಿದೆ' ಎಂದು ದಲಿತ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 'ನಾರಾಯಣಸ್ವಾಮಿ ಚಡ್ಡಿಗಳನ್ನು ಹೊತ್ತಿದ್ದು ಮಲ ಹೊತ್ತಿದ್ದಕ್ಕೆ ಸಮಾನವಾಗಿದೆ. ಈ ಹೋರಾಟವನ್ನು ಬಿಜೆಪಿಯಲ್ಲಿರುವ ತೇಜಸ್ವಿ ಸೂರ್ಯ‌ ಮೊದಲಾದವರಿಂದ ಮಾಡಿಸಲಿಲ್ಲವೇಕೆ?' ಎಂದು ಕೇಳಿದರು.

'ಆರ್‌ಎಸ್ಎಸ್‌ನವರು ಕೆಲವು ರಾಜಕೀಯ ‌ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಿ ನಮ್ಮನ್ನು ಒಡೆದು ಆಳುವ ನೀತಿಯನ್ನು ವ್ಯವಸ್ಥಿತವಾಗಿ ಅನುಸರಿಸುತ್ತಿದ್ದಾರೆ. ನಿಜವಾಗಿಯೂ ಸಮಾಜದ ಬಗ್ಗೆ ಕಾಳಜಿ ಇದ್ದಿದ್ದರೆ ಬಿಜೆಪಿಯಲ್ಲಿರುವ ದಲಿತ ಸಂಸದರು ಹಾಗೂ ಶಾಸಕರು ಧಿಕ್ಕರಿಸಿ ಹೊರ ಬರಬೇಕಾಗಿತ್ತು' ಎಂದರು.

ADVERTISEMENT

'ಬಿಜೆಪಿ, ಆರ್‌ಎಸ್‌ಎಸ್‌ನವರು ಅಸ್ಪೃಶ್ಯತೆ ಮುಂದುವರಿಸುತ್ತಿದ್ದಾರೆ. ಮೂಲ‌ನಿವಾಸಿಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

'ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಕೊಡುತ್ತೇವೆ ಎಂದು ಆರ್‌ಎಸ್ಎಸ್‌ನವರು ಘೋಷಿಸಲಿ' ಎಂದು ಸವಾಲು ಹಾಕಿದರು.

'ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್ 13ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಧು ಮಾದೇಗೌಡ ಯೋಗ್ಯ ಅಭ್ಯರ್ಥಿಯಾಗಿದ್ದು, ಟ್ರಸ್ಟ್‌ ಅವರನ್ನು ಬೆಂಬಲಿಸಲಿದೆ' ಎಂದು ‌ತಿಳಿಸಿದರು.

ಮುಖಂಡರಾದ ಸಿದ್ದಸ್ವಾಮಯ್ಯ, ಹೊರಳವಾಡಿ‌ ನಂಜುಂಡಸ್ವಾಮಿ ಹಾಗೂ ಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.