
ಮೈಸೂರು: ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಖಾಸಗಿಯವರು ಅಕ್ರಮವಾಗಿ ಕೆರೆ ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ತೆರವುಗೊಳಿಸಿತು.
ಬೆಳಿಗ್ಗೆ ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಜೆಸಿಬಿ ಮೂಲಕ ಒತ್ತುವರಿ ಜಾಗದಲ್ಲಿ ಹಾಕಲಾಗಿದ್ದ ಎರಡು ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಕಾಂಕ್ರೀಟ್ ಗೋಡೆಗಳನ್ನೂ ಭಾಗಶಃ ತೆರವು ಮಾಡಲಾಯಿತು.
ಈ ವೇಳೆ ಒತ್ತುವರಿ ಮಾಡಿಕೊಂಡವರು ಬಂದು ನಾವೇ ತೆರವುಗೊಳಿಸುತ್ತೇವೆ. ಸಮಯಾವಕಾಶ ನೀಡಿ ಎಂದು ಮನವಿ ಮಾಡಿದರು. ಆರಂಭದಲ್ಲಿ ಅಧಿಕಾರಿಗಳು ನಿರಾಕರಿಸಿದರು.
ಬಳಿಕ ತಹಶೀಲ್ದಾರ್ ಮಹೇಶ್ ಕುಮಾರ್, ‘ತೆರವುಗೊಳಿಸಲು ಒಂದು ದಿನ ಕಾಲಾವಕಾಶ ನೀಡುತ್ತೇವೆ. ಸೋಮವಾರ ಪರಿಶೀಲನೆಗೆ ಬರುವಾಗ ತೆರವಾಗದಿದ್ದರೆ, ಯಾವುದೇ ಅವಕಾಶ ನೀಡದೆ, ಒತ್ತುವರಿ ತೆರವುಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿ ತೆರಳಿದರು.
ಈ ಬಗ್ಗೆ ಶಾಸಕ ಟಿ.ಎಸ್.ಶ್ರೀವತ್ಸ ಧ್ವನಿ ಎತ್ತಿದ್ದರು. ‘ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆಗೆ ಹೊಂದಿಕೊಂಡಿರುವ ವಿಶೇಷ ಕೃಷಿ ವಲಯದ ಭೂಮಿಯನ್ನು ನಿಯಮ ಬಾಹಿರವಾಗಿ ವಸತಿ ವಲಯವಾಗಿ ಭೂ ಪರಿವರ್ತನೆ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಅನುಮೋದನೆ ನೀಡಿದೆ’ ಎಂದು ಆರೋಪಿಸಿದ್ದರು.
‘ರೀಬಿ ಪೀಟರ್, ರಾಣಿ ಪೀಟರ್ ಮತ್ತು ಇತರರು ಸರ್ವೆ ಸಂಖ್ಯೆ 36, 37, 47, 75ರಲ್ಲಿನ ಸುಮಾರು 50 ಎಕರೆ ಭೂಮಿಯನ್ನು ವಸತಿ ವಲಯವಾಗಿ ಪರಿವರ್ತಿಸಲು ಮತ್ತು ಕಮರ್ಶಿಯಲ್ ಉಪಯೋಗಕ್ಕೆ ಬಳಸಲು ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಂಡಿಎ 2025ರ ಆ.8ರಂದು ಸಾಮಾನ್ಯ ಸಭೆ ನಡೆಸಿ, 47 ಎಕರೆ 55 ಗುಂಟೆಯನ್ನು ಭೂ ಪರಿವರ್ತನೆಗೆ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿತ್ತು’ ಎಂದು ತಿಳಿಸಿದ್ದರು.
‘ಶಿವರಾತ್ರಿ ಹಬ್ಬ ಮುಗಿಯುವುದರೊಳಗೆ ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೇ ನಾವೇ ತೆರವು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.
‘ಈ ಸ್ಥಳದಲ್ಲಿ 6.10 ಎಕರೆ ಜಾಗ ಕೆರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಹಾಗಾಗಿ ಇಂದು ಸ್ಥಳ ಪರಿಶೀಲನೆ ಮಾಡಿದ್ದೇವೆ. ಸುಮಾರು 3 ಎಕರೆ ಜಾಗ ತೆರವುಗೊಳಿಸಿದ್ದೇವೆ. ಒತ್ತುವರಿ ಮಾಡಿದವರು ಮನವಿ ಮಾಡಿದ ಕಾರಣ, ಅವರೇ ತೆರವುಗೊಳಿಸಲು ಅವಕಾಶ ನೀಡಿದ್ದೇವೆ’ ಎಂದು ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.