ADVERTISEMENT

ಚಾಮುಂಡಿಬೆಟ್ಟದಲ್ಲಿ ಭರದ ಸಿದ್ಧತೆ- ನಿರ್ಬಂಧದ ನಡುವೆ ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 5:09 IST
Last Updated 19 ಅಕ್ಟೋಬರ್ 2021, 5:09 IST
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಉತ್ಸವಮೂರ್ತಿ
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಉತ್ಸವಮೂರ್ತಿ   

ಮೈಸೂರು: ಹಲವು ನಿರ್ಬಂಧಗಳ ನಡುವೆ ಇಲ್ಲಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ರಥೋತ್ಸವ ಮಂಗಳವಾರ ನಡೆಯಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅತ್ಯಂತ ಸರಳವಾಗಿ ಉತ್ಸವ ನೆರವೇರಲಿದೆ.

ಬೆಳಿಗ್ಗೆ 7.15ರಿಂದ 7.40ರ ಮುಹೂರ್ತದಲ್ಲಿ ರಥೋತ್ಸವ ನೆರವೇರಲಿದೆ. ದೊಡ್ಡರಥದ ಬದಲಿಗೆ ಚಿಕ್ಕರಥವನ್ನು ದೇಗುಲದ ಹೊರ ಆವರಣದಲ್ಲಿ ಒಂದು ಸುತ್ತು ಮೆರವಣಿಗೆ ನಡೆಲಾಗುತ್ತದೆ. ಈ ವೇಳೆ ದೇಗುಲದ ಅರ್ಚಕರು, ಅಧಿಕಾರಿಗಳು ಮಾತ್ರವೇ ಇರಲಿದ್ದಾರೆ.

ನಸುಕಿನ 4 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ಭಕ್ತರು ಬರುವುದನ್ನು ನಿಷೇಧಿಸಲಾಗಿದೆ. ಈ ವೇಳೆ ಖಾಸಗಿ ವಾಹನಗಳ ಪ್ರವೇಶಕ್ಕೆ ಹಾಗೂ ಮೆಟ್ಟಿಲಿನ ಮೂಲಕ ಬೆಟ್ಟಕ್ಕೆ ಬರುವುದಕ್ಕೂ ಅವಕಾಶ ಕಲ್ಪಿಸಿಲ್ಲ. ಸರ್ಕಾರಿ ವಾಹನ, ಚಾಮುಂಡಿಬೆಟ್ಟದ ಗ್ರಾಮಸ್ಥರ ವಾಹನಗಳು, ತುರ್ತು ಸೇವಾ ವಾಹನ, ರಥೋತ್ಸವ ಕಾರ್ಯಕ್ರಮಕ್ಕೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ತರುವ ವಾಹನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಪ್ರತಿ ವರ್ಷದಂತೆ ಈ ವರ್ಷವೂ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಥೋತ್ಸವಕ್ಕೆ ಚಾಲನೆ ನೀಡುವ ನಿರೀಕ್ಷೆ ಇದೆ. ನಸುಕಿನಿಂದಲೇ ದೇಗುಲದ ಒಳಗೆ ಪುರೋಹಿತರು ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಿದ್ದಾರೆ. ನಂತರ, ಮಂಟಪೋತ್ಸವ, ಹಂಸವಾಹನ, ಸಿಂಹವಾಹನೋತ್ಸವು ನೆರವೇರಲಿದೆ.

ಅ. 21ರಂದು ತೆಪ್ಪೋತ್ಸವ ನಡೆಯಲಿದ್ದು, ಇಲ್ಲೂ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ. ಸಾಂಪ್ರದಾಯಿಕ ಪೂಜೆ ಹಾಗೂ ತೀರ್ಥಸ್ನಾನಕಷ್ಟೆ ತೆಪ್ಪೋತ್ಸವ ಸೀಮಿತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.