ADVERTISEMENT

ಧಾರ್ಮಿಕ ಸಾಮರಸ್ಯದ ಚಾಮುಂಡಿ ಬೆಟ್ಟ; ಹಿಜಾಬ್ ಧರಿಸಿ ಬಂದವರಿಗೂ ಮುಕ್ತ ಅವಕಾಶ

ಹಿಜಾಬ್, ಬುರ್ಖಾ ಧರಿಸಿ ಬಂದವರಿಗೂ ಮುಕ್ತ ಅವಕಾಶ

ಕೆ.ಎಸ್.ಗಿರೀಶ್
Published 26 ಫೆಬ್ರುವರಿ 2022, 20:46 IST
Last Updated 26 ಫೆಬ್ರುವರಿ 2022, 20:46 IST
ಪ್ರತಿ ವಾರವೂ ಮೈಸೂರಿನ ಚಾಮುಂಡಿಬೆಟ್ಟ ಹತ್ತುವ ಮುಸ್ಲಿಂ ತರುಣಿಯರು.- ಪ್ರಜಾವಾಣಿ ಚಿತ್ರ: ಬಿ.ಆರ್‌.ಸವಿತಾ
ಪ್ರತಿ ವಾರವೂ ಮೈಸೂರಿನ ಚಾಮುಂಡಿಬೆಟ್ಟ ಹತ್ತುವ ಮುಸ್ಲಿಂ ತರುಣಿಯರು.- ಪ್ರಜಾವಾಣಿ ಚಿತ್ರ: ಬಿ.ಆರ್‌.ಸವಿತಾ   

ಮೈಸೂರು: ‘ಹಿಜಾಬ್ ಧರಿಸಿ ಬಂದರೆ ಶಾಲೆ, ಕಾಲೇಜುಗಳಿಗೆ ಪ್ರವೇಶವಿಲ್ಲ’ ಎನ್ನುತ್ತದೆ ಸರ್ಕಾರ. ‘ಹಿಜಾಬ್‌ ಧರಿಸಿ ಬನ್ನಿ, ಅಡ್ಡಿ ಇಲ್ಲ’ ಎನ್ನುತ್ತದೆ ಚಾಮುಂಡಿ ಬೆಟ್ಟ. ದೇವಿ ದರ್ಶನಕ್ಕೂ ಮುಕ್ತ ಅವಕಾಶ. ಬೆಟ್ಟದ ಪ್ರತಿ ಮೆಟ್ಟಿಲೂ ಹೀಗೆ ಧಾರ್ಮಿಕ ಸಾಮರಸ್ಯವನ್ನೇ ಸಾರುತ್ತಿದೆ.

ಇಲ್ಲಿಗೆ ನಿತ್ಯವೂ ಹಿಜಾಬ್, ಬುರ್ಖಾ ಧರಿಸಿ ಬರುವ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ. ಪ್ರತಿ ಭಾನುವಾರ, ರಜೆ ದಿನಗಳಲ್ಲಿ ಮುಸ್ಲಿಮ್‌ ತರುಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂಜಾನೆಯೇ ತಪ್ಪಲಿಗೆ ಬಂದು ಮೆಟ್ಟಿಲು ಹತ್ತಿ ಎಲ್ಲರೊಂದಿಗೆ ಬೆರೆಯುತ್ತಾರೆ.

ಬೆಟ್ಟದ ಮಾರ್ಗದಲ್ಲಿ ಸಿಗುವ ನಂದಿ ವಿಗ್ರಹವನ್ನು ಕಣ್ತುಂಬಿಕೊಳ್ಳುತ್ತಾರೆ. ಹಲವು ಮುಸ್ಲಿಂ ಕುಟುಂಬಗಳು ಒಟ್ಟಿಗೇ ಬರುವುದೂ ಉಂಟು. ಅವರೊಂದಿಗೆ ಚಾಮುಂಡಿಯ ಭಕ್ತರು ಸಾಮರಸ್ಯದಿಂದ ಹೆಜ್ಜೆ ಹಾಕುತ್ತಾರೆ.

ADVERTISEMENT

ಇತ್ತೀಚೆಗೆ ಬೆಟ್ಟ ಹತ್ತುತ್ತಿದ್ದ ಎಂಜಿನಿಯರ್ ಅನೀಸಾ ಹುಸ್ನ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಹಿಜಾಬ್ ಧರಿಸಿಯೇ ಪ್ರತಿ ಭಾನುವಾರ ಬೆಟ್ಟ ಹತ್ತುತ್ತೇನೆ. ಮೆಟ್ಟಿಲುಗಳಿಗೆ ಕುಂಕುಮ ಹಚ್ಚಿ ಹರಕೆ ತೀರಿಸುವ ಭಕ್ತರು ತಮ್ಮವರಂತೆಯೇ ಮಾತನಾಡಿಸಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ಅವರೊಂದಿಗಿದ್ದ ಆಹಾರ ತಜ್ಞೆ ಮೈಸರ ನುಜತ್, ಸಾಫ್ಟ್‌ವೇರ್ ಡೆವಲಪರ್ ಸಾದಿಯಾ ಮಿಜ್ಬಾ, ಸಾಫ್ಟ್‌ವೇರ್ ಎಂಜಿನಿಯರ್ ಫೈಜಾ ಸಹ ದನಿಗೂಡಿಸಿದರು. ಅವರಲ್ಲಿ ಬಹುತೇಕರು ದೂರದ ರಾಜೀವ್‌ ನಗರದವರು. ದೂರ ಎಂಬುದು ಅವರಿಗೆ ಸಮಸ್ಯೆಯೇ ಅಲ್ಲ.

ನಗರದ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ಹಾಗೂ ಮಾರಮ್ಮ ದೇವಸ್ಥಾನಗಳಿಗೂ ಮುಸ್ಲಿಮರು ಭೇಟಿ ನೀಡಿ ತಾಯಿತಗಳನ್ನು ಕಟ್ಟಿಸಿಕೊಳ್ಳುವ ಪರಿಪಾಠ ಇಂದಿಗೂ ಇದೆ. ಮುಸ್ಲಿಮರು ತಮ್ಮ ಮಕ್ಕಳು ಹಠ ಹಿಡಿದರೆ, ಅನಾರೋಗ್ಯಕ್ಕೆ ಒಳಗಾದರೆ, ಸಮೀಪದ ದೇವಾಲಯಗಳಿಗೆ ಭೇಟಿ ನೀಡಿ ತಾಯಿತಗಳನ್ನು ಕಟ್ಟಿಸಿಕೊಳ್ಳುತ್ತಾರೆ.‌

ಹಿಂದೂಗಳೂ ದರ್ಗಾಗಳಿಗೆ ಮುಸ್ಲಿಮರೊಟ್ಟಿಗೆ ಭೇಟಿ ನೀಡಿ ತಾಯಿತಗಳನ್ನು ಕಟ್ಟಿಸಿಕೊಳ್ಳುವುದು, ವಾಹನಗಳಿಗೆ ಧೂಪ ಹಾಕಿಸುವ ಸಂಪ್ರದಾಯವೂ ಇದೆ.

‘ನಾಡದೇವಿ ಎಂಬ ಅಭಿಮಾನ...’

ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಪ್ರತಿಕ್ರಿಯಿಸಿ, ‘ರಾಯಚೂರು, ಕಲಬುರಗಿ, ದಾವಣಗೆರೆ ಭಾಗಗಳಿಂದ ಕೋವಿಡ್‌ಗೂ ಮುಂಚಿತವಾಗಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿ ಬಂದು ದರ್ಶನ ಪಡೆಯುತ್ತಿದ್ದರು. ಚಾಮುಂಡಿ ನಮ್ಮ ನಾಡದೇವತೆ ಎಂದು ಅಭಿಮಾನದಿಂದಲೇ ಹೇಳುತ್ತಿದ್ದರು. ಅಂಥ ಕೆಲವು ಗುಂಪುಗಳನ್ನು ವರ್ಷಕ್ಕೆ ನಾಲ್ಕಾರು ಬಾರಿಯಾದರೂ ನೋಡುತ್ತಿದ್ದೆ. ಆದರೆ, ಕೋವಿಡ್ ಬಂದ ನಂತರ ಅಂಥ ಭಕ್ತರು ಬಂದಿರುವುದು ಬಹಳ ಕಡಿಮೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.