ADVERTISEMENT

ಎಲ್ಲರೊಳಗೂಡಿ ನಾಡು ಕಟ್ಟೋಣ: ಸಿಎಂ

ಸಪ್ತಮಾತೃಕಾ ದೇವಿರಮ್ಮನವರ ರಾಜಗೋಪುರ ಉದ್ಘಾಟನೆಯಲ್ಲಿ ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 17:30 IST
Last Updated 27 ಜನವರಿ 2020, 17:30 IST
ಕೆ.ಆರ್.ನಗರ ತಾಲ್ಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸೋಮವಾರ ನಡೆದ ಸಪ್ತಮಾತೃಕಾ ದೇವಿರಮ್ಮನ ರಾಜಗೋಪುರ, ಬೊಮ್ಮರಾಯಸ್ವಾಮಿ, ಕಪ್ಪುರಾಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರ 28ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀರಸೋಮೇಶ್ವರ ಸ್ವಾಮೀಜಿಗೆ ಬೆಳ್ಳಿ ಉಂಗುರ ತೊಡಿಸಿ ಸನ್ಮಾನಿಸಿದರು-/ PHOTO BY B R SAVITHA
ಕೆ.ಆರ್.ನಗರ ತಾಲ್ಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸೋಮವಾರ ನಡೆದ ಸಪ್ತಮಾತೃಕಾ ದೇವಿರಮ್ಮನ ರಾಜಗೋಪುರ, ಬೊಮ್ಮರಾಯಸ್ವಾಮಿ, ಕಪ್ಪುರಾಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರ 28ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀರಸೋಮೇಶ್ವರ ಸ್ವಾಮೀಜಿಗೆ ಬೆಳ್ಳಿ ಉಂಗುರ ತೊಡಿಸಿ ಸನ್ಮಾನಿಸಿದರು-/ PHOTO BY B R SAVITHA   

ದೇವಿತಂದ್ರೆ: ‘ಅಭಿವೃದ್ಧಿಯಲ್ಲಿ ಹಿಂದಿದ್ದೇವೆ. ಸಮಸ್ಯೆಗಳು ಪರಿಹಾರವಾಗುವ ವಿಶ್ವಾಸವಿದೆ. ಎಲ್ಲರೊಳಗೂಡಿ ಸಮೃದ್ಧ ನಾಡು ಕಟ್ಟಲು ಮುಂದಾಗೋಣ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಇಲ್ಲಿ ಹೇಳಿದರು.

ಗ್ರಾಮದ ಸಪ್ತಮಾತೃಕಾ ದೇವಿರಮ್ಮನವರ ರಾಜಗೋಪುರ ಉದ್ಘಾಟನೆ, ಬೊಮ್ಮರಾಯಸ್ವಾಮಿ–ಕಪ್ಪುರಾಯಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ವೀರಶೈವ ಧರ್ಮ ನಮಗಾಗಿರುವುದಲ್ಲ. ದಲಿತರು, ಹಿಂದುಳಿದವರ ಉದ್ಧಾರಕ್ಕಾಗಿ ಶ್ರಮಿಸುವ ಧರ್ಮ’ ಎಂದರು.

‘ಧರ್ಮ, ಸಂಸ್ಕೃತಿ, ಆಚಾರ–ವಿಚಾರ, ಪರಂಪರೆ ಇಂದಿಗೂ ಉಳಿದಿದೆ ಎಂದರೇ ತಾಯಂದಿರ ಪರಿಶ್ರಮದಿಂದ. ಪ್ರತಿಯೊಬ್ಬ ತಾಯಿಯೂ ತಮ್ಮ ಮಕ್ಕಳನ್ನು ಸೂಕ್ತ ಮಾರ್ಗದರ್ಶನದಲ್ಲಿ ಬೆಳೆಸಿ, ಸಮಾಜದ ಶಕ್ತಿಯನ್ನಾಗಿಸಬೇಕಿದೆ’ ಎಂದು ಯಡಿಯೂರಪ್ಪ ಕಿವಿಮಾತು ಹೇಳಿದರು.

ADVERTISEMENT

‘ಹಿಂದೂ ಧರ್ಮದ ಪರಂಪರೆಯಲ್ಲೇ ವೀರಶೈವ ಧರ್ಮವೂ ಒಂದಾಗಿದೆ. ಬಾಳೆಹೊನ್ನೂರಿನ ರಂಭಾಪುರಿ ಪೀಠ ವೀರಶೈವ ಧರ್ಮದ ಪ್ರಾಚೀನ ಪೀಠಗಳಲ್ಲೊಂದು. ಮಾನವ ಧರ್ಮದ ಆದರ್ಶಗಳನ್ನು ಪಾಲಿಸುತ್ತಿದೆ. ಹಿಂದೂ ಧರ್ಮಕ್ಕೆ, ಭಾರತೀಯತೆಗೆ ಅಪಾರ ಕೊಡುಗೆ ನೀಡಿದೆ. ಸಮನ್ವಯತೆಗೆ ತನ್ನದೇ ಕಾಣಿಕೆ ಕೊಟ್ಟಿದೆ. ಸ್ವಾಮೀಜಿಯವರ ಧರ್ಮ ಪ್ರಜ್ಞೆ ಪ್ರೇರಣಾದಾಯಕವಾದುದಾಗಿದೆ. ನಿರಂತರ ಪ್ರವಾಸದ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ‘ಎಲ್ಲವನ್ನೂ ಎದುರಿಸಿ ನಿಲ್ಲೋ ಶಕ್ತಿ ಯಡಿಯೂರಪ್ಪ ಅವರಿಗಿದೆ. ನಾನು ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಶೀತಪೀಡಿತ ಬೀಚನಹಳ್ಳಿ ಗ್ರಾಮ ಸ್ಥಳಾಂತರಿಸಿದ್ದೆ. ಇದೀಗ ತಂದ್ರೆ ಅಂಕನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿ, ತಮಗಾದ ತೊಂದರೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವೆ’ ಎಂದು ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಸಿ.ಎಚ್.ವಿಜಯಶಂಕರ್, ರಾಣಿ ಸತೀಶ್‌, ಜಿ.ಪಂ.ಸದಸ್ಯರಾದ ಡಿ.ರವಿಶಂಕರ್, ಅಮಿತ್ ದೇವರಟ್ಟಿ ಉಪಸ್ಥಿತರಿದ್ದರು. ಶಾಸಕ ಸಾ.ರಾ.ಮಹೇಶ್‌ ಅಧ್ಯಕ್ಷತೆ ವಹಿಸಿದ್ದರು. ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.