ADVERTISEMENT

ಸರಗೂರು: ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಇಂದಿನಿಂದ

ಎಸ್.ಆರ್.ನಾಗರಾಮ
Published 30 ಮಾರ್ಚ್ 2025, 8:52 IST
Last Updated 30 ಮಾರ್ಚ್ 2025, 8:52 IST
<div class="paragraphs"><p>ಸರಗೂರು ತಾಲ್ಲೂಕು ಚಿಕ್ಕದೇವಮ್ಮ ಬೆಟ್ಟದಲ್ಲಿರುವ ದೇವಸ್ಥಾನ</p></div>

ಸರಗೂರು ತಾಲ್ಲೂಕು ಚಿಕ್ಕದೇವಮ್ಮ ಬೆಟ್ಟದಲ್ಲಿರುವ ದೇವಸ್ಥಾನ

   

ಸರಗೂರು: ತಾಲ್ಲೂಕಿನ ಹಾಲುಗಡು ಮತ್ತು ಇಟ್ನ ಗ್ರಾಮದಲ್ಲಿ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವವು ಇಂದಿನಿಂದ(ಮಾರ್ಚ್ 30) ಮೂರು ದಿನಗಳವರೆಗೆ ಅದ್ದೂರಿಯಾಗಿ ನಡೆಯಲಿದ್ದು, ಸಂಭ್ರಮ ಮನೆಮಾಡಿದೆ.

ಇಟ್ನ ಚಿಕ್ಕದೇವಮ್ಮನವರ ದೇವಸ್ಥಾನದ ಸೇವಾಭಿವೃದ್ಧಿ ಹಾಗೂ ಹಾಲುಗಡು ಜಾತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ADVERTISEMENT

ಮಾರ್ಚ್‌ 30ರಂದು, ಭಾನುವಾರ ಚಾಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ಚಿಕ್ಕದೇವಮ್ಮನ ಬೆಟ್ಟದಿಂದ ಅಮ್ಮನವರನ್ನು ತಂದು ಹಾಲುಗಡುವಿನ ಜಪ್ಪದಕಟ್ಟೆಯಲ್ಲಿ ಪೂಜಿಸಿ ಮಧ್ಯಾಹ್ನ 3 ಗಂಟೆವರೆಗೆ ಜಾತ್ರೆ ನಡೆಸಲಾಗುವುದು. ಬಳಿಕ ಅಮ್ಮನವರನ್ನು ಗೂಳಿ ಮಂಟಪದಲ್ಲಿ, ಹಾಲಿ ಮಂಟಪದಲ್ಲಿ ಪೂಜಿಸಲಾಗುವುದು. ಸಂಜೆ 4ಕ್ಕೆ ಹಾಲುಗಡುವಿನಿಂದ ಇಟ್ನ ಗ್ರಾಮಕ್ಕೆ ತಂದು ಮಠದ ಹೊಲದ ಮಂಟಪದಲ್ಲಿ ಪೂಜಿಸಲಾಗುತ್ತದೆ.

ರಾತ್ರಿ 9ಕ್ಕೆ ವಿವಿಧ ಕಲಾತಂಡಗಳ ಸಮೇತ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬೆಳಗಿನಜಾವ 4 ಗಂಟೆಗೆ ಮಾರಮ್ಮನ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.

ಮಾರ್ಚ್‌ 31ರಂದು ಸೋಮವಾರ ಬೆಳಿಗ್ಗೆ 8ಕ್ಕೆ ಕಪಿಲಾ ನದಿಯಲ್ಲಿ ತೀರ್ಥೋತ್ಸವ, ಕುಂಕುಮಾರ್ಚನೆ, ಮಹಾ ಮಂಗಳಾರತಿ ಪೂಜೆ ಸಲ್ಲಿಸಿ ಸತ್ತಿಗೆಗಳು, ಕೀಲು ಕುದುರೆ, ಮೈಸೂರಿನ ಸುಪ್ರಸಿದ್ಧ ಭಾರತ್ ಬ್ರಾಸ್ ಬ್ಯಾಂಡ್‌ಸೆಟ್, ಚಿಕ್ಕಮಂಗಳೂರಿನ ಮಹಿಳಾ ವೀರಗಾಸೆ, ಮೈಸೂರಿನ ವೀರಗಾಸೆ, ಚಾಮರಾಜನಗರದ ಡೊಳ್ಳುಕುಣಿತ, ವಾದ್ಯಗೋಷ್ಠಿ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಜೆ 6ಕ್ಕೆ ಮಠದ ಹೊಲದ ಮಂಟಪದಲ್ಲಿ ಪೂಜಿಸಲಾಗುವುದು.

ಏ.1ರಂದು ಅಮ್ಮನವರನ್ನು ಚಿಕ್ಕದೇವಮ್ಮ ಬೆಟ್ಟಕ್ಕೆ ತರಲಾಗುತ್ತದೆ.

ಜಾತ್ರಾ ಮಹೋತ್ಸವಕ್ಕೆ ಮೈಸೂರು, ಎಚ್.ಡಿ.ಕೋಟೆ ಮತ್ತು ಸರಗೂರಿನಿಂದ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಅನ್ನದಾನ, ನಾಟಕ ನಾಳೆ

ಮಾರ್ಚ್ 31ರಂದು ಜಾತ್ರೆ ಪ್ರಯುಕ್ತ ಬರುವ ಭಕ್ತಾದಿಗಳಿಗೆ ಇಟ್ನ ಗ್ರಾಮದ ಕಪಿಲಾ ನದಿಯ ತೀರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಅನ್ನದಾನವನ್ನು ಏರ್ಪಡಿಸಲಾಗಿದೆ.

ರಾತ್ರಿ 8.30ಕ್ಕೆ ಇಟ್ನ ಗ್ರಾಮದ ಚಿಕ್ಕದೇವಮ್ಮ ಕೃಪಾ ಪೋಷಿತಾ ನಾಟಕ ಮಂಡಳಿ ವತಿಯಿಂದ ಸಂಸಾರ ಬಂಧನ ಅಥವಾ ‘ಅಣ್ಣನ ಸೇಡು ತಂಗಿಯ ಕಣ್ಣೀರು’ ಎಂಬ ಸಾಮಾಜಿಕ ನಾಟಕವನ್ನು ಏರ್ಪಡಿಸಲಾಗಿದೆ. ಶಾಸಕ ಅನಿಲ್ ಚಿಕ್ಕಮಾದು ಭಾಗವಹಿಸುವರು. 

ಹಾಲುಗಡು ಮತ್ತು ಇಟ್ಟ ಗ್ರಾಮದಲ್ಲಿ ನಡೆಯುವ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ
– ದಯಾನಂದ ಸ್ವಾಮೀಜಿ,ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.