ಮೈಸೂರು: ‘ಅಪಘಾತದಿಂದ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಮೊದಲ ಹಾಗೂ ಬಿಹಾರ ಎರಡನೇ ಸ್ಥಾನದಲ್ಲಿದ್ದು, ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಮೃತ ಮಕ್ಕಳಲ್ಲಿ ಶೇ 94ರಷ್ಟು ಮಂದಿ ಹೆಲ್ಮೆಟ್ ಇಲ್ಲವೇ ಸೀಟ್ ಬೆಲ್ಟ್ ಧರಿಸಿರುವುದಿಲ್ಲ. ದೇಶದಲ್ಲಿ ಮಕ್ಕಳಿಗೆಂದೇ ಹೆಲ್ಮೆಟ್ ತಯಾರಿಸುವ ಕಂಪನಿಗಳೂ ಇಲ್ಲ’ ಎಂದು ಯುನಿಸೆಫ್ ಪ್ರತಿನಿಧಿ ಡಾ. ಶ್ರೀಧರ್ ಪ್ರಹ್ಲಾದ್ ರೇವಂಕಿ ವಿಷಾದಿಸಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಯುನಿಸೆಫ್ ಸಹಭಾಗಿತ್ವದಲ್ಲಿ ಮೈಸೂರು ವಿಭಾಗದ ಪತ್ರಕರ್ತರಿಗಾಗಿ ಆಯೋಜಿಸಿದ್ದ ‘ಹದಿಹರೆಯದವರ ಆರೋಗ್ಯ, ಪೌಷ್ಟಿಕತೆ: ಸಾಂಕ್ರಾಮಿಕವಲ್ಲದ ಕಾಯಿಲೆ ಮತ್ತು ರಸ್ತೆ ಸುರಕ್ಷತೆ’ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ಮಕ್ಕಳು ಹಾಗೂ ರಸ್ತೆ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು.
‘ದೇಶದಲ್ಲಿ ಪ್ರತಿ ವರ್ಷ ಸರಾಸರಿ 16 ಸಾವಿರ ಮಕ್ಕಳು ಅಪಘಾತಗಳಿಂದ ಮೃತಪಡುತ್ತಿದ್ದು, 5 ಲಕ್ಷ ಮಂದಿ ಗಾಯಗೊಳ್ಳುತ್ತಿದ್ದಾರೆ. ಸಂಚಾರ ನಿಯಮಗಳ ಬಗೆಗಿನ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ’ ಎಂದು ಹೇಳಿದರು.
‘ದೇಶದಲ್ಲಿ 9ರಿಂದ 19 ವರ್ಷದ ಒಳಗಿನವರ ಸಾವಿಗೆ ಅಪಘಾತವೇ ಪ್ರಮುಖ ಕಾರಣ. ಹತ್ತು ವರ್ಷದಲ್ಲಿ ಸಾವಿನ ಪ್ರಮಾಣ ದ್ವಿಗುಣಗೊಂಡಿದೆ. 14-17ನೇ ವಯಸ್ಸಿನವರು ಅಪಘಾತದಲ್ಲಿ ಹೆಚ್ಚು ಮೃತಪಡುತ್ತಿದ್ದಾರೆ. ಅಪ್ರಾಪ್ತರಿಂದ ವಾಹನ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚಾಗಿದೆ’ ಎಂದು ವಿವರಿಸಿದರು.
‘ಮಕ್ಕಳ ಅಪಘಾತ ಹಾಗೂ ಸಾವಿನಲ್ಲಿ ಶೇ 55ರಷ್ಟು ಪ್ರಕರಣಗಳು ಹೆದ್ದಾರಿಗಳಲ್ಲಿ ಹಾಗೂ ಶೇ 30ರಷ್ಟು ಪ್ರಕರಣಗಳು ಪ್ರಮುಖ ಜಂಕ್ಷನ್‌ಗಳಲ್ಲಿ ಸಂಭವಿಸುತ್ತಿವೆ. ರಾಜ್ಯದಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿ ಗಾಯಾಳುಗಳ ಉಪಚಾರಕ್ಕೆ ಮಕ್ಕಳ ತಜ್ಞರು ಲಭ್ಯರಿಲ್ಲ. ಕೇವಲ ಶೇ 20ರಷ್ಟು ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಷ್ಟೇ ಈ ತಜ್ಞರಿದ್ದಾರೆ’ ಎಂದರು.
ಮಕ್ಕಳ ಸಮಸ್ಯೆಗಳು ಮತ್ತು ಅವರ ಮೇಲಿನ ದೌರ್ಜನ್ಯ ಕುರಿತ ವರದಿಗಾರಿಕೆ ವೇಳೆ ಅನುಸರಿಸಬೇಕಾದ ನಿಯಮಗಳ ಕುರಿತು ಸಂಯೋಜಕಿ ಪ್ರೊ. ಎಂ.ಎಸ್. ಸಪ್ನಾ ಮಾತನಾಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಯುನಿಸೆಫ್‌ನ ಪ್ರತಿನಿಧಿ ಪ್ರೊಸುನ್ ಸೇನ್ ಹಾಗೂ ಮೈಸೂರು ವಿ.ವಿ. ಪ್ರಾಧ್ಯಾಪಕಿ ಜ್ಯೋತಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ತೆಲಂಗಾಣ ಸರ್ಕಾರವು ಶಾಲಾ ಪಠ್ಯದಲ್ಲಿ ರಸ್ತೆ ಸುರಕ್ಷತೆ ವಿಷಯವನ್ನೂ ಅಳವಡಿಸಿದೆ. ನಮ್ಮಲ್ಲೂ ಈ ರೀತಿಯ ಪ್ರಯತ್ನಗಳ ಅಗತ್ಯವಿದೆಡಾ.ಶ್ರೀಧರ್ ಪ್ರಹ್ಲಾದ್ ರೇವಂಕಿ, ಯುನಿಸೆಫ್ ಪ್ರತಿನಿಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.