ADVERTISEMENT

ಮೈಸೂರು | ‘ಶಾಲಾರಂಗ ಮಕ್ಕಳ ಹಬ್ಬ’ಕ್ಕೆ ಚಾಲನೆ: ಮನಸೆಳೆದ ಚಿಣ್ಣರ ರಂಗಪ್ರಯೋಗ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 6:43 IST
Last Updated 15 ಡಿಸೆಂಬರ್ 2024, 6:43 IST
ಶಾಲಾರಂಗ ಮಕ್ಕಳ ಹಬ್ಬದ ಉದ್ಘಾಟನೆಯಲ್ಲಿ ಮಕ್ಕಳೊಟ್ಟಿಗೆ ನೆಲೆಹಿನ್ನಲೆ ಗೋಪಾಲ್‌, ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಪ್ರೊ.ತುಕಾರಾಂ, ಸತೀಶ್‌ ತಿಪಟೂರು, ಪ್ರಕಾಶ್‌ ರಾಜ್‌ ಹಾಗೂ ಕೆ.ದೀಪಕ್‌ ಪಾಲ್ಗೊಂಡರು– ಪ್ರಜಾವಾಣಿ ಚಿತ್ರ
ಶಾಲಾರಂಗ ಮಕ್ಕಳ ಹಬ್ಬದ ಉದ್ಘಾಟನೆಯಲ್ಲಿ ಮಕ್ಕಳೊಟ್ಟಿಗೆ ನೆಲೆಹಿನ್ನಲೆ ಗೋಪಾಲ್‌, ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಪ್ರೊ.ತುಕಾರಾಂ, ಸತೀಶ್‌ ತಿಪಟೂರು, ಪ್ರಕಾಶ್‌ ರಾಜ್‌ ಹಾಗೂ ಕೆ.ದೀಪಕ್‌ ಪಾಲ್ಗೊಂಡರು– ಪ್ರಜಾವಾಣಿ ಚಿತ್ರ   

ಮೈಸೂರು: ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದ ತುಂಬೆಲ್ಲ ಶನಿವಾರ ಮಕ್ಕಳ ಕಲರವ. ರಂಗಮಂದಿರದ ಒಳಗೆ ನಾನಾ ರಂಗಪ್ರಯೋಗಗಳ ಸದ್ದು ಜೋರಾಗಿದ್ದರೆ, ಹೊರಗೆ ಹಾಡು–ಕುಣಿತದ ಸಂಭ್ರಮ ಇಮ್ಮಡಿಯಾಗಿತ್ತು.

ನಿರ್ದಿಗಂತ ಸಂಸ್ಥೆಯು ಆಯೋಜಿಸಿರುವ ಎರಡು ದಿನಗಳ ‘ಶಾಲಾರಂಗ ಮಕ್ಕಳ ಹಬ್ಬ’ಕ್ಕೆ ಇಲ್ಲಿ ಬೆಳಿಗ್ಗೆ ಚಾಲನೆ ನೀಡಲಾಯಿತು. ಬಣ್ಣದ ಗೀತೆಯೊಂದಿಗೆ ಈ ಹಬ್ಬಕ್ಕೆ ಚಾಲನೆ ದೊರೆತಿದ್ದು, ಸಂವಿಧಾನ ಪೀಠಿಕೆಯನ್ನು ರಾಗಬದ್ಧವಾಗಿ ಹಾಡುವ ಮೂಲಕ ಮಕ್ಕಳು ಎಲ್ಲರ ಗಮನ ಸೆಳೆದರು. ದಿನವಿಡೀ ನಡೆದ ರಂಗಪ್ರಯೋಗಗಳು, ರಂಗಗೀತೆಗಳ ಗಾಯನವು ಮಕ್ಕಳನ್ನು ಮಾತ್ರವಲ್ಲದೇ ಹಿರಿಯರೂ ತಲೆದೂಗುವಂತೆ ಇದ್ದವು.

ನಿರ್ದಿಗಂತ ಸಂಸ್ಥೆಯು ‘ಶಾಲಾ ರಂಗವಿಕಾಸ’ ಎಂಬ ಯೋಜನೆ ಅಡಿ ರಾಜ್ಯದ ಆಯ್ದ ಐದು ಶಾಲೆಗಳ 150 ಮಕ್ಕಳಿಗೆ ರಂಗ ತರಬೇತಿ ನೀಡಿದ್ದು, ಆ ತರಬೇತಿಯ ಪ್ರತಿಫಲವಾಗಿ ಮೂಡಿಬಂದ ಮೂರು ಸುಂದರ ನಾಟಕಗಳು ಕಿರುರಂಗಮಂದಿರದಲ್ಲಿ ಮೊದಲ ದಿನದಂದು ಪ್ರದರ್ಶನಗೊಂಡವು.

ADVERTISEMENT

ಕಾರ್ಯಕ್ರಮದ ಉದ್ಘಾಟನೆ ಮುಗಿಯುತ್ತಲೇ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಆರೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ರಿಂಗಿನಾಟ’ ನಾಟಕವು ಪ್ರೇಕ್ಷಕರಿಂದ ತುಂಬು ಚಪ್ಪಾಳೆ ಗಿಟ್ಟಿಸಿತು. ಬಿಂದು ರಕ್ಷಿದಿ ನಿರ್ದೇಶನದಲ್ಲಿ ಮೂಡಿಬಂದ ಮುಕ್ಕಾಲು ಗಂಟೆಯ ಪುಟ್ಟ ರಂಗಪ್ರಯೋಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಮಿಂಚಿದರು.

ಮಧ್ಯಾಹ್ನ 3ಕ್ಕೆ ಹೊನ್ನಾವರದ ಅಳ್ಳಂಕಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ಮಹಾಂತೇಶ್ ಮಾದರ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಧರಣಿ ಮಂಡಲ’ ಹಾಗೂ ಸಂಜೆ ಪಿರಿಯಾಪಟ್ಟಣ ತಾಲ್ಲೂಕಿನ ಗಿರಗೂರಿನ ಮಿಳಿಂದ ಶಾಲೆಯ ವಿದ್ಯಾರ್ಥಿಗಳು ರವಿ ಅಥರ್ವ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ‘ಚೋರ ಚರಣದಾಸ’ ನಾಟಕಗಳೂ ಮಕ್ಕಳ ರಂಗಪ್ರತಿಭೆಗೆ ಸಾಕ್ಷಿಯಾದವು.

ಕೇವಲ ನಾಟಕಗಳು ಮಾತ್ರವಲ್ಲದೇ, ಐದೂ ಶಾಲೆಗಳ ವಿದ್ಯಾರ್ಥಿಗಳು ತಾವು ಶಿಬಿರದಲ್ಲಿ ಕಲಿತ ಗೀತೆಗಳನ್ನು ಕೇಳುಗರೆದರು ಪ್ರಸ್ತುತಪಡಿಸಿದರು. ಸಂಜೆ ಇದೇ ಮಕ್ಕಳಿಂದ ಕಾವ್ಯಾಭಿನಯ ಮತ್ತು ಕಥಾಭಿನಯ ಹಾಗೂ ನಂತರದಲ್ಲಿ ನಿರ್ದಿಗಂತ ತಂಡದಿಂದ ‘ಕಿಂದರಿಜೋಗಿ’ ಗೀತೆಗಳು ಮೂಡಿಬಂದವು.

ಚಾಲನೆ: ಉದ್ಭಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ‘ಕುಟುಂಬದಲ್ಲಿ ಮಕ್ಕಳು ಪ್ರಮುಖ ಭಾಗ ಎಂಬುದನ್ನೇ ನಾವು ಮರೆತಿದ್ದೇವೆ. ಅವರನ್ನು ನಿರ್ಲಕ್ಷಿಸುವ ಸಂಗತಿಗಳು ಹೆಚ್ಚುತ್ತಿವೆ. ಮಕ್ಕಳ ರಂಗಭೂಮಿಯತ್ತ ಜನರ ಚಿತ್ತ ಹರಿಯಬೇಕಿದೆ’ ಎಂದು ಆಶಿಸಿದರು.

ಚಿಂತಕ ಪ್ರೊ.ತುಕಾರಂ ‘ ಇಂದು ನಾವು ನಗುವುದನ್ನೇ ಮರೆತಿದ್ದೇವೆ. ಆದರೆ ಈ ಹಬ್ಬದಲ್ಲಿ ಬರೀ ನಗು ತುಂಬಿದೆ. ಮಕ್ಕಳು ಇರುವ ಜಾಗದಲ್ಲಿ ನಗುವಿಗೆ ಬರವಿಲ್ಲ’ ಎಂದರು.

ಶಾಲಾರಂಗದ ಆಶಯಗಳ ಕುರಿತು ಮಾತನಾಡಿದ ನಿರ್ದಿಗಂತ ಸಂಸ್ಥೆಯ ಸ್ಥಾಪಕ ಹಾಗೂ ನಟ ಪ್ರಕಾಶ್‌ ರಾಜ್, ‘ಮಕ್ಕಳ ಮನೋವಿಕಾಸ ಹೆಚ್ಚಿಸಿ ಅವರ ಗ್ರಹಿಕೆಯನ್ನು ಉತ್ತಮಪಡಿಸಲು ರಂಗಭೂಮಿಗಿಂತ ಮತ್ತೊಂದು ಮಾಧ್ಯಮ ಇಲ್ಲ. ಈ ವಿಚಾರದಲ್ಲಿ ಆಗಬೇಕಾದ ಕೆಲಸ ಬೆಟ್ಟದಷ್ಟಿದ್ದು, ನಿರ್ದಿಗಂತದ ಈ ಪ್ರಯತ್ನ ಅದರಲ್ಲಿ ಒಂದು ಅಂಶವಷ್ಟೇ’ ಎಂದರು.

‘ರಂಗವಿಕಾಸ ಕಾರ್ಯಕ್ರಮವು ಈಗಾಗಲೇ 110ಕ್ಕೂ ಹೆಚ್ಚು ಶಾಲೆಗಳನ್ನು ತಲುಪಿದೆ. ರಂಗ ಶಿಕ್ಷಣದ ಕುರಿತು ಪಠ್ಯಕ್ರಮ ರೂಪಿಸುವ ಪ್ರಯತ್ನವಾಗಿ ಈ ತಿಂಗಳಾಂತ್ಯದಲ್ಲಿ ನಿರ್ದಿಗಂತದಲ್ಲಿ ಮೂರು ದಿನಗಳ ಕಾಲ ಚರ್ಚೆ ಆಯೋಜಿಸಿದ್ದು, ಅಲ್ಲಿನ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಸರ್ಕಾರ ಹಾಗೂ ಸಂಘ–ಸಂಸ್ಥೆಗಳ ಜೊತೆ ಹಂಚಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಚಿಂತಕ ದೇವನೂರು ಬಸವರಾಜು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಾಧ್ಯಾಪಕ ಪ್ರಸನ್ನ ಕೆರಗೋಡು ಇದ್ದರು.

ಮಕ್ಕಳು ಕೂಡ ಸಮಾಜದ ಒಂದು ಭಾಗ. ಹಾಗಾಗಿ ಅವರು ನೋಡುವ ಪ್ರಪಂಚವನ್ನು ನಾವೆಲ್ಲರೂ ಗ್ರಹಿಸಬೇಕು. ಈ ನಿಟ್ಟಿನಲ್ಲಿ ನಿರ್ದಿಗಂತ ಕಾರ್ಯ ಸ್ವಾಗತಾರ್ಹ
-ಸತೀಶ್‌ ತಿಪಟೂರು, ರಂಗಾಯಣ ನಿರ್ದೇಶಕ
ಮಕ್ಕಳ ರಂಗಭೂಮಿಯನ್ನು ಎಲ್ಲರೂ ಕಡೆಗಣಿಸಿದ್ದಾರೆ. ಆದರೆ ಮಕ್ಕಳೇ ನಮಗೆ ಪಾಠ ಕಲಿಸುವ ಸಮಯ ಬಂದಿದೆ. ಈ ಹಬ್ಬ ಕೇವಲ ನಾಟಕ ಪ್ರದರ್ಶನವಲ್ಲ ರಂಗಭೂಮಿ ಶಿಕ್ಷಣ ನೀಡುವ ಪ್ರಯತ್ನ
-ಪ್ರಕಾಶ್‌ ರಾಜ್‌, ನಿರ್ದಿಗಂತ ಸಂಸ್ಥೆ ಸಂಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.