ADVERTISEMENT

ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ: ಸಕಲ ಸಿದ್ಧತೆ

ಬಾಗಿಲು ತೆರೆಯದ ಸಿನಿಮಾ ಮಂದಿರ; ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಆಗ್ರಹ

ಡಿ.ಬಿ, ನಾಗರಾಜ
Published 15 ಅಕ್ಟೋಬರ್ 2020, 5:01 IST
Last Updated 15 ಅಕ್ಟೋಬರ್ 2020, 5:01 IST
ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ ಗುರುವಾರದಿಂದ ಸಿನಿಮಾ ಪ್ರದರ್ಶನಕ್ಕೆ ನಡೆದಿರುವ ಸಿದ್ಧತೆ (ಎಡಚಿತ್ರ). ಒಬ್ಬರ ಪಕ್ಕ ಒಬ್ಬರು ಕೂರದಂತೆ ಟೇಪ್ ಹಾಕಿರುವುದು
ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ ಗುರುವಾರದಿಂದ ಸಿನಿಮಾ ಪ್ರದರ್ಶನಕ್ಕೆ ನಡೆದಿರುವ ಸಿದ್ಧತೆ (ಎಡಚಿತ್ರ). ಒಬ್ಬರ ಪಕ್ಕ ಒಬ್ಬರು ಕೂರದಂತೆ ಟೇಪ್ ಹಾಕಿರುವುದು   

ಮೈಸೂರು: ಮೈಸೂರಿನ ಮಲ್ಟಿಪ್ಲೆಕ್ಸ್‌ಗಳು ಗುರುವಾರದಿಂದಲೇ (ಅ.15) ತಮ್ಮಲ್ಲಿನ ಎಲ್ಲ ಸ್ಕ್ರೀನ್‌ಗಳಲ್ಲೂ ಚಲನಚಿತ್ರ ಪ್ರದರ್ಶಿಸಲಿವೆ.

ಸಿನಿಮಾ ಪ್ರದರ್ಶನಕ್ಕಾಗಿ ಕೇಂದ್ರ– ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಕ್ರಮ ಕೈಗೊಂಡಿವೆ.

‘ನಮ್ಮಲ್ಲಿನ ಎಲ್ಲ ಸ್ಕ್ರೀನ್‌ಗಳಲ್ಲೂ ಚಲನಚಿತ್ರ ಪ್ರದರ್ಶಿಸಲಾಗುವುದು. ಐದು ಪ್ರದರ್ಶನದ ಬದಲು ನಿಗದಿತ ಸಮಯದಲ್ಲಿ ಮೂರು ಪ್ರದರ್ಶನ ನಡೆಸಲಾಗುವುದು’ ಎಂದು ಡಿಆರ್‌ಸಿಯ ವೈಶಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪ್ರತಿ ಸ್ಕ್ರೀನ್‌ನ ಆಸನಗಳ ಸಾಮರ್ಥ್ಯದಲ್ಲಿ ಅರ್ಧದಷ್ಟು ಆಸನಗಳಿಗೆ ಮಾತ್ರ ವೀಕ್ಷಕರಿಗೆ ಅವಕಾಶ ಕೊಡುತ್ತೇವೆ. ಒಬ್ಬರ ಪಕ್ಕ ಒಬ್ಬರು ಕೂರುವಂತಿಲ್ಲ. ಟೇಪ್‌ ಹಾಕುವ ಮೂಲಕ ಆ ಕುರ್ಚಿಗಳಿಗೆ ಪ್ರೇಕ್ಷಕರು ಕೂರದಂತೆ ಕ್ರಮ ತೆಗೆದುಕೊಂಡಿದ್ದೇವೆ. ಟಿಕೆಟ್‌ ಸೇರಿದಂತೆ ಇನ್ನಿತರೆ ಎಲ್ಲ ವಹಿವಾಟನ್ನು ನಗದು
ವ್ಯವಹಾರದ ಬದಲು ಡಿಜಿಟಲ್‌ ಪಾವತಿ ಮೂಲಕವೇ ನಡೆಸಲು ಹೆಚ್ಚಿನ ಒತ್ತು ನೀಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಪ್ರತಿಯೊಬ್ಬ ವೀಕ್ಷಕರ ಥರ್ಮಲ್‌ ಸ್ಕ್ರೀನಿಂಗ್ ನಡೆಸಲಾಗುವುದು. ಪ್ರತಿ ಪ್ರದರ್ಶನ ಮುಗಿದ ಬಳಿಕ ಸ್ಯಾನಿಟೈಸ್‌ ಮಾಡಲಾಗುವುದು. ಸಿನಿಮಾ ಮುಗಿದ ಬಳಿಕವೂ ಎಲ್ಲರೂ ಒಟ್ಟಿಗೆ ಹೊರಬರದ ರೀತಿ ಕ್ರಮ ತೆಗೆದುಕೊಂಡಿದ್ದೇವೆ. ಒಬ್ಬೊಬ್ಬರೇ ಸರತಿಯಲ್ಲಿ ಹೊರಹೋಗುವಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಸಿಬ್ಬಂದಿಗೂ ಸೂಚನೆ ನೀಡಿದ್ದೇವೆ’ ಎಂದು ಹೇಳಿದರು.

‘ಗುರುವಾರ ಕನ್ನಡ, ಹಿಂದಿ, ತಮಿಳು ಚಲನಚಿತ್ರಗಳನ್ನು ಬೆಳಿಗ್ಗೆ 11, ಸಂಜೆ 4, ರಾತ್ರಿ 8 ಗಂಟೆಗೆ ಪ್ರದರ್ಶಿಸಲಿದ್ದೇವೆ. ಶುಕ್ರವಾರದಿಂದ ಇಂಗ್ಲಿಷ್‌ ಸಿನಿಮಾಗಳನ್ನು ಸಹ ಪ್ರದರ್ಶಿಸುತ್ತೇವೆ’ ಎಂದು ವೈಶಾಲಿ ತಿಳಿಸಿದರು.

‘ಮಲ್ಟಿಪ್ಲೆಕ್ಸ್‌ನಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗೂ ಫೇಸ್‌ಶೀಲ್ಡ್‌, ಕೈಗವಸು ಹಾಗೂ ಮಾಸ್ಕ್‌ ನೀಡಲಾಗಿದೆ. ಆಗಾಗ್ಗೆ ಸ್ಯಾನಿಟೈಸ್‌ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಸರ್ಕಾರದ ಸ್ಪಂದನೆಯ ನಿರೀಕ್ಷೆಯಲ್ಲಿ ಸಿನಿಮಾ ಮಂದಿರ ಮಾಲೀಕರು

‘ಮೈಸೂರು ಜಿಲ್ಲೆಯಲ್ಲಿ 34 ಚಿತ್ರಮಂದಿರಗಳಿವೆ. ಎಲ್ಲ ಮಾಲೀಕರ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯ ಸರ್ಕಾರ ಹಲವು ಸೌಲಭ್ಯ, ರಿಯಾಯಿತಿ ಒದಗಿಸುವ ತನಕವೂ ಸಿನಿಮಾ ಮಂದಿರಗಳ ಬಾಗಿಲು ತೆರೆಯದಂತೆ ನಿರ್ಧರಿಸಿದ್ದೇವೆ’ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಉಪಾಧ್ಯಕ್ಷ ರಾಜಾರಾಮ್ ತಿಳಿಸಿದರು.

‘ಸಿನಿಮಾ ಮಂದಿರಗಳ ಆಸ್ತಿ ತೆರಿಗೆಯನ್ನು ವಾಣಿಜ್ಯ ಕಟ್ಟಡಗಳಿಗಿಂತ ಹೆಚ್ಚಿನದಾಗಿ ವಿಧಿಸಲಾಗಿದೆ. ‍ಪ್ರತಿ ವರ್ಷವೂ ಟ್ರೇಡ್‌ ಲೈಸೆನ್ಸ್‌ ಪರವಾನಗಿ ಪಡೆಯುವುದನ್ನು ಸ್ಥಗಿತಗೊಳಿಸಬೇಕು. ಒಮ್ಮೆಗೆ ದೀರ್ಘಾವಧಿಗೆ ನೀಡಬೇಕು.

ಥಿಯೇಟರ್‌ ಲೈಸೆನ್ಸ್‌ ರಿನಿವಲ್‌ ಶುಲ್ಕವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಇದನ್ನು ಸರಿಪಡಿಸಬೇಕು. ವಿದ್ಯುತ್ ಶುಲ್ಕವೂ ತುಂಬಾ ದುಬಾರಿಯಾಗಿದೆ. ಸಿನಿಮಾಗೆ ಸಂಬಂಧಿಸಿದ ಪರವಾನಗಿಗಳನ್ನು ಒಂದು ವರ್ಷ ವಿಸ್ತರಿಸಬೇಕು. ನಮ್ಮ ಈ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವ ತನಕವೂ ಸಿನಿಮಾ ಮಂದಿರಗಳ ಬಾಗಿಲು ತೆರೆಯಲ್ಲ’ ಎಂದು ಅವರು ಹೇಳಿದರು.

ನೆರವಿಲ್ಲ; ಜನರು ಬರ್ತಾರಾ..?

‘ಸ್ಟಾರ್‌ ನಟರ ಯಾವೊಂದು ಚಿತ್ರವೂ ಈ ವರ್ಷ ಬಿಡುಗಡೆಯಾಗಲ್ಲ. ನಿರ್ಮಾಪಕರು ಇದನ್ನು ಖಚಿತಪಡಿಸಿದ್ದಾರೆ. ಇಂತಹ ಹೊತ್ತಲ್ಲಿ ನಾವು ಯಾವ ಸಿನಿಮಾ ಪ್ರದರ್ಶಿಸಬೇಕು. ಪ್ರದರ್ಶಿಸಿದರೂ ಆ ಸಿನಿಮಾಗಳನ್ನು ನೋಡಲು ಜನರು ಬರುತ್ತಾರಾ ? ಎಂಬುದೇ ನಮ್ಮನ್ನು ಕಾಡುತ್ತಿದೆ’ ಎನ್ನುತ್ತಾರೆ ಲಕ್ಷ್ಮೀ ಥಿಯೇಟರ್‌ನ ಸುಬ್ರಹ್ಮಣ್ಯಂ ಹಾಗೂ ಸರಸ್ವತಿ ಥಿಯೇಟರ್‌ನ ನಾರಾಯಣ್.

‘ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳದಲ್ಲಿ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ಯಾವೊಂದು ಚಟುವಟಿಕೆ ಆರಂಭವಾಗಿಲ್ಲ. ಅಲ್ಲಿನ ಸರ್ಕಾರಗಳು ಕಲಾವಿದರು, ಕಾರ್ಮಿಕರು, ಚಲನಚಿತ್ರ ಮಂದಿರಗಳ ಮಾಲೀಕರಿಗೆ ನೆರವಿನ ಪ್ಯಾಕೇಜ್ ನೀಡಿದ್ದಾವೆ. ಆದರೆ ನಮ್ಮ ರಾಜ್ಯ ಸರ್ಕಾರ ಬಿಡಿಗಾಸಿನ ನೆರವು ಕೊಟ್ಟಿಲ್ಲ’ ಎಂದು ಗಾಯತ್ರಿ ಚಲನಚಿತ್ರ ಮಂದಿರದ ಮಾಲೀಕ ರಾಜಾರಾಮ್ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.