ADVERTISEMENT

ಸಿಜೆಐ ಅವರತ್ತ ಶೂ ಎಸೆತ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ವಕೀಲ ರಾಕೇಶ್‌ ಕಿಶೋರ್‌ ಬಂಧಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:11 IST
Last Updated 9 ಅಕ್ಟೋಬರ್ 2025, 6:11 IST
<div class="paragraphs"><p>ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟಿಸಿದರು</p></div>

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟಿಸಿದರು

   

ಪ್ರಜಾವಾಣಿ ಚಿತ್ರ

ಮೈಸೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ವಿವಿಧ ಸಂಘಟನೆಗಳು ಬುಧವಾರ ಸರಣಿ ಪ್ರತಿಭಟನೆ ನಡೆಸಿದವು.

ADVERTISEMENT

ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು. ‘ವಕೀಲ ರಾಕೇಶ್ ಕಿಶೋರ್ ದುರುದ್ದೇಶ ಪೂರ್ವಕವಾಗಿ ನ್ಯಾಯಾಧೀಶರತ್ತ ಶೂ ಎಸೆದಿರುವುದು ಅಕ್ಷಮ್ಯ ಅಪರಾಧ. ಈ ಸಂದರ್ಭದಲ್ಲಿ ತನ್ನ ರಕ್ಷಣೆಗಾಗಿ ಸನಾತನ ಎಂಬ ಪದ ಬಳಕೆ ಮಾಡಿಕೊಂಡು ಧರ್ಮದ ಲೇಪಹಚ್ಚಿದ್ದು, ಈ ಕೃತ್ಯಕ್ಕೆ ದೇವರ ಪ್ರೇರೇಪಣೆ ಇದೆ ಎಂದು ಸಂದರ್ಶನವೊಂದರಲ್ಲಿ ಸಮರ್ಥಿಸಿಕೊಂಡು ದಾಷ್ಟ್ಯ ಮೆರೆದಿದ್ದಾರೆ’ ಎಂದು ಕಿಡಿ ಕಾರಿದರು.

‘ನ್ಯಾಯಾಲಯದ ಘನತೆಗೆ ಧಕ್ಕೆ ತಂದಿರುವ ವಕೀಲ ರಾಕೇಶ್ ಕಿಶೋರ್ ಆಸ್ತಿ ಮುಟ್ಟುಗೋಲು ಹಾಕಿ ಶಿಕ್ಷೆಗೆ ಒಳಪಡಿಸಬೇಕು. ದೇಶದ್ರೋಹಿ ಎಂದು ಪರಿಗಣಿಸಿ ದೇಶದ ಏಕತೆ, ಅಭಿವೃದ್ಧಿ, ಭದ್ರತೆಯ ಪರವಾಗಿರುವವರನ್ನು ಕಾಪಾಡುವ ದೃಷ್ಟಿಯಿಂದ ಸರ್ವಾಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಬಿಡಿ ಶಿವಬುದ್ಧಿ, ಮಹೇಶ್ ಮಲಾರ, ರಾಜು ಕುಕ್ಕೂರು, ರಾಮಕೃಷ್ಣ ಅತ್ತಿಕುಪ್ಪೆ, ಯಡದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ಮಂಜು ಶಂಕರಪುರ, ಮಹೇಶ್ ಗಟ್ಟವಾಡಿ, ಮಹದೇವಮ್ಮ, ತಿಮ್ಮೇಗೌಡ, ಕಿರಂಗೂರು ಸ್ವಾಮಿ ಭಾಗವಹಿಸಿದ್ದರು.

ವಕೀಲರ ಸಂಘ

ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಜಮಾವಣೆಗೊಂಡ ವಕೀಲರ ಸಂಘದ ಪದಾಧಿಕಾರಿಗಳು, ವಕೀಲ ರಾಕೇಶ್ ಕಿಶೋರ್ ಭಾವಚಿತ್ರ ಹರಿದು, ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ‘ವಕೀಲರು ನ್ಯಾಯಾಂಗ ವ್ಯವಸ್ಥೆಯ ಹೃದಯ ಭಾಗ. ಈ ಘಟನೆ ನ್ಯಾಯಾಂಗ ವ್ಯವಸ್ಥೆಗೆ, ಸಂವಿಧಾನಕ್ಕೆ ಆಗಿರುವ ಗಾಯ. ಇದನ್ನು ಖಂಡಿಸಿ ರಾಷ್ಟ್ರಪತಿ, ಪ್ರಧಾನಿ, ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಅವರನ್ನು ಯಾರಾದರು ರಕ್ಷಣೆ ಮಾಡಲು ಪ್ರಯತ್ನಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಚರಣ್‌ರಾಜ್‌ ಕುಮಾರ್, ಸುಧೀರ್‌ ಭಾಗವಹಿಸಿದ್ದರು.

ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಮೈಸೂರು ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ

‘ಮನುವಾದ ಮರುಸ್ಥಾಪನೆಯ ಉದ್ದೇಶ’

ಮೈಸೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಪ್ರತಿಭಟಿಸಿದರು.

ರಂಗಕರ್ಮಿ ಸಿ. ಬಸವಲಿಂಗಯ್ಯ ಮಾತನಾಡಿ ‘ದೇಶದಲ್ಲಿ ಪ್ರಜಾಪ್ರಭುತ್ವ ಜಾತ್ಯತೀತ ವ್ಯವಸ್ಥೆ ನಾಶ ಮಾಡಿ ಮನುವಾದವನ್ನು ಮರುಸ್ಥಾಪಿಸಲು ಮುಂದಾಗಿರುವುದು ಅಪಾಯಕಾರಿ’ ಎಂದು ಆತಂಕ ವ್ಯಕ್ತಪಡಿಸಿದರು.

‘ಆರ್‌ಎಸ್‌ಎಸ್‌ಗೆ ನೂರು ವರ್ಷಗಳು ಮುಗಿದಿದೆ ಎನ್ನುವಂತೆ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ಸಂಘಟನೆಯು ಯಾವಾಗ ನೋಂದಣಿಯಾಗಿದೆ ಹಣದ ಮೂಲ ಯಾವುದು ಎಂಬುದು ಗೊತ್ತಾಗಬೇಕಾಗಿದೆ’ ಎಂದು ಹೇಳಿದರು.

‘ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ)ಮಾತನಾಡಿ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿಗೂ ನ್ಯಾಯಾಂಗದ ಮೇಲೆ ಜನರು ಗೌರವ ಹೊಂದಿದ್ದಾರೆ. ಅಂತಹ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯ ಮೇಲೆ ಶೂ ಎಸೆದಿದ್ದು  ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೀಡ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕೆ.ಎನ್.ಶಿವಲಿಂಗಯ್ಯ ಅಹಿಂದ ಜವರಪ್ಪ ಸವಿತಾ ಮಲ್ಲೇಶ್ ಟಿ.ಗುರುರಾಜ್ ಪ್ರೊ. ಪಂಡಿತಾರಾಧ್ಯ ಪ್ರೊ. ಕೆ.ಎಂ.ಜಯರಾಮಯ್ಯ ಲಕ್ಷ್ಮಣ್ ಹೊಸಕೋಟೆ ಹರಿಹರ ಆನಂದಸ್ವಾಮಿ ಕೆ. ಆರ್. ಗೋಪಾಲಕೃಷ್ಣ ಜಯರಾಮ್ ಜಗದೀಶ್ ಸೂರ್ಯ ಹೊಸಕೋಟೆ ಬಸವರಾಜು ಉಗ್ರನರಸಿಂಹೇಗೌಡಸುಬ್ರಹ್ಮಣ್ಯ ಭಾಗವಹಿಸಿದ್ದರು.

‘ನ್ಯಾಯಮೂರ್ತಿಗಳ (ಸಿಜೆಐ) ಮೇಲೆ ಶೂ ಎಸೆದಿರುವುದನ್ನು ಖಂಡಿಸಿ’ ಮೈಸೂರಿನ ಜಿಲ್ಲಾ ನ್ಯಾಯಾಲಯ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.