ADVERTISEMENT

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕಾರಿನ ಚಾಲಕನಿಗೆ ಥಳಿತ

ಸಾಲಿಗ್ರಾಮ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 18:11 IST
Last Updated 9 ಮಾರ್ಚ್ 2022, 18:11 IST
ಸಂಸದೆ ಸುಮಲತಾ ಬುಧವಾರ ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದರು
ಸಂಸದೆ ಸುಮಲತಾ ಬುಧವಾರ ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದರು   

ಸಾಲಿಗ್ರಾಮ: ಮುಂಜನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಸಂಬಂಧ ಬುಧವಾರ ಜೆಡಿಎಸ್‌ ಕಾರ್ಯಕರ್ತರಿಗೂ, ಮಂಡ್ಯ ಸಂಸದೆ ಸುಮಲತಾ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ.

ಗುಂಪೊಂದು ಸುಮಲತಾ ಕಾರು ಚಾಲಕ ನಂಜುಂಡ ಅವರನ್ನು ಥಳಿಸಿ ಗಾಯಗೊಳಿಸಿದೆ. ಈ ಕುರಿತು ಸುಮಲತಾ, ಜೆಡಿಎಸ್ ಕಾರ್ಯಕರ್ತರಾದ ಅನೀಫ್‌ ಗೌಡ, ಧನು ಹಾಗೂ ಇತರೆ 7 ಮಂದಿ ವಿರುದ್ಧ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅನುಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸಬಾರದು’ ಎಂದು ಜೆಡಿಎಸ್‌ ಕಾರ್ಯಕರ್ತರು ಸುತ್ತುವರೆದು ಘೋಷಣೆ ಕೂಗಿದರು. ಆದರೆ, ಸುಮಲತಾ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ‘ಇದು ಸಂಸದರ ನಿಧಿಯಿಂದ ಮಾಡುತ್ತಿರುವ ಕಾಮಗಾರಿ. ಹೀಗಾಗಿ, ಶಾಸಕರು ಇಲ್ಲದೆಯೂ ಭೂಮಿಪೂಜೆ ನೆರವೇರಿಸಬಹುದು’ ಎಂದು ಹೇಳಿದಾಗ ಘರ್ಷಣೆ ಆರಂಭವಾಗಿದೆ.

ADVERTISEMENT

ಭೂಮಿಪೂಜೆ ನೆರವೇರಿಸಲು ಮುಂದಾಗುತ್ತಿದ್ದಂತೆ ಗುಂಪೊಂದು ಸುಮಲತಾ ಕಾರಿನ ಚಾಲಕ ನಂಜುಂಡ ಎಂಬುವವರನ್ನು ಥಳಿಸಿತು. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿದರು. ಗಾಯಗೊಂಡ ನಂಜುಂಡ ಅವರನ್ನು ಕೆ.ಆರ್.ನಗರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಕೆಲವು ಮಹಿಳೆಯರು ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಸುಮಲತಾ ಅವರ ಬೆಂಬಲಕ್ಕೆ ನಿಂತರು.

ಸುಮಲತಾ ಅವರು ರಾತ್ರಿ ಸಾಲಿಗ್ರಾಮ ಠಾಣೆಗೆ ಬಂದು ಜೆಡಿಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರು. ಅವರೊಂದಿಗೆ ಕಾಂಗ್ರೆಸ್‌ ಮುಖಂಡರಾದ ಡಿ.ರವಿಶಂಕರ್, ಹರದನಹಳ್ಳಿ ಮಂಜುಪ್ಪ, ತಂದ್ರೆ ದಿಲೀಪ್, ಸಾಲಿಗ್ರಾಮ ಚಂದ್ರಶೇಖರ್ ಹಾಗೂ ಬಿಜೆಪಿ ಮುಖಂಡರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.