ADVERTISEMENT

ಶಾಸ್ತ್ರೀಯ ಕನ್ನಡ ಪ್ರಚಾರ: ಆನ್‌ಲೈನ್‌ ಮೊರೆ

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ಉಪನ್ಯಾಸ

ಎಂ.ಮಹೇಶ್
Published 1 ನವೆಂಬರ್ 2025, 4:23 IST
Last Updated 1 ನವೆಂಬರ್ 2025, 4:23 IST
ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಕಟ್ಟಡ  
ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಕಟ್ಟಡ     

ಮೈಸೂರು: ಇಲ್ಲಿನ ಮಾನಸಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ, ಶಾಸ್ತ್ರೀಯ ಕನ್ನಡದ ಬಗ್ಗೆ ಪ್ರಚಾರಕ್ಕಾಗಿ ಆನ್‌ಲೈನ್‌ನಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

‘52 ವಾರ, 52 ವಿದ್ವಾಂಸರು ಹಾಗೂ 52 ವಿಷಯ’ ಶೀರ್ಷಿಕೆಯಲ್ಲಿ ಪ್ರತಿ ಸೋಮವಾರ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿಷಯ ತಜ್ಞರು, ವಿದ್ವಾಂಸರನ್ನು ಆಯ್ಕೆ ಮಾಡಿ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಸಹಯೋಗದಲ್ಲಿ ಉಪನ್ಯಾಸ ಕೊಡಿಸಲಾಗುತ್ತಿದೆ.

ಈವರೆಗೆ 51 ಕಾರ್ಯಕ್ರಮ ನಡೆದಿದ್ದು, ನ.10ರಂದು 52ನೇ ವಾರದ ಉಪನ್ಯಾಸದೊಂದಿಗೆ ಸಮಾರೋಪಗೊಳ್ಳಲಿದೆ. ಸಿಐಐಎಲ್‌ನಲ್ಲಿ ನಡೆಯುವ ಆಫ್‌ಲೈನ್‌ ಕಾರ್ಯಕ್ರಮದಲ್ಲಿ ಸಾಹಿತಿ ರಹಮತ್ ತರೀಕರೆ ಸಮಾರೋಫ ಭಾಷಣ ಮಾಡಲಿದ್ದಾರೆ. 52ನೇ ಉಪನ್ಯಾಸವನ್ನು ಕೊಳ್ಳೇಗಾಲ ಮಂಜುನಾಥ್‌ ಅವರು ನೀಡಲಿದ್ದು, ‘ರನ್ನನ ಗದಾಯುದ್ಧದ ಆಯ್ದ ಪದ್ಯಗಳ ಪುನರ್‌ಪರಿಶೀಲನೆ’ ಕುರಿತು ಮಾತನಾಡಲಿದ್ದಾರೆ. 

ADVERTISEMENT

ವಿವಿಧ ವಿಷಯ: ಇತಿಹಾಸ, ಜಾನಪದ, ಕಲೆ, ಕನ್ನಡ ಸಾಹಿತ್ಯ, ಭಾಷಾ ವಿಜ್ಞಾನ ಮೊದಲಾದ ವಿಷಯಗಳು, ಯುನೆಸ್ಕೊ ಮಾನ್ಯತೆ ಪಡೆದ ಕರ್ನಾಟಕದ ಸ್ಮಾರಕಗಳು, ನೃತ್ಯ, ಶಿಲ್ಪಕಲೆ, ಸಂಗೀತ, ಅಕ್ಷರ ರಾಜಕಾರಣದ ಹಿನ್ನೆಲೆಯಲ್ಲಿ ಜಾನಪದ ಮೊದಲಾದ ವಿಷಯಗಳ ಕುರಿತು ಉಪನ್ಯಾಸ ನಡೆದಿದೆ. ಪಂಪ, ರನ್ನ, ಜನ್ನ ಮೊದಲಾದವರನ್ನು ಪರಿಚಯಿಸಲಾಗಿದೆ. 

‘ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ವಾರ ಆಸಕ್ತರು ಪಾಲ್ಗೊಳ್ಳುತ್ತಿದ್ದರು. ಇದನ್ನು ವೀಕ್ಷಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಸಂಘದವರು ನಮ್ಮ ಸಹಯೋಗದಲ್ಲಿ ಮುಂದಿನ 52 ವಾರಗಳವರೆಗೆ ಕಾರ್ಯಕ್ರಮ ಆಯೋಜಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನು ನೋಡಿದರೆ, ನಮ್ಮ ಚಟುವಟಿಕೆ ಸಾಹಿತ್ಯಾಸಕ್ತರನ್ನು ತಲುಪಿದೆ ಎಂದೇ ಭಾವಿಸಿದ್ದೇವೆ’ ಎಂದು ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಐಐಎಲ್‌ ನಿರ್ದೇಶಕರಿಂದ ಅನುಮತಿ ಪಡೆದು 2ನೇ ವರ್ಷದ ಉಪನ್ಯಾಸ ಮಾಲಿಕೆ ಮುಂದುವರಿಸಲಾಗುವುದು. ಪ್ರತಿ ವಾರ 300 ಮಂದಿ ಪಾಲ್ಗೊಳ್ಳುತ್ತೇವೆ ಎಂದು ಆ ಸಂಘದವರು ತಿಳಿಸಿದ್ದಾರೆ’ ಎಂದರು.

ಸಿಐಐಎಲ್ ಸಹಯೋಗದಲ್ಲಿ: ‘ಸಿಐಐಎಲ್‌ನಿಂದ ಆನ್‌ಲೈನ್‌ ಲಿಂಕ್‌ ಕೊಡಲಾಗುತ್ತದೆ. ಅದರಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು. ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಲಿಂಕ್‌ ಮೊದಲಾದ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು, ಆಸಕ್ತರು ಪಾಲ್ಗೊಳ್ಳಬಹುದು. 20 ನಿಮಿಷ ಉಪನ್ಯಾಸ ಹಾಗೂ 20 ನಿಮಿಷ ಸಂವಾದ ಇರುತ್ತದೆ. ಉಪನ್ಯಾಸಕರಿಗೆ ತಲಾ ₹ 2ಸಾವಿರ ಗೌರವಧನ ಕೊಡಲಾಗುತ್ತಿದೆ’ ಎಂದು ತಳವಾರ ಮಾಹಿತಿ ನೀಡಿದರು.

ಹೋದ ವರ್ಷ ಕನ್ನಡ ಸಾಹಿತ್ಯ ಚರಿತ್ರೆಯ ಪ್ರಾರಂಭಿಕ ಪ್ರಯತ್ನ ಶೀರ್ಷಿಕೆಯಲ್ಲಿ ನಿಘಂಟು ರಚನೆ, ಶಾಸನ ಅಧ್ಯಯನ, ಜಾನಪದ ಅಧ್ಯಯನ ಪ್ರಾರಂಭಿಕ ಪ್ರಯತ್ನಗಳು ಮೊದಲಾದ ವಿಷಯಗಳ ಕುರಿತು ಉಪನ್ಯಾಸ ನಡೆದಿದೆ. ಆ ಉಪನ್ಯಾಸಕರಿಂದ ಪೂರ್ಣಪಠ್ಯ ಪಡೆದು ತಲಾ 100 ಪುಟದ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. 

- ಪ್ರಚಾರೋಪಾನ್ಯಾಸ

ಪುಸ್ತಕ ಕೇಂದ್ರದಿಂದ ಪ್ರಚಾರೋಪಾನ್ಯಾಸವನ್ನೂ ಪರಿಚಯಿಸಲಾಗಿದೆ. ಹೋದ ವರ್ಷ 10 ಉಪನ್ಯಾಸ ನಡೆಸಿದ್ದೇವೆ. ಇದರಲ್ಲಿ ಏಳು ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿವೆ. 2ನೇ ಕಂತಿನ ಪ್ರಚಾರೋಪಾನ್ಯಾಸದಲ್ಲಿ 8 ಕಾರ್ಯಕ್ರಮಗಳು ನಡೆದಿವೆ. ತುಮಕೂರಿನಲ್ಲಿ ‘ಪ್ರಾಚೀನ ಮತ್ತು ಮದ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಸ್ತ್ರೀಸಾಮಾನ್ಯ’ ಹಾಗೂ ಕಾಸರಗೋಡಿನಲ್ಲಿ ‘ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯದ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ‘ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಪರಿಚಯಿಸಲಾಗುತ್ತಿದೆ. ಪುಸ್ತಕ ಸಿದ್ಧಪಡಿಸಲು ಲೇಖನ ಕೊಡುವ ಉಪನ್ಯಾಸಕರಿಗೆ ₹ 10ಸಾವಿರ ಹಾಗೂ ಉಪನ್ಯಾಸಕ್ಕೆ ₹ 2ಸಾವಿರ ಪ್ರಯಾಣವೆಚ್ಚವನ್ನು ಕೊಡಲಾಗುತ್ತಿದೆ’ ಎಂದು ತಳವಾರ ತಿಳಿಸಿದರು. 

ಪ್ರಾಚೀನ ಕನ್ನಡ ಕಾವ್ಯ ಓದು ತರಬೇತಿಗೆ ಸಿದ್ಧತೆ

  ‘ನವೆಂಬರ್‌ನಿಂದ ಆನ್‌ಲೈನ್‌ ಮೂಲಕ ಪ್ರಾಚೀನ ಕನ್ನಡ ಕಾವ್ಯಗಳ ಓದು ತರಬೇತಿಯನ್ನು ತಜ್ಞರಿಂದ ಕೊಡಿಸಲಾಗುವುದು. ನ.11ರಿಂದ 4 ದಿನಗಳವರೆಗೆ ನಮ್ಮ ಕೇಂದ್ರದ ಸಿಬ್ಬಂದಿಗೆ (12 ಮಂದಿ) ಪ್ರಾಚೀನ ಕನ್ನಡ ಕಾವ್ಯಗಳ ಓದು ಮತ್ತು ಅರ್ಥೈಸುವಿಕೆ ಕುರಿತ ತರಬೇತಿಯನ್ನು ವಿದ್ವಾಂಸ ಪಾದೇಕಲ್ಲು ವಿಷ್ಣುಭಟ್ಟ ಅವರಿಂದ ಕೊಡಿಸಲಾಗುವುದು’ ಎಂದು ನೀಲಗಿರಿ ತಳವಾರ ಮಾಹಿತಿ ನೀಡಿದರು.