ADVERTISEMENT

ನಡೆಯದ ತ್ಯಾಜ್ಯ ವಿಲೇವಾರಿ

ಪೌರಕಾರ್ಮಿಕರ ಮುಷ್ಕರ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 13:41 IST
Last Updated 3 ಜುಲೈ 2022, 13:41 IST
ಪೌರಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಕುವೆಂಪುನಗರ ಮುಖ್ಯ ರಸ್ತೆ ಬದಿಯಲ್ಲಿ ತ್ಯಾಜ್ಯ ವಿಲೇವಾರಿಯಾಗಿಲ್ಲ /ಪ್ರಜಾವಾಣಿ ಚಿತ್ರ
ಪೌರಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಕುವೆಂಪುನಗರ ಮುಖ್ಯ ರಸ್ತೆ ಬದಿಯಲ್ಲಿ ತ್ಯಾಜ್ಯ ವಿಲೇವಾರಿಯಾಗಿಲ್ಲ /ಪ್ರಜಾವಾಣಿ ಚಿತ್ರ   

ಮೈಸೂರು: ಕೆಲಸ ಕಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಮುಷ್ಕರ ಮುಂದುವರಿಸಿರುವುದರಿಂದಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ.

ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ಸ್ವಚ್ಛತಾ ಕಾರ್ಮಿಕರು ಕೆಲಸದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಪರಿಣಾಮ ‘ಸಾಂಸ್ಕೃತಿಕ ನಗರಿ’ಯ ಬಹುತೇಕ ಬಡಾವಣೆಗಳಲ್ಲಿ ಕಸ ವಿಲೇವಾರಿಯಾಗಿಲ್ಲ. ಇದರಿಂದ, ಆ ಪ್ರದೇಶಗಳಲ್ಲಿ ದುರ್ನಾತ ಹಬ್ಬಿದೆ. ಕುವೆಂಪುನಗರ, ಕೆ.ಜಿ. ಕೊಪ್ಪಲು, ಜಯನಗರ, ಒಂಟಿಕೊಪ್ಪಲು, ಪಡುವಾರಹಳ್ಳಿ, ಅರವಿಂದ ನಗರ ಹೀಗೆ... ಹಲವು ಬಡಾವಣೆಗಳಲ್ಲಿ ಎಂದಿನಂತೆ ತ್ಯಾಜ್ಯ ವಿಲೇವಾರಿ ನಡೆದಿಲ್ಲ. ಮನೆ– ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯವೂ ಸ್ಥಗಿತಗೊಂಡಿದೆ.

ಕುವೆಂಪುನಗರ, ಕೆ.ಜಿ. ಕೊಪ್ಪಲು ಮೊದಲಾದ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಚೆಲ್ಲಿರುವುದು, ಅಲ್ಲಿ ದನ–ಕರುಗಳು ಆಹಾರ ಹುಡುಕುತ್ತಿದ್ದುದು ಕಂಡು ಬಂತು.

ADVERTISEMENT

ಅರಮನೆ, ಕೆ.ಆರ್. ವೃತ್ತ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳಲ್ಲಿನ ಸ್ವಚ್ಛತಾ ಕಾರ್ಯಕ್ಕೆ ಕಾಯಂ ಪೌರಕಾರ್ಮಿಕರನ್ನು (530) ಬಳಸಲಾಗುತ್ತಿದೆ.

ಈ ನಡುವೆ, ಮುಷ್ಕರನಿರತ ಪೌರಕಾರ್ಮಿಕರಿಗೆ ಮೇಯರ್‌ ಸುನಂದಾ ಪಾಲನೇತ್ರ, ಮುಖಂಡರಾದ ಕೆ.ಆರ್. ಸೋಮಶೇಖರ್‌, ಅನಂತು, ಅಕ್ಬರ್, ಪುರುಷೋತ್ತಮ ಬೆಂಬಲ ಸೂಚಿಸಿದ್ದಾರೆ.

ಸ್ವಚ್ಛತಾ ಕಾರ್ಮಿಕರು ಸಂಜೆವರೆಗೂ ಮಹಾನಗರಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿರುವುದರಿಂದಾಗಿ ಅವರು ಸೋಮವಾರವೂ ಮುಷ್ಕರ ಮುಂದುವರಿಸುವುದಕ್ಕೆ ನಿರ್ಧರಿಸಿದ್ದಾರೆ.

‘ಸರ್ಕಾರವು ನಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಸಲಿದ್ದೇವೆ. ‘ನೇರ ಪಾವತಿಯಡಿ’ (ಗುತ್ತಿಗೆ) ಕಾರ್ಯನಿರ್ವಹಿಸುತ್ತಿರುವ 1,648 ಪೌರಕಾರ್ಮಿಕರು, 231 ಒಳಚರಂಡಿ ಸ್ವಚ್ಛತಾ ಕಾರ್ಮಿಕರು ಮತ್ತು 385 ಮಂದಿ ಮನೆ–ಮನೆಗಳಿಂದ ಕಸ ಸಂಗ್ರಹಿಸುವವರು ಹಾಗೂ ಆ ವಾಹನಗಳ ಚಾಲಕರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಸೋಮವಾರವೂ ಕೆಲಸದಿಂದ ದೂರ ಉಳಿಯುತ್ತೇವೆ’ ಎಂದುಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್‌.ಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಾದ್ಯಂತ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡಿರುವುದರಿಂದ ಜನರಿಗೆ ತೊಂದರೆ ಆಗಬಹುದು. ಆದರೆ, ನಾವು ನಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ. ನಗರ, ಪಟ್ಟಣಗಳಲ್ಲಿ ಸ್ವಚ್ಛತೆ ಕಾಪಾಡುವ ನಮ್ಮ ಬದುಕು ಇಂದಿಗೂ ಹಸನಾಗಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ. ಸರ್ಕಾರವು ಸೋಮವಾರವೂ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಗರದಲ್ಲಿನ 530 ಕಾಯಂ ಪೌರಕಾರ್ಮಿಕರನ್ನು ಕೂಡ ಮುಷ್ಕರಕ್ಕೆ ಸೇರಿಸಿಕೊಳ್ಳಲು ಯೋಜಿಸಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.