ADVERTISEMENT

ನಂಜನಗೂಡು: ಅನಧಿಕೃತ ಪೆಟ್ಟಿಗೆ ಅಂಗಡಿಗಳ ತೆರವು

ನಂಜನಗೂಡು ದೇವಾಲಯದ ಅರಮನೆ ಮೈದಾನದಲ್ಲಿ ತಲೆಯತ್ತಿದ್ದ ಗೂಡಂಗಡಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 1:47 IST
Last Updated 22 ಅಕ್ಟೋಬರ್ 2020, 1:47 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ಬುಧವಾರ ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ಬುಧವಾರ ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು   

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ಪೆಟ್ಟಿಗೆ ಅಂಗಡಿಗಳನ್ನು ಬುಧವಾರ ತಹಶೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.

ಸೋಮವಾರ ಜೆಸಿಬಿ ಯಂತ್ರಗಳೊಂದಿಗೆ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಸಿದ್ಧತೆ ನಡೆಸುತ್ತಿದ್ದಾಗ, ಅಂಗಡಿಗಳ ಮಾಲೀಕರು ಕೆಲವು ದಿನ ಕಾಲಾವಕಾಶ ನೀಡಿ, ನಾವೇ ತೆರವುಗೊಳಿಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದಕ್ಕೆ ಎರಡು ದಿನ ಕಾಲಾವಕಾಶ ನೀಡಿದ್ದರು. ಆದರೆ, ಬುಧವಾರ ಬೆಳಗಿನವರೆಗೆ ತೆರವುಗೊಳಿಸಿರಲಿಲ್ಲ.

ಮತ್ತೆ ಕಾಲಾವಕಾಶ ನೀಡಲು ಒಪ್ಪದ ತಹಶೀಲ್ದಾರ್ ಅವರ ಸೂಚನೆಯಂತೆ ನಗರಸಭೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿ, ದೇವಾಲಯಕ್ಕೆ ಸೇರಿದ 116 x 148 ಅಡಿ ಜಾಗವನ್ನು ವಶಕ್ಕೆ ಪಡೆದು ಕಂಬ ಹಾಕಿ ಬೇಲಿ ನಿರ್ಮಿಸಲಾಯಿತು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಿ.ಹರ್ಷವರ್ಧನ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಪುರಾತತ್ವ ಇಲಾಖೆಯ ಅಧಿಕಾರಿಗಳು ದೇವಾಲಯದ ಆಸ್ತಿಯನ್ನು ರಕ್ಷಣೆ ಮಾಡಬೇಕು, ಅವರ ಕೆಲಸ ನಾವು ಮಾಡುತ್ತಿದ್ದೇನೆ. ತೆರವುಗೊಳಿಸಿರುವ ಜಾಗವನ್ನು ಮುಳ್ಳು ಬೇಲಿ ನಿರ್ಮಿಸಿ, ದೇವಾಲಯದ ಸುಪರ್ದಿಗೆ ನೀಡಲಾಗುತ್ತದೆ. ದೇವಾಲಯಕ್ಕೆ ಸೇರಿದ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದರು.

‘ದೇವಾಲಯದ ಆಸ್ತಿಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದೇನೆ. ಜಾಗವನ್ನು ಅಕ್ರಮವಾಗಿ ಕಬಳಿಸಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟವರು ಎಷ್ಟೇ ಪ್ರಭಾವಿಗಳಾದರೂ ತೆರವುಗೊಳಿಸಲಾಗುವುದು’ ಎಂದು ಹೇಳಿದರು.

‘ದೇವಾಲಯದ ಅಭಿವೃದ್ಧಿಯ ವಿಚಾರವಾಗಿ ಅಧಿವೇಶನದಲ್ಲಿ ಹಾಗೂ ಸಂಬಂಧಪಟ್ಟ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಮುಜರಾಯಿ ಆಯುಕ್ತರಿಗೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ನೀಲನಕ್ಷೆ ತಯಾರಿಸಿ, ಅದರಂತೆ ಕಾಮಗಾರಿ ನಡೆಸುವಂತೆ ತಿಳಿಸಲಾಗಿದೆ’ ಎಂದು ಶಾಸಕ ಹರ್ಷವರ್ಧನ್‌ ಹೇಳಿದರು.

ಕಾರ್ಯಾಚರಣೆಯಲ್ಲಿ ನಗರಸಭೆ ಆಯುಕ್ತ ಕರಿಬಸವಯ್ಯ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಇಂಧನ್ ಬಾಬು, ಸದಸ್ಯರಾದ ಗಿರೀಶ್, ಶ್ರೀಧರ್, ಶಶಿರೇಖಾ, ಮಂಜುಳಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.