ಸಾಂದರ್ಭಿಕ ಚಿತ್ರ
ಮೈಸೂರು: ಈ ಬಾರಿಯ ‘ಸಿ.ಎಂ. ಕಪ್’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟವು ಸೆ. 22ರಿಂದ 25ರವರೆಗೆ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.
ಕ್ರೀಡಾಕೂಟದ ಸಿದ್ಧತೆಗಳ ಕುರಿತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಸೆ.22ರಂದು ಸಂಜೆ 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಚಾಮುಂಡಿ ವಿಹಾರ ಕ್ರೀಡಾಂಗಣ ಸೇರಿದಂತೆ 13 ಸ್ಥಳಗಳಲ್ಲಿ 26 ಕ್ರೀಡೆಗಳು ನಡೆಯಲಿವೆ. ಜೊತೆಗೆ ಸ್ಥಳೀಯವಾಗಿ ಅಂಧರ ಚೆಸ್, ಸೈಕಲ್ ಪೋಲೊ, ಕರಾಟೆ, ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ’ ಎಂದರು.
‘ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಬೆಳಗಾವಿ ವಿಭಾಗಗಳಿಂದ
ತಲಾ 646 ಕ್ರೀಡಾಪಟುಗಳಂತೆ ಒಟ್ಟು 3,230 ಕ್ರೀಡಾಪಟುಗಳು, 800 ತಾಂತ್ರಿಕ ಸಿಬ್ಬಂದಿ
ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ 54 ವಸತಿ ಗೃಹಗಳಲ್ಲಿ ವಸತಿ, ನಂಜರಾಜ ಬಹದ್ದೂರ್ ಛತ್ರದಲ್ಲಿ ಊಟೋಪಹಾರ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ನಗದು ಬಹುಮಾನ: ಕ್ರೀಡಾಕೂಟದ ವಿಜೇತರಿಗೆ ನಗದು ಪುರಸ್ಕಾರ ಸಿಗಲಿದೆ. ವೈಯಕ್ತಿಕ ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವರಿಗೆ ₹8 ಸಾವಿರ, ₹5 ಸಾವಿರ, ₹2500 ಸಿಗಲಿದೆ. ಗುಂಪು ವಿಭಾಗದಲ್ಲಿ 7 ಜನ ಇಲ್ಲವೇ ಅದಕ್ಕಿಂತ ಕಡಿಮೆ ಸ್ಪರ್ಧಿಗಳನ್ನು ಒಳಗೊಂಡ ತಂಡ ಪ್ರತಿ ಸದಸ್ಯರಿಗೆಪ್ರಥಮ ಬಹುಮಾನ ₹4 ಸಾವಿರ, ದ್ವಿತೀಯ ₹3 ಸಾವಿರ ಹಾಗೂ ತೃತೀಯ ₹2 ಸಾವಿರ ಸಿಗಲಿದೆ. 8ಕ್ಕೂ ಹೆಚ್ಚು ಆಟಗಾರರನ್ನು ತಂಡದ ಪ್ರತಿ ಸದಸ್ಯರಿಗೆ ಪ್ರಥಮ ಬಹುಮಾನವಾಗಿ ₹3 ಸಾವಿರ, ದ್ವಿತೀಯ ₹2 ಸಾವಿರ ಹಾಗೂ ತೃತೀಯ ₹1 ಸಾವಿರ ಸಿಗಲಿದೆ
ಎಂದು ತಿಳಿಸಿದರು.
ಕಾವೇರಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆ: ಈ ಬಾರಿ ಸೆ. 24ರಂದು ಚಾಮುಂಡಿ ಬೆಟ್ಟ ಹತ್ತುವ
ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ₹10 ಸಾವಿರ, ದ್ವಿತೀಯ ₹7 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹ 5 ಸಾವಿರ ಸಿಗಲಿದೆ. ಈ ಬಾರಿ ವರುಣ ಕೆರೆ ಬದಲಿಗೆ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ರಸ್ತೆ ಓಟ ಸಹ ಇದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದರು.
ಪ್ರತಿ ವರ್ಷ ದಸರಾ ಕ್ರೀಡಾಕೂಟದ ಉದ್ಘಾಟನೆಗೆ ದೇಶದ ಖ್ಯಾತನಾಮ ಕ್ರೀಡಾಪಟು ಒಬ್ಬರನ್ನು ಆಹ್ವಾನಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆಯುತ್ತ ಬಂದಿದೆ. ಆದರೆ ಈ ವರ್ಷ ಕ್ರೀಡಾಕೂಟಕ್ಕೆ ಬೆರಳೆಣಿಕೆಯ ದಿನವಷ್ಟೇ ಉಳಿದಿದ್ದರೂ ಇನ್ನೂ ಅತಿಥಿ ಕ್ರೀಡಾಪಟುವಿನ ಹೆಸರನ್ನೇ ಸಮಿತಿಯು ಅಂತಿಮಗೊಳಿಸಿಲ್ಲ.
‘ಉದ್ಘಾಟನಾ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟು ಒಬ್ಬರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಆದರೆ, ಯಾವ ಕ್ರೀಡಾಪಟುವನ್ನು ಕರೆಯಬೇಕು ಎಂಬ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಹೆಸರು ಅಂತಿಮಗೊಳಿಸಲಾಗುವುದು. ಕ್ರೀಡಾಜ್ಯೋತಿ ಜವಾಬ್ದಾರಿಯನ್ನು ಈ ಬಾರಿ ಮೈಸೂರಿನ ಸ್ಥಳೀಯ ಕ್ರೀಡಾ ಸಂಸ್ಥೆಗೆ ವಹಿಸಲಾಗಿದೆ’ ಎಂದು ಚೇತನ್ ತಿಳಿಸಿದರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಫೆನ್ಸಿಂಗ್, ಜಿಮ್ನಾಸ್ಟಿಕ್, ಹ್ಯಾಂಡ್ ಬಾಲ್, ಹಾಕಿ, ಕೊಕ್ಕೊ, ನೆಟ್ ಬಾಲ್, ಈಜು, ಥ್ರೋ ಬಾಲ್, ವಾಲಿಬಾಲ್, ವುಷು ಸ್ಪರ್ಧೆಗಳು ನಡೆಯಲಿವೆ.
ಮಾನಸಗಂಗೋತ್ರಿಯ ಒಳಾಂಗಣ ಕ್ರೀಡಾಂಗಣ ದಲ್ಲಿ ಬ್ಯಾಡ್ಮಿಂಟನ್, ಮೈಸೂರು ವಿ.ವಿ. ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಬಾಲ್ ಬ್ಯಾಡ್ಮಿಂಟನ್, ಫುಟ್ ಬಾಲ್, ಕಬಡ್ಡಿ, ಯೋಗ ಹಾಲ್‌ನಲ್ಲಿ ಯೋಗ, ಮಹಾರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಜ್ಯುಡೊ, ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್‌ನಲ್ಲಿ ಲಾನ್ ಟೆನಿಸ್, ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಟೇಬಲ್ ಟೆನಿಸ್, ಯುವರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಟೇಕ್ವಾಂಡೊ, ದೇವರಾಜ ಅರಸು ಕುಸ್ತಿ ಅಂಗಳದಲ್ಲಿ ಕುಸ್ತಿ, ರಿಂಗ್ ರಸ್ತೆಯಲ್ಲಿ ಸೈಕ್ಲಿಂಗ್ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.