ಕೆ.ಆರ್. ನಗರ: ‘ಬಿಜೆಪಿಯವರು ಹೊರಿಸಿದ್ದ ಬಾಕಿ ಭಾರವನ್ನು ನಿರ್ವಹಿಸುವ ಜೊತೆಗೆ ಅಭಿವೃದ್ಧಿಗೂ ನಾವು ಆದ್ಯತೆ ಕೊಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ರೇಡಿಯೊ ಮೈದಾನದಲ್ಲಿ ಶುಕ್ರವಾರ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ₹404 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ₹109 ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಬಿಜೆಪಿಯವರು ಲೂಟಿ ಹೊಡೆದು ಹೋದರು. ಅಭಿವೃದ್ಧಿ ಕೆಲಸ ಮಾಡಲಿಲ್ಲ. ದುಡ್ಡು ಮಾಡಲೆಂದೇ ₹2.70 ಲಕ್ಷ ಕೋಟಿ ಮೊತ್ತದ ಯೋಜನೆ ಘೋಷಿಸಿದ್ದರು. ಆದರೆ, ಹಣ ಇಟ್ಟಿರಲಿಲ್ಲ. ಅದೆಲ್ಲದರ ಹೊಣೆ ನಮ್ಮ ಸರ್ಕಾರದ ಮೇಲೆ ಬಿತ್ತು. ಅದೆಲ್ಲವನ್ನೂ ನಿರ್ವಹಿಸುತ್ತಿದ್ದೇವೆ. ಇನ್ನೂ ಮೂರು ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ’ ಎಂದರು.
ಕೆ.ಆರ್.ನಗರಕ್ಕೆ ಬಂದು ನೋಡಲಿ:
‘ಕೆ.ಆರ್. ನಗರವನ್ನು ಹಿಂದಿದ್ದದವರು ಹಾಳು ಮಾಡಿದ್ದರು. ಸರ್ಕಾರ ಪಾಪರ್ ಆಗಿದೆ ಎನ್ನುವವರು ಕೆ.ಆರ್. ನಗರಕ್ಕೆ ಬಂದು ನೋಡಲಿ’ ಎಂದು ಸವಾಲು ಹಾಕಿದರು.
‘ಬಿಜೆಪಿಯವರು ಕೇವಲ ರಾಜಕೀಯ ಕಾರಣಕ್ಕಾಗಿ ಜನಾಕ್ರೋಶ ಎಂದು ಹೇಳುತ್ತಿದ್ದಾರೆಯೇ ಹೊರತು, ಜನರಲ್ಲಿ ನಮ್ಮ ಬಗ್ಗೆ ಆಕ್ರೋಶವಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ಕ್ಷೇತ್ರಗಳ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಹಾಗೂ ಶಾಸಕರ ಕರ್ತವ್ಯ. ಅದನ್ನು ನಾವು ಮಾಡುತ್ತಿದ್ದೇವೆ. ಹೀಗಾಗಿ, ಜನರಿಗೆ ನಮ್ಮ ಸರ್ಕಾರದ ಬಗ್ಗೆ ಸಮಾಧಾನವಿದೆ’ ಎಂದು ಹೇಳಿದರು.
‘ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಈ ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಟೀಕಿಸುತ್ತಾರೆ. ಸರ್ಕಾರದ ಖಜಾನೆ ಖಾಲಿಯಾಗಿದ್ದರೆ ₹513 ಕೋಟಿ ಮೊತ್ತದ ಕಾಮಗಾರಿಗಳನ್ನು ಇಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿತ್ತೇ?’ ಎಂದು ಕೇಳಿದರು.
ವಿರೋಧ ಪಕ್ಷದವರಿಂದ ಸುಳ್ಳು:
‘ಆರ್.ಅಶೋಕ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಅವರೆಲ್ಲರೂ ಬಹಳ ವರ್ಷಗಳಿಂದ ರಾಜಕೀಯದಲ್ಲಿದ್ದೂ ಸುಳ್ಳು ಹೇಳುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಜನರು ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದರೂ, ವಿರೋಧ ಪಕ್ಷದವರು ಸುಳ್ಳು ಹೇಳುತ್ತಾರೆ’ ಎಂದರು. ‘ನಾವು ಮಾಡಿರುವ ಸಾಧನೆಗಳನ್ನು ಹೇಳುತ್ತಾ ಹೋದರೆ ದಿನಗಳೇ ಬೇಕಾಗುತ್ತವೆ’ ಎಂದರು.
‘ಕಪ್ಪಡಿ ಸೇತುವೆ ನಿರ್ಮಾಣಕ್ಕೆ ₹25 ಕೋಟಿ ಒದಗಿಸಲಾಗಿದೆ. ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಸಾಗರಕಟ್ಟೆ ಸೇತುವೆ, ರಸ್ತೆ ವಿಸ್ತರಣೆ ಕಾಮಗಾರಿಗಳಿಗೆ ಹಾಗೂ ಪುರಸಭೆಗೆ ಎಸ್‌ಎಫ್‌ಸಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಯಂತ್ರೋಪಕರಣ ಬಳಸಲು ಸಲಹೆ:
ಮೈಸೂರು ಭಾಗದ ಕೃಷಿಕರೂ ವೈಜ್ಞಾನಿಕವಾಗಿ ಬೇಸಾಯ ಮಾಡಬೇಕು. ಉತ್ತಮ ಯಂತ್ರೋಪಕರಣ, ಬಿತ್ತನೆ ಬೀಜ, ರಸಗೊಬ್ಬರ ನೀಡಲಾಗುತ್ತಿದೆ. ಅವುಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು.
‘ಕೆ.ಆರ್. ನಗರದ ಅಭಿವೃದ್ಧಿಗೆ ಶಾಸಕ ಡಿ. ರವಿಶಂಕರ್ ಕಾರಣ. ಅಭಿವೃದ್ಧಿ ಮಾಡಿಸುವುದರಲ್ಲಿ ಅವರು ಮುಂದಿದ್ದಾರೆ. ನನ್ನ ಜೊತೆ ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ, ಹೆಚ್ಚು ಕೆಲಸ ಮಾಡಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು. ‘ಮುಂದಿನ ಚುನಾವಣೆಯಲ್ಲೂ ಜನರು ಅವರನ್ನು ಆಶೀರ್ವದಿಸಬೇಕು’ ಎಂದು ಕೋರಿದರು.
ಸಚಿವರಾದ ಡಾ.ಎಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಎನ್.ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಬಿ.ಎಸ್. ಸುರೇಶ್, ಎನ್.ಎಸ್. ಬೋಸರಾಜು, ಶಾಸಕರಾದ ಡಿ.ರವಿಶಂಕರ್, ಕೆ.ಹರೀಶ್‌ಗೌಡ, ಎಚ್.ಎಂ. ಗಣೇಶ್‌ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಆರ್.ನಗರ ಪುರಸಭೆ ಅಧ್ಯಕ್ಷ ಶಿವಕುಮಾರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ. ಸಿಇಒ ಎಸ್. ಯುಕೇಶ್‌ಕುಮಾರ್ ಪಾಲ್ಗೊಂಡಿದ್ದರು.
‘ಬಿಜೆಪಿಯ ದೋಷಾರೋಪಪಟ್ಟಿ ಸುಳ್ಳು’
‘ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ. ಆದರೆ ಟೀಕಿಸುವುದು ಹಾಗೂ ಸುಳ್ಳು ಹೇಳುವುದನ್ನು ಮಾತ್ರ ಬಿಡುವುದಿಲ್ಲ. ಬಿಜೆಪಿಯವರು ನಮ್ಮನ್ನು ಕೆಟ್ಟದಾಗಿ ಬಿಂಬಿಸಿ ದೋಷಾರೋಪಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿರುವುದೆಲ್ಲವೂ ಬರೀ ಸುಳ್ಳು. ಹೀಗೆ ಅವರಿಗೆ ಸುಳ್ಳು ಹೇಳಲು ನಾಚಿಕೆ ಆಗುವುದಿಲ್ಲವೇ? ಅವರದೆಂತಹ ನಾಲಿಗೆ?’ ಎಂದು ಸಿದ್ದರಾಮಯ್ಯ ಟೀಕಿಸಿದರು. ‘ಸುಳ್ಳು ಹೇಳುವುದಕ್ಕೂ ಮಿತಿ ಬೇಡವೇ? ನಾಚಿಕೆ ಆಗುವುದಿಲ್ಲವೇ? ಜನರಿಗೆ ಸುಳ್ಳು ಅರ್ಥ ಆಗುತ್ತದೆ ಎಂಬುದೂ ವಿರೋಧ ಪಕ್ಷದವರಿಗೆ ಗೊತ್ತಾಗುವುದಿಲ್ಲವೇ?’ ಎಂದು ವಾಗ್ದಾಳಿ ನಡೆಸಿದರು. ‘ಅವರದ್ದು ಸುಳ್ಳಲ್ಲವೇ?’ ಎಂದು ಮೂರು ಬಾರಿ ಕೇಳಿ ನೆರೆದಿದ್ದ ಜನರಿಂದ ‘ಸುಳ್ಳು’ ಎಂದು ಹೇಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.