ADVERTISEMENT

ಮೈಸೂರು | ಶಿಕ್ಷಣದಿಂದ ಸ್ವಾಭಿಮಾನಿ ಬದುಕು ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:04 IST
Last Updated 6 ಜನವರಿ 2026, 4:04 IST
ಕಲಾಮಂದಿರದಲ್ಲಿ ನಡೆದ ಕುಂಬಾರರ ಸಮ್ಮೇಳನದಲ್ಲಿ ಪಾಲ್ಗೊಂಡ ಜನಸ್ತೋಮ –ಪ್ರಜಾವಾಣಿ ಚಿತ್ರ
ಕಲಾಮಂದಿರದಲ್ಲಿ ನಡೆದ ಕುಂಬಾರರ ಸಮ್ಮೇಳನದಲ್ಲಿ ಪಾಲ್ಗೊಂಡ ಜನಸ್ತೋಮ –ಪ್ರಜಾವಾಣಿ ಚಿತ್ರ   

ಮೈಸೂರು: ‘ಉತ್ತಮ ಶಿಕ್ಷಣದಿಂದ ಮಾತ್ರ ನಾವೆಲ್ಲ ಮನುಷ್ಯರಾಗಿ, ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕಲಾಮಂದಿರದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕುಂಬಾರ ಸಂಘವು ಆಯೋಜಿಸಿದ್ದ ಸಂಘದ ಅಮೃತ ಮಹೋತ್ಸವ ಹಾಗೂ ಕುಂಬಾರರ ರಾಜ್ಯ ಮಟ್ಟದ ಮೊದಲ ಮಹಾಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣದ ಮಹತ್ವವನ್ನು ಮನಗಂಡು ಡಾ. ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲ ಹಕ್ಕನ್ನಾಗಿಸಿದರು. ಇದರಿಂದ ಶೂದ್ರರೆನಿಸಿಕೊಂಡ ತಳಸಮುದಾಯಗಳ ಜನರು ವಿದ್ಯಾವಂತರಾಗಲು ಸಾಧ್ಯವಾಯಿತು’ ಎಂದರು.

ADVERTISEMENT

‘ಕುಂಬಾರ ಸಮುದಾಯದವರು ಅತ್ಯಂತ ಹಿಂದುಳಿದ ಮತ್ತು ಕಡಿಮೆ ಜನಸಂಖ್ಯೆಯಿರುವ ಸಮುದಾಯದವರಾಗಿದ್ದಾರೆ. ಮಣ್ಣಿನ ಕಲಾಕೃತಿಗಳನ್ನು ನಿರ್ಮಿಸುವ ಕಲೆಯ ಪರಿಣಿತಿ ವಿಶೇಷವಾಗಿದೆ. ಈ ಕುಲಕಸುಬಿನ ಜೊತೆಗೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ವೈದ್ಯರು, ವಿಜ್ಞಾನಿಗಳು, ಪ್ರಾಧ್ಯಾಪಕರಾಗಬೇಕು. ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಬರಬೇಕು’ ಎಂದರು.

‘ಬೇಡರ ಜಾತಿಗೆ ಸೇರಿದ ವಾಲ್ಮೀಕಿ ರಾಮಾಯಣ ಬರೆದರು. ಬೆಸ್ತರ ಜಾತಿಗೆ ಸೇರಿದ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ಬರೆದರು. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ರತ್ನಪ್ಪ ಭರಮಪ್ಪ ಕುಂಬಾರರು ಸಮುದಾಯದ ಧೀಮಂತ ನಾಯಕರಾಗಿದ್ದರು. ನಾನು ವಕೀಲ ಶಿಕ್ಷಣ ಪಡೆದಿದ್ದರಿಂದಲೇ ಇಂದು ಮುಖ್ಯಮಂತ್ರಿಯಾಗಿ ನಿಮ್ಮೆದುರಿರಲು ಸಾಧ್ಯವಾಗಿದೆ. ಜಾತಿಗೂ, ಸಾಧನೆಗೂ ಸಂಬಂಧವಿಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ‘ತಳ ಸಮುದಾಯಗಳು ತಮ್ಮ ಹಕ್ಕಿಗಾಗಿ ಒಗ್ಗೂಡಬೇಕು ಎನ್ನುವುದು ಅಂಬೇಡ್ಕರ್ ಆಶಯವಾಗಿತ್ತು. ಕುಂಬಾರ ಸಮುದಾಯವು ತಡವಾಗಿ ಆದರೂ ಸಂಘಟನೆ ಮೂಲಕ ಒಗ್ಗೂಡುತ್ತಿರುವುದು ಉತ್ತಮ ಬೆಳವಣಿಗೆ. ಅಹಿಂದ ಸಮುದಾಯಗಳಿಗೆ ಶಕ್ತಿ ತುಂಬಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ಕುಂಬಾರ ಸಮುದಾಯದ ಮೋಹನದಾಸ ಪರಮಹಂಸ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಚಿವರಾದ ಸತೀಶ ಜಾರಕಿಹೊಳಿ, ಕೆ. ವೆಂಕಟೇಶ್‌, ಉತ್ತರ ಪ್ರದೇಶ ಸರ್ಕಾರದ ಸಚಿವ ಧರ್ಮವೀರ್‌ ಪ್ರಜಾಪತಿ ಕುಂಬಾರ, ಶಾಸಕರಾದ ಕೆ. ಹರೀಶ್‌ ಗೌಡ, ರವಿಶಂಕರ್, ದರ್ಶನ್‌ ಧ್ರುವನಾರಾಯಣ, ವಿಧಾನಪರಿಷತ್‌ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ, ಸಿ.ಎನ್. ಮಂಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್‌, ಮೈಸೂರು ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಎಚ್‌.ಎಸ್. ಪ್ರಕಾಶ್‌, ಪ್ರಧಾನ ಕಾರ್ಯದರ್ಶಿ ಕೆ.ಆರ್. ಸೋಮಶೇಖರ್, ಮುಖಂಡರಾದ ಎಂ.ಕೆ. ಸೋಮಶೇಖರ್, ಬಿ.ಎಸ್. ಕೃಷ್ಣಪ್ರಸಾದ್, ಕೆ.ಎಸ್. ಶಿವರಾಮು, ಶ್ರೀನಿವಾಸ್‌ ಪಾಲ್ಗೊಂಡಿದ್ದರು.

ಕುಂಬಾರರು ನಿಜವಾದ ಮಣ್ಣಿನ ಮಕ್ಕಳು. ಕಾಯಕ ಶ್ರದ್ದೆ ಹೊಂದಿರುವ ಸಮಾಜ ಉತ್ತಮ ಶಿಕ್ಷಣ ಸಂಘಟನೆ ಮೂಲಕ ಸಬಲರಾಗಬೇಕಿದೆ
ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ

ಸಭಾಂಗಣದ ಹೊರಗೂ ಜನಸಾಗರ

ಕುಂಬಾರ ಸಮುದಾಯದ ಮೊದಲ ರಾಜ್ಯಮಟ್ಟದ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. ಬೆಳಿಗ್ಗೆ 11ಕ್ಕೆಲ್ಲ ಕಲಾಮಂದಿರ ಭರ್ತಿ ಆಗಿದ್ದು ಪೊಲೀಸರು ಮುಖ್ಯದ್ವಾರ ಬಂದ್ ಮಾಡಬೇಕಾಯಿತು. ಹೊರಗೂ ನೂರಾರು ಜನರು ನಿಂತು ಎಲ್‌ಇಡಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ವೇದಿಕೆಯಲ್ಲಿ ಹಾಗೂ ಕಲಾಮಂದಿರದ ಮುಂಭಾಗ ಕುಂಬಾರಿಕೆಯ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಬಂದವರಿಗೆಲ್ಲ ಮಧ್ಯಾಹ್ನ ಊಟದ ವ್ಯವಸ್ಥೆಯೂ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.