ಮೈಸೂರು: ‘ಸುಳ್ಳು ಆರೋಪ ಮಾಡುತ್ತಿರುವ ಎಂ.ಲಕ್ಷ್ಮಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಸ್ನೇಹಮಯಿ ಕೃಷ್ಣ ಅವರು ದೇವರಾಜ ಠಾಣೆಗೆ ಶುಕ್ರವಾರ ದೂರು ನೀಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ವಿಜಯನಗರದಲ್ಲಿರುವ 14 ನಿವೇಶನ ನೀಡಬೇಕೆಂದು ವಿನಂತಿಸಿ ಬರೆದಿದ್ದ ಪತ್ರದಲ್ಲಿ ವೈಟ್ನರ್ ಬಳಸಲಾಗಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಎಕ್ಸ್ ಖಾತೆಯಲ್ಲಿ ವಿಡಿಯೊ ಹರಿ ಬಿಟ್ಟಿದ್ದು, ನಮ್ಮಲ್ಲಿದ್ದ ದಾಖಲೆ, ವಿಡಿಯೊ ದಲ್ಲಿದ್ದ ಪಾರ್ವತಿ ಅವರ ಸಹಿಗೂ ವ್ಯತ್ಯಾಸವಿದ್ದ ಕಾರಣ, ಪ್ರಾಧಿಕಾರದ ಕಡತದಲ್ಲಿದ್ದ ಮೂಲ ಪತ್ರ ತೆಗೆದು, ನಾಶಪಡಿಸಿ, ಹೊಸದಾಗಿ ಸೃಷ್ಟಿಸಿದ ಪತ್ರ ಸೇರಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಲಕ್ಷ್ಮೀಪುರಂ ಠಾಣೆಗೆ ದೂರರ್ಜಿ ನೀಡಿದ್ದೆ’ ಎಂದು ತಿಳಿಸಿದರು.
‘ಈ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದ ಎಂ. ಲಕ್ಷ್ಮಣ ನನ್ನ ವಿರುದ್ಧ ನಗರದಲ್ಲಿ 17, ಗ್ರಾಮಾಂತರದಲ್ಲಿ 12, ರಾಜ್ಯದ ಇತರೆಡೆ 44 ಪ್ರಕರಣ ಗಳು ಇರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ನನ್ನ ಪರವಾಗಿ ವ್ಯಕ್ತಿಯೊಬ್ಬರು ₹100 ಕೋಟಿಗೆ ಬೇಡಿಕೆ ಇಟ್ಟಿರುವ ಬಗ್ಗೆಯೂ ಸುಳ್ಳು ಆರೋಪ ಮಾಡಿದ್ದಾರೆ. ಅವರ ಮೊಬೈಲ್ ವಶಕ್ಕೆ ಪಡೆದು ಆರೋಪದ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಎಂ.ಲಕ್ಷಣ ಅವರು ಪಾಲಿಕೆ ಹಿಂಭಾಗವಿರುವ ದಳವಾಯಿ ಪ್ರೌಢ ಶಾಲೆಯಲ್ಲೇ ಕರ್ನಾಟಕ ರೀಜಿನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಎಂಬ ಸಂಸ್ಥೆ ಮೂಲಕ ವಿವಿಧ ಕೋರ್ಸ್ ನಡೆಸಿ, ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಪಡೆದು, ತರಬೇತಿ, ಪರೀಕ್ಷೆ ನಡೆಸದೆ ವಂಚನೆ ಮಾಡಿದ್ದಾರೆ. ಕೆಲವರಿಗೆ ಸುಳ್ಳು ಪ್ರಮಾಣ ಪತ್ರ, ಅಂಕಪಟ್ಟಿ ವಿತರಿಸಿದ್ದಾರೆ. ಹೀಗಾಗಿ ಈ ಬಗ್ಗೆಯೂ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ವಹಿಸಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.