ADVERTISEMENT

ಸಹಾಯ ಹಸ್ತ ಕಾರ್ಯಕ್ರಮ; ಸೈಕಲ್ ಜಾಥಾಕ್ಕೆ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 7:17 IST
Last Updated 7 ಜುಲೈ 2021, 7:17 IST
ಸೈಕಲ್ ಜಾಥಾಕ್ಕೆ ಸಿದ್ದರಾಮಯ್ಯ ಚಾಲನೆ
ಸೈಕಲ್ ಜಾಥಾಕ್ಕೆ ಸಿದ್ದರಾಮಯ್ಯ ಚಾಲನೆ   

ಮೈಸೂರು: ಕೆಪಿಸಿಸಿಯ `ಸಹಾಯ ಹಸ್ತ' ಕಾರ್ಯಕ್ರಮಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬುಧವಾರ ಇಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಲು‌ ವಿಫಲವಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಜನರಿಗೆ ಸಾಂತ್ವನ ಹೇಳಲು ಮುಂದಾಗಿದೆ. ಕೋವಿಡ್ ನಿಂದ ಸಂತ್ರಸ್ತರಾದವರ ಮನೆಗಳಿಗೆ ತೆರಳಿ ಮಾಹಿತಿ ಕಲೆಹಾಕುತ್ತೇವೆ. ಸಾಧ್ಯವಾದರೆ ಅವರಿಗೆ ಏನಾದರೂ ಸಹಾಯ ಮಾಡಲಾಗುವುದು ಎಂದರು.

ಕಾಂಗ್ರೆಸ್ ಬಡವರ, ಜನರ ಪಕ್ಷ. ಅದೊಂದು ಚಳವಳಿ.‌ ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷ ಅಲ್ಲ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನಾವು ಜನರ ಪರ ಇರುತ್ತೇವೆ ಎಂದು ಹೇಳಿದರು.

ADVERTISEMENT

ಸೈಕಲ್ ಜಾಥಾಕ್ಕೆ ಚಾಲನೆ: ಇಂಧನ ಬೆಲೆ ಏರಿಕೆ ವಿರೋಧಿಸಿ ಪಕ್ಷದ ವತಿಯಿಂದ ಆಯೋಜಿಸಿರುವ ಸೈಕಲ್ ಜಾಥಾಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು. ಸಿದ್ದರಾಮಯ್ಯ ಒಂದಷ್ಟು ದೂರ ಸೈಕಲ್ ಚಾಲನೆ ಮಾಡಿದರು.

ಕಾಂಗ್ರೆಸ್ ಭವನದಿಂದ ಆರಂಭವಾದ ಜಾಥಾ ಬಾಬು ಜಗಜೀವನ್ ರಾಮ್ ಸರ್ಕಲ್ - ಇರ್ವಿನ್ ರಸ್ತೆ- ಅಶೋಕ ರಸ್ತೆ- ಮೂಲಕ ಸಾಗಿ ಗಾಂಧಿವೃತ್ತದಲ್ಲಿ ಕೊನೆಗೊಂಡಿತು.

ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧುವನಾರಾಯಣ, ಮುಖಂಡರಾದ ರಮಾನಾಥ ರೈ, ಡಾ. ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಎಚ್.ಪಿ. ಮಂಜುನಾಥ್, ಸಿ.ಅನಿಲ್ ಕುಮಾರ್, ಮುಖಂಡರಾದ ವಾಸು, ಎಂ.ಕೆ. ಸೋಮಶೇಖರ್, ಕಳಲೆ ಕೇಶವಮೂರ್ತಿ, ಡಿ. ರವಿಶಂಕರ್, ಹಂಗಾಮಿ ಮೇಯರ್ ಅನ್ವರ್ ಬೇಗ್, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಜೆ ವಿಜಯ್ ಕುಮಾರ್, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ ಪಾಲ್ಗೊಂಡರು.

ಮೈಸೂರು ನಗರ ಹಾಗೂ ಜಿಲ್ಲೆಯ ಕೆಪಿಸಿಸಿಯ ಉಸ್ತುವಾರಿಗಳು , ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.

ಪಕ್ಷಕ್ಕೆ ಯಾರನ್ನೇ ಸೇರಿಸುವುದಾದರೂ ತಕರಾರಿಲ್ಲ: ಸಿದ್ದರಾಮಯ್ಯ

'ಪಕ್ಷಕ್ಕೆ ಯಾರನ್ನೇ ಸೇರಿಸುವುದಾದರೂ ತಕರಾರಿಲ್ಲ. ಆದರೆ ಪದೇ ಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು‌' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

'ಅಧಿಕಾರಕ್ಕಾಗಿ ಯಾರೂ ಪಕ್ಷಕ್ಕೆ ಬರಬಾರದು. ಜನಸೇವೆಯ ಗುರಿ ಇದ್ದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.