ADVERTISEMENT

ಮ–ನರೇಗಾ ಮರುಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸ್‌ ಅಹೋರಾತ್ರಿ ಸತ್ಯಾಗ್ರಹ ಅಂತ್ಯ

ಮ–ನರೇಗಾ ಮರುಸ್ಥಾಪನೆಗೆ ಆಗ್ರಹಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:03 IST
Last Updated 3 ಫೆಬ್ರುವರಿ 2026, 4:03 IST
ಮೈಸೂರಿನ ಪುರಭವನ ಆವರಣದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಸತ್ಯಾಗ್ರಹವನ್ನು ಸೋಮವಾರ ಬೆಳಿಗ್ಗೆ ಅಂತ್ಯಗೊಳಿಸಲಾಯಿತು
ಮೈಸೂರಿನ ಪುರಭವನ ಆವರಣದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಸತ್ಯಾಗ್ರಹವನ್ನು ಸೋಮವಾರ ಬೆಳಿಗ್ಗೆ ಅಂತ್ಯಗೊಳಿಸಲಾಯಿತು   

ಮೈಸೂರು: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ಮ–ನರೇಗಾ) ಮರುಸ್ಥಾಪನೆಗೆ ಆಗ್ರಹಿಸಿ ಹಾಗೂ ‘ವಿಬಿ–ಜಿ ರಾಮ್‌ ಜಿ’ ಕಾಯ್ದೆ ವಿರೋಧಿಸಿ ಕಾಂಗ್ರೆಸ್‌ ಪಕ್ಷದಿಂದ ಇಲ್ಲಿನ ಪುರಭವನ ಆವರಣದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಸತ್ಯಾಗ್ರಹ ಸೋಮವಾರ ಬೆಳಿಗ್ಗೆ ಮುಕ್ತಾಯಗೊಂಡಿತು.

ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ರಾತ್ರಿಯಿಡೀ ಸತ್ಯಾಗ್ರಹ ನಡೆಸಿದರು. ಕಾಂಗ್ರೆಸ್‌ ನಗರ ಹಾಗೂ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಈ ಸತ್ಯಾಗ್ರಹ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಮತ್ತು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ನಡೆಯಿತು.

‘ಕೇಂದ್ರ ಬಿಜೆಪಿ ಸರ್ಕಾರವು ಮ–ನರೇಗಾ ಕಾಯ್ದೆಯಲ್ಲಿನ ಆಶಯಗಳನ್ನು ಬುಡಮೇಲು ಮಾಡುವ ಮೂಲಕ ಮಹಾತ್ಮ ಗಾಂಧಿಯನ್ನು ಅವಮಾನಿಸಿದೆ’ ಎಂದು ಆರೋಪಿಸಲಾಯಿತು. ಮ–ನರೇಗಾ ಮರುಸ್ಥಾಪನೆಗಾಗಿ ಹೋರಾಟ ತೀವ್ರಗೊಳಿಸುವ ಸಂಕಲ್ಪವನ್ನು ಸತ್ಯಾಗ್ರಹದಲ್ಲಿ ಮಾಡಲಾಯಿತು.

ADVERTISEMENT

ಮಹದೇವಪ್ಪ ಮಾತನಾಡಿ, ‘ಕೇಂದ್ರ ಸರ್ಕಾರವು ಬಡವರಿಗೆ ಕೆಲಸ ದೊರೆಯಲಾಗದಂತೆ ಮಾಡಿದೆ. ಇದನ್ನು ವಿರೋಧಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ತರಾತುರಿಯಲ್ಲಿ ತಂದಿರುವ ವಿಬಿ– ಜಿ ರಾಮ್‌ ಜಿ ಕಾಯ್ದೆಯನ್ನು ವಾಪಸ್‌ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಡಾ. ಬಿ.ಆರ್‌. ಅಂಬೇಡ್ಕರ್‌ ನೀಡಿದ ಸಂವಿಧಾನದ ಆಶಯದಂತೆ ಮ–ನರೇಗಾ ಯೋಜನೆಯಲ್ಲಿ ಜನರಿಗೆ ದುಡಿಯುವ ಹಕ್ಕು ಕೊಟ್ಟಿದ್ದೆವು. ಅದರ ಮೇಲೆ ಬಿಜೆಪಿಯವರು ಗದಾಪ್ರಹಾರ ಮಾಡುತ್ತಿದ್ದಾರೆ. ದೇಶದಲ್ಲಿ 12 ಕೋಟಿ ಮಂದಿ ಯೋಜನೆಯನ್ನು ನಂಬಿಕೊಂಡಿದ್ದರು. ಅದರಲ್ಲಿ ಶೇ 53ರಷ್ಟು ಮಹಿಳೆಯರೇ ಇದ್ದರು. ರಾಜ್ಯದಲ್ಲಿ 71 ಲಕ್ಷ ಕುಟುಂಬಗಳು ಉದ್ಯೋಗ ಖಾತ್ರಿ ಯೋಜನೆ ಮೇಲೆ ಬದುಕು ನಡೆಸುತ್ತಿದ್ದವು. ಅದರಲ್ಲಿ ಶೇ 51ರಷ್ಟು ಮಹಿಳೆಯರಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೈಹಿಡಿದಿದ್ದೇ ಈ ಯೋಜನೆ. ಇದನ್ನು ಉಳಿಸಿಕೊಳ್ಳಬೇಕು’ ಎಂದರು.

‘ದೇಶದಲ್ಲೇ ಮೊದಲ ಬಾರಿಗೆ ಇಂತಹ ಐತಿಹಾಸಿಕ ಹೋರಾಟವನ್ನು ಕಾಂಗ್ರೆಸ್‌ ನಗರ ಹಾಗೂ ಜಿಲ್ಲಾ ಸಮಿತಿ ಮಾಡಿದೆ’ ಎಂದು ಶ್ಲಾಘಿಸಿದರು.

ಕ್ರಾಂತಿ ಗೀತೆ: ತಡರಾತ್ರಿ ಕ್ರಾಂತಿಗೀತೆಗಳನ್ನು ಹಾಡಲಾಯಿತು. ಬಳಿಕ ಮ–ನರೇಗಾ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿ ಆ ಯೋಜನೆಯಿಂದ ಆಗುತ್ತಿದ್ದ ಅನುಕೂಲಗಳನ್ನು ಮನವರಿಕೆ ಮಾಡಿಕೊಡಲಾಯಿತು. ಬೆಳಗಿನ ಜಾವ, ಮಹಾತ್ಮ ಗಾಂಧೀಜಿ ಜೀವನಾಧಾರಿತ ಚಲನಚಿತ್ರ, ಬಳಿಕ ಡಾ.ಬಿ.ಆರ್‌. ಅಂಬೇಡ್ಕರ್‌ ಜೀವನಾಧರಿತ ಚಲನಚಿ‌ತ್ರವನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಬೆಳಿಗ್ಗೆ ರಾಷ್ಟ್ರಗೀತೆ ಹಾಡುವ ಮೂಲಕ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಯಿತು.

ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್‌ ಅವರು ಎಚ್‌.ಸಿ. ಮಹದೇವಪ್ಪ ಮತ್ತು ವಿ.ಎಸ್. ಉಗ್ರಪ್ಪ ಅವರಿಂದ ಮನವಿ ಸ್ವೀಕರಿಸಿದರು.

ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್, ದರ್ಶನ್‌ ಧ್ರುವನಾರಾಯಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿರ್ದೇಶಕ ಲೋಕೇಶ್‌ಕುಮಾರ್‌ ಎಂ. (ಮಾದಾಪುರ), ಮುಖಂಡರಾದ ಎಂ.ಶಿವಣ್ಣ, ಈಶ್ವರ ಚಕ್ಕಡಿ, ಲತಾ ಸಿದ್ದಶೆಟ್ಟಿ, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಮಂಜುಳಾ ಮೊದಲಾದವರು ಪಾಲ್ಗೊಂಡಿದ್ದರು. 

‘ಸುಂದರವಾದವ್ರು ಬಂದ್ರೆ ಟಚ್‌ ಮಾಡಂಗಿಲ್ಲ!’ 

ಮೈಸೂರು: ‘ಕೋವಿಡ್ ಬಂದಾಗ ಕೆಲಸ ಇಲ್ಲದಂತಾಯಿತು. ಮನೆ ಬಿಟ್ಟು ಹೋಗದಂತಾಯಿತು. ತರಕಾರಿಯನ್ನೂ ಮುಟ್ಟಂಗಿಲ್ಲ. ಸುಂದರವಾದವರು ಬಂದ್ರೆ ಅವರನ್ನೂ ಟಚ್‌ ಮಾಡಂಗಿಲ್ಲ. ಭಯಪಡುವ ಪರಿಸ್ಥಿತಿ ಇತ್ತು. ಆಗ ದೇಶದಲ್ಲಿ 19 ಕೋಟಿ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದೇ ಉದ್ಯೋಗ ಖಾತ್ರಿ ಯೋಜನೆ’ ಎಂದು ಮಹದೇವಪ್ಪ ಹೇಳಿದರು. ‘ಹೊಸ ಕಾಯ್ದೆಯಿಂದ ಕೆಲಸ ದೊರೆಯದೇ ಹಳ್ಳಿ ಜನ ಪಟ್ಟಣದ ಕಡೆಗೆ ಹೋಗುತ್ತಾರೆ. ಇದರಿಂದ ಹಳ್ಳಿಗಳು ಅನಾಥವಾಗುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಗಾಂಧೀಜಿ ತತ್ವಕ್ಕೆ ವಿರುದ್ಧವಾದ ನಿಲುವನ್ನು ಬಿಜೆಪಿ ಹೊಂದಿದೆ’ ಎಂದು ದೂರಿದರು. ‘ರಾಜಕೀಯ ಅಧಿಕಾರ ಮೊಟಕುಗೊಳಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಸರ್ವಾಧಿಕಾರ ಧೋರಣೆ ಮೂಲಕ ರಾಜ್ಯಗಳ ಆಡಳಿತಕ್ಕೆ ಮೂಗುದಾರ ಹಾಕುತ್ತಿದ್ದಾರೆ. ದುಡಿಯುವ ಕೈಗಳಿಂದ ಕೆಲಸ ಕಿತ್ತುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.