ADVERTISEMENT

ಎಂಸಿಡಿಸಿಸಿಬಿ: ಕಾಂಗ್ರೆಸ್‌ ಬೆಂಬಲಿತರಿಗೆ ಜಯ

ಜಿ.ಎನ್.ಮಂಜುನಾಥ್, ಎಸ್.ಚಂದ್ರಶೇಖರ್, ಆರ್. ನರೇಂದ್ರಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 8:32 IST
Last Updated 14 ಡಿಸೆಂಬರ್ 2025, 8:32 IST
ಜಿ.ಡಿ.ಹರೀಶ್‌ ಗೌಡ
ಜಿ.ಡಿ.ಹರೀಶ್‌ ಗೌಡ   

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಎಂಸಿಡಿಸಿಸಿಬಿ) ಆಡಳಿತ ಮಂಡಳಿಯ ಮೂರು ಸ್ಥಾನಗಳಿಗೆ ‌ಜೂ. 26ರಂದು ನಡೆದಿದ್ದ ಚುನಾವಣೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಶುಕ್ರವಾರ ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಮೂವರು ಜಯಗಳಿಸಿದ್ದಾರೆ. ಆದರೆ ‘ಮತಪತ್ರ ಬದಲಿಸಿ ಕಾಂಗ್ರೆಸ್‌ ಗೆದ್ದಿದೆ’ ಎಂದು ಜೆಡಿಎಸ್ ಶಾಸಕ ಜಿ.ಡಿ.ಹರೀಶ್‌ ಗೌಡ ಆರೋಪಿಸಿದ್ದಾರೆ.

ಪಟ್ಟಣ ಸಹಕಾರ ಬ್ಯಾಂಕ್‌ ಮತ್ತು ಗೃಹ ನಿರ್ಮಾಣ ಸಂಘಗಳ ಪ್ರತಿನಿಧಿಗಳ ಕ್ಷೇತ್ರದಿಂದ ಜಿ.ಎನ್.ಮಂಜುನಾಥ್, ತಾಲ್ಲೂಕು ಜಿಲ್ಲೆ ಹಾಗೂ ತಾಲ್ಲೂಕು ಮೇಲ್ಪಟ್ಟು ಕಾರ್ಯ ವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕುಗಳ ಪ್ರತಿನಿಧಿ ಕ್ಷೇತ್ರದಿಂದ ಎಸ್.ಚಂದ್ರಶೇಖರ್, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿ ಕ್ಷೇತ್ರದಿಂದ ಆರ್. ನರೇಂದ್ರ ಗೆಲುವು ಸಾಧಿಸಿದ್ದಾರೆ.

ಜೂನ್ 26ರಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಬೆಂಬಲಿತ ಆರು ಮಂದಿ, ಜೆಡಿಎಸ್‌- ಬಿಜೆಪಿ ಬೆಂಬಲಿತ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ, ಎಂಸಿಡಿಸಿಸಿ ಬ್ಯಾಂಕ್ ಮತದಾನದ ಹಕ್ಕು ನಿರಾಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಕೆಲವು ಮತದಾರರು ನ್ಯಾಯಾಲಯದ ಅನುಮತಿ ಪಡೆದು ಮತ ಚಲಾವಣೆ ಮಾಡಿದ್ದರು. ಆ ಮತಗಳನ್ನು ಎಣಿಕೆಗೆ ಪರಿಗಣಿಸದಂತೆ ನ್ಯಾಯಾಲಯ ಆದೇಶ ನೀಡಿತ್ತು.

ADVERTISEMENT

ಅಂದು ನಡೆದಿದ್ದ ಮತ ಎಣಿಕೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕ್ ಮತ್ತು ಗೃಹ ನಿರ್ಮಾಣ ಸಂಘಗಳ ಪ್ರತಿನಿಧಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್‌ಬಿಎಂ ಮಂಜು -23, ಜಿಎನ್.ಮಂಜುನಾಥ್-22, ಎಚ್.ವಿ. ರಾಜೀವ್-9 ಮತ ಪಡೆದಿದ್ದರು. ಹೊಸ ಆದೇಶದಂತೆ ನ್ಯಾಯಾಲಯದ  ಅನುಮತಿ ಪಡೆದು ಮತ ಚಲಾಯಿಸಿದ್ದ ಮತದಾರರ ಮತವನ್ನೂ ಸೇರಿಸಿ ಎಣಿಕೆ ಮಾಡಿದಾಗ ಜಿ.ಎನ್.ಮಂಜುನಾಥ್‌ಗೆ ಎರಡು ಹೆಚ್ಚುವರಿ ಮತ ಬಿದ್ದು 24 ಮತಗಳನ್ನು ಪಡೆದು ಜಯಗಳಿಸಿದರೆ, ಎಚ್‌.ವಿ. ರಾಜೀವ್‌ಗೆ ಮತ್ತೊಂದು ಮತ ಸೇರ್ಪಡೆಯಾಗಿದೆ.

ತಾಲ್ಲೂಕು ಜಿಲ್ಲೆ ಹಾಗೂ ತಾಲ್ಲೂಕು ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕುಗಳ ಪ್ರತಿನಿಧಿಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಚಂದ್ರಶೇಖರ್ 23 ಮತ, ಟಿ. ರಾಮೇಗೌಡ 27 ಮತಗಳನ್ನು ಪಡೆದಿದ್ದರು.

ಆದರೆ, ನ್ಯಾಯಾಲಯದ ಅನುಮತಿ ಪಡೆದು ಮತ ಚಲಾಯಿಸಿದ್ದ 9 ಮತಗಳನ್ನು ಎಣಿಕೆ ಮಾಡಿದಾಗ ಎಸ್.ಚಂದ್ರಶೇಖರ್‌ಗೆ ಹೆಚ್ಚುವರಿ ಏಳು ಮತಗಳು ಬಿದ್ದು ಒಟ್ಟು 30 ಮತ ಪಡೆದು ಗೆಲುವು ಸಾಧಿಸಿದರು. ಹೆಚ್ಚುವರಿಯಾಗಿ 2 ಮತ ಪಡೆದ ಟಿ.ರಾಮೇಗೌಡ ಒಂದು ಮತದ ಅಂತರದಿಂದ ಸೋಲು ಅನುಭವಿಸಿದ್ದಾರೆ. ಆರ್.ನರೇಂದ್ರ 9 ಮತ ಪಡೆದು ಗೆಲುವು ಸಾಧಿಸಿದರು.

ಎಚ್.ಡಿ.ಕೋಟೆ- ಸರಗೂರು ತಾಲ್ಲೂಕು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಿಲ್ ಚಿಕ್ಕಮಾದು ಅವರಿಗೆ ನ್ಯಾಯಾಲಯದ ಅನುಮತಿ ಪಡೆದಿದ್ದ ಒಬ್ಬ ಮತದಾರ ಹಕ್ಕು ಚಲಾಯಿಸಿದ್ದರಿಂದ ವಿಜೇತರಾಗಿದ್ದರು. ನ್ಯಾಯಾಲಯದ ನಿರ್ಧಾರವನ್ನು ಅವಲಂಬಿಸಿದ್ದ ಎಂಸಿಡಿಸಿಸಿಬಿ ಚುನಾವಣೆಯ ಫಲಿತಾಂಶ ಅಂತಿಮಗೊಂಡಿದ್ದು, ಅಧ್ಯಕ್ಷ ಸ್ಥಾನದ ಆಯ್ಕೆಗೆ ಕಸರತ್ತು ಆರಂಭಗೊಂಡಿದೆ. ಕಾಂಗ್ರೆಸ್‌ ಬೆಂಬಲಿತ 10 ಜನ ಗೆದ್ದಿರುವುದರಿಂದ ಅವರ ಹಾದಿ ಸುಗಮವಾಗಿದೆ ಎಂಬ ಚರ್ಚೆಗಳಾಗುತ್ತಿವೆ.

ಕಾನೂನು ಪ್ರಕಾರ ನ್ಯಾಯಾಲಯದ ಅನುಮತಿ ಪಡೆದು ಮತ ಎಣಿಕೆ ಆಗಿದೆ. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ
– ಎಸ್.ಚಂದ್ರಶೇಖರ್, ವಿಜೇತ ಅಭ್ಯರ್ಥಿ
ಹರೀಶ್‌ ಗೌಡ ಅವರು ಶಾಸಕರು ಅವರ ಬಾಯಲ್ಲಿ ಈ ರೀತಿಯ ಮಾತು ಬರಬಾರದು. ನಾನು ಈ ಹಿಂದೆ ಸೋತಾಗ ಯಾರನ್ನೂ ದೂರಿಲ್ಲ. ಈ ಬಾರಿ ಕಾನೂನಾತ್ಮಕ ಗೆಲುವು ಪಡೆಸಿದ್ದೇನೆ. ಅಧ್ಯಕ್ಷ ಸ್ಥಾನದ ಕುರಿತು ಯಾವುದೇ ಚರ್ಚೆ ನಡೆದಿಲ್ಲ‌
– ಜಿ.ಎನ್.ಮಂಜುನಾಥ್, ವಿಜೇತ ಅಭ್ಯರ್ಥಿ

‘ಮತ ಪತ್ರ ಬದಲಾಯಿಸಿ ಕಾಂಗ್ರೆಸ್‌ ಗೆಲುವು’

ಮೈಸೂರು: ‘ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತಪತ್ರಗಳನ್ನೇ ಬದಲಾಯಿಸಿ ಗೆಲವು ಸಾಧಿಸಿದೆ. ಈ ಬಗ್ಗೆ ಹೈಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.

ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ಸಹಕಾರ ಸಂಘಗಳ ಚುನಾವಣೆಯಲ್ಲಿ 5 ಮತಗಳನ್ನು ಹೆಚ್ಚುವರಿಯಾಗಿ ಸೇರಿಸಿ ಗೆಲುವು ಸಾಧಿಸಿದ್ದೇವೆಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದರು. ಇದು ಅದರ ಮುಂದುವರಿದ ಭಾಗ. ನ್ಯಾಯಾಲಯ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿತ್ತು. ಅದನ್ನು ಉಲ್ಲಂಘಿಸಿ ಫಲಿತಾಂಶ ಘೋಷಿಸಲಾಗಿದೆ’ ಎಂದು ಆರೋಪಿಸಿದರು.

‘ಮೂವರು ಮತದಾರರಲ್ಲಿ ಇಬ್ಬರು ನಾವು ನಿಮಗೇ ಮತ ನೀಡಿದ್ದೇವೆ. ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧ. ಬೂತ್‌ನಲ್ಲೇ ಮತಪತ್ರ ಬದಲಾಯಿಸಿದ್ದಾರೆ ಎನ್ನುತ್ತಿದ್ದಾರೆ. ಈ ಘಟನೆಗಳು ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಹೊರಟು ಹೋಗುವಂತೆ ಮಾಡಿದೆ. ಬೂತ್‌ನ ಸಿಸಿಟಿವಿ ಕ್ಯಾಮೆರಾ ದಾಖಲೆಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದು ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.