
‘ರಾಷ್ಟ್ರೀಯ ವಿಚಾರಸಂಕಿರಣ’ದಲ್ಲಿ ಚಿಂತಕ ಲಕ್ಷ್ಮಣನ್ ಮಾತನಾಡಿದರು. ರೇಖಾರಾಜ್, ಪ್ರೊ.ಡಿ.ಜೀವನ್‌ಕುಮಾರ್ ಪಾಲ್ಲೊಂಡಿದ್ದರು
ಮೈಸೂರು: ‘ಅಂಬೇಡ್ಕರ್ ರಚಿತ ಸಂವಿಧಾನವು ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆಯ ಶಕ್ತಿಗಳಿಂದ ಅಪಾಯದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯೂ ನಡೆದಿದ್ದು, ಪ್ರಜಾಪ್ರಭುತ್ವದ ಅಡಿಪಾಯ ಕುಸಿಯುತ್ತಿದೆ. ಜನ ಹೋರಾಟ ತುರ್ತಾಗಿದೆ’ ಎಂಬ ಅಭಿಪ್ರಾಯವು ಶನಿವಾರ ಇಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ವಿಚಾರಸಂಕಿರಣದ ಗೋಷ್ಠಿಗಳಲ್ಲಿ ಮೊಳಗಿತು.
ಕಿರುರಂಗಮಂದಿರದಲ್ಲಿ ವಿಚಾರಸಂಕಿರಣ ಉದ್ಘಾಟಿಸಿದ ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಅವರಿಂದ ಆರಂಭವಾದ ಕಳವಳದ ಮಾತುಗಳು, ಸಂಜೆವರೆಗೂ ವಿವಿಧ ವಿಷಯಗಳಲ್ಲಿ ವಿಚಾರ ಮಂಡಿಸಿದ ಚಿಂತಕರಿಂದಲೂ ವ್ಯಕ್ತವಾಯಿತು. ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಜನರು ಆಸಕ್ತಿಯಿಂದ ಕೇಳಿದರು. ಸಭಾಗೃಹ ಕಿಕ್ಕಿರಿದು ತುಂಬಿದ್ದರಿಂದ ಆವರಣದ ಹೊರಭಾಗದಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆಯಲ್ಲೂ ವೀಕ್ಷಿಸಿದರು. ಬಿರುಸಿನ ಚರ್ಚೆಗಳಲ್ಲೂ ಪಾಲ್ಗೊಂಡರು.
ಮಾರ್ಗದರ್ಶಿ:
‘ಸಂವಿಧಾನವು ಕೇವಲ ಆಡಳಿತಾತ್ಮಕ ಅಧಿಕಾರ ನಿಯಂತ್ರಿಸುವ ದಾಖಲೆಯಲ್ಲ. ಜನರನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಬಲಗೊಳಿಸುವ ಮಾರ್ಗದರ್ಶಿ’ ಎಂದು ಪತ್ರಕರ್ತ ಸಿದ್ಧಾರ್ಥ ವರದರಾಜನ್ ಹೇಳಿದರು.
‘ದೇಶದಲ್ಲಿ ಅಲ್ಲದೇ, ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾನವ ಹಕ್ಕುಗಳು ನಿರಂತರ ಉಲ್ಲಂಘನೆಯಾಗುತ್ತಿವೆ. ಮತ್ತೊಂದು ದೇಶದ ಮೇಲೆ ದಾಳಿ ಮಾಡುವುದು. ಅಧ್ಯಕ್ಷರನ್ನು ಅಪಹರಿಸುವುದು. ಸಾಮಾನ್ಯ ಜನರ ಮೇಲೂ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವವಾದಿ ಎನ್ನುವ ಅಮೆರಿಕವೇ ಮಾಡಿದೆ. ಅಲ್ಲಿ ನಿರ್ಭಿಡೆಯಿಂದ ಪ್ರಶ್ನಿಸಬಹುದು. ಆದರೆ, ಭಾರತದಲ್ಲಿ ಪ್ರಶ್ನಿಸುವುದೇ ಕಷ್ಟವಾಗಿದೆ’ ಎಂದರು.
ವಿಶೇಷ ಕಾನೂನು:
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಸ್ವಾತಂತ್ರ್ಯ ಬಂದು 78 ವರ್ಷವಾದರೂ ಸಾಮಾಜಿಕ ಬಹಿಷ್ಕಾರ, ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ವಿಶೇಷ ಕಾನೂನು ರೂಪಿಸಲಾಗುವುದು’ ಎಂದು ಹೇಳಿದರು.
‘ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಹಾಗೂ ಚುನಾವಣೆ ಆಯೋಗವನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಬಿಹಾರ ಚುನಾವಣೆಗೆ ಮುನ್ನ ಆಳುವ ಪಕ್ಷ ಮಹಿಳೆಯರ ಖಾತೆಗೆ ₹ 10 ಸಾವಿರ ಹಾಕಿದೆ. ಇದು ನೀತಿಸಂಹಿತೆಯ ಉಲ್ಲಂಘನೆ ಅಲ್ಲವೇ?’ ಎಂದು ಕೇಳಿದರು.
ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್, ‘ಮೂಲಭೂತವಾದ ಮತ್ತು ನಿರಂಕುಶ ಪ್ರಭುತ್ವ ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು, ಅದನ್ನು ಕೊನೆಗಾಣಿಸಬೇಕು’ ಎಂದರು.
‘ಮೊದಲನೇ ಲೋಕಸಭಾ ಚುನಾವಣೆ ನಡೆದಾಗ ಸಿಪಿಐ ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಇಂದು ಸಿಪಿಐ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ಕಣ್ಣ ಮುಂದಿದೆ. ವರ್ಗ ಹೋರಾಟದ ಜೊತೆಗೆ ಜಾತಿವಿನಾಶವೂ ಅಗತ್ಯವಾಗಿದೆ. ಜಾತಿ ವಿನಾಶದ ಕಡೆಗೆ ಪ್ರಭುತ್ವ ಗಮನ ಕೊಡದಿದ್ದರೆ ನಿರಂಕುಶ ಪ್ರಭುತ್ವ ಆವರಿಸಿಕೊಳ್ಳುತ್ತದೆ. ಸಂವಿಧಾನದ ಜೊತೆಗೆ ನಮ್ಮೆಲ್ಲರ ಧ್ವನಿಯನ್ನು ದಮನ ಮಾಡುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಲೋಕನಾಥ್, ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಸಾಬಿರ್ ಅಹ್ಮದ್ ಮುಲ್ಲಾ, ಮೈಸೂರು ವಿ.ವಿ. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಎಂ.ಡಿ.ಸುದರ್ಶನ್ ಪಾಲ್ಗೊಂಡಿದ್ದರು.
ಸಂವಿಧಾನದ ಮಹತ್ವ ಸಾರಿದ ಸಂವಾದ ಪ್ರೇಕ್ಷಕರಲ್ಲಿ ನಡೆದ ಬಿರುಸಿನ ಚರ್ಚೆಗಳು ಸಂದಣಿಯಿಂದ ಎಲ್‌ಇಡಿ ಪರದೆಯಲ್ಲಿ ವೀಕ್ಷಣೆ
‘ವಿದೇಶದಲ್ಲೂ ಜಾತಿ ತಾರತಮ್ಯ’: ‘ಅನಿವಾಸಿ ಭಾರತೀಯರೂ ಜಾತಿ ತಾರತಮ್ಯಗಳನ್ನು ವಿದೇಶಗಳಲ್ಲೂ ಮುಂದುವರಿಸಿದ್ದಾರೆ. ಅಲ್ಲಿ ತಾರತಮ್ಯ ಪ್ರಕರಣಗಳಿಗೆ ಶಿಕ್ಷೆ ನೀಡುವ ಕಾನೂನು ಜಾರಿ ಆಗದಂತೆ ನೋಡಿಕೊಂಡಿದ್ದಾರೆ’ ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಕೆ.ಪಿ.ಅಶ್ವಿನಿ ಹೇಳಿದರು. ‘ಜಾಗತಿಕ ಮತ್ತು ಸ್ಥಳೀಯ ಸಾಮಾಜಿಕ ಅಸಮಾನತೆಗಳ ನಿರ್ಮೂಲನೆ’ ಕುರಿತು ಮಾತನಾಡಿದ ಅವರು ‘ಅಮೆರಿಕದ ಸಿಯಾಟಲ್ ಕ್ಯಾಲಿಫೋರ್ನಿಯಾಗಳಲ್ಲಿ ಜಾತಿ ತಾರತಮ್ಯ ಅಪರಾಧವೆಂಬ ಕಾನೂನು ಜಾರಿಗೊಳಿಸಲು ಮುಂದಾದಾಗ ಪ್ರತಿಭಟನೆ ಹಾಗೂ ಲಾಬಿಗಳು ನಡೆದಿದ್ದವು. ಕೊನೆಗೂ ಜಾರಿಯಾಗಲಿಲ್ಲ’ ಎಂದರು. ‘ಫ್ಯಾಸಿಸಂ ವಿರುದ್ಧ ಪ್ರತಿರೋಧದ ಸಂಕೇತವಾದ ಸಂವಿಧಾನ’ ಕುರಿತು ಮಾತನಾಡಿದ ಡಾ.ಎಚ್.ವಿ.ವಾಸು ‘ಅಂಬೇಡ್ಕರ್ ಎಲ್ಲ ಜನ ಚಳವಳಿಗಳ ಸ್ಫೂರ್ತಿಯಾಗಿ ಹೊಮ್ಮಿದ್ದಾರೆ. ಪರಿಶಿಷ್ಟರಲ್ಲದೇ ಅಲ್ಪಸಂಖ್ಯಾತರು ಮಹಿಳೆಯರ ಹೋರಾಟದ ಸ್ಫೂರ್ತಿಯಾಗಿದ್ದಾರೆ. ಆದರೆ ಅವರ ಆಶಯಗಳು ಜನರ ನಿತ್ಯದ ಬದುಕಿನಲ್ಲಿ ಇಲ್ಲವಾಗಿದೆ. ತಾರತಮ್ಯಗಳು ಮುಂದುವರಿದಿವೆ’ ಎಂದರು. ಪ್ರೊ.ಡಿ.ಆನಂದ ಅಧ್ಯಕ್ಷತೆ ವಹಿಸಿದ್ದರು.
‘ಆರ್ಥಿಕ ಸಾಮಾಜಿಕ ಸಮಾನತೆ ಸಿಕ್ಕಿಲ್ಲ: ‘ಪ್ರಜಾಪ್ರಭುತ್ವ ಕೇವಲ ಆಡಳಿತ ವ್ಯವಸ್ಥೆಯಲ್ಲ. ಅದು ಸಾಮಾಜಿಕ ಒಳಗೊಳ್ಳುವಿಕೆ. ಎಲ್ಲ ಪ್ರಜೆಗಳು ಸಿಗುವ ರಾಜಕೀಯ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರೆತಾಗ ಮಾತ್ರವೇ ಪ್ರಜಾಪ್ರಭುತ್ವ ಉಳಿಯುತ್ತದೆ’ ಎಂದು ಚೆನ್ನೈನ ಚಿಂತಕ ಲಕ್ಷ್ಮಣನ್ ಪ್ರತಿಪಾದಿಸಿದರು. ‘ಸಮಕಾಲೀನ ಭಾರತ ಮತ್ತು ಒಳಗೊಳ್ಳುವ ರಾಜಕಾರಣ’ ಕುರಿತು ಮಾತನಾಡಿದ ಲೇಖಕಿ ರೇಖಾ ರಾಜ್ ‘ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಕೆಲ ಸಮುದಾಯಗಳು ಮುಖ್ಯವಾಹಿನಿಗೆ ಬಂದಿಲ್ಲ. ದಲಿತರು ಆದಿವಾಸಿಗಳು ಮಹಿಳೆಯ ಮೇಲೆ ದೌರ್ಜನ್ಯ ನಡೆದಿದೆ’ ಎಂದರು. ಗದಗದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರೊ.ಡಿ.ಜೀವನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.