ಮೈಸೂರಿನ ವಿಜ್ಞಾನ ಭವನದಲ್ಲಿ ಸಂವಿಧಾನ ಅಭಿಯಾನ– ಕರ್ನಾಟಕದಿಂದ ಭಾನುವಾರ ನಡೆದ ಸಂವಿಧಾನ ಓದು ಅಧ್ಯಯನ ಶಿಬಿರ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಪ್ರಮಾಣಪತ್ರ ವಿತರಿಸಿದರು.
ಮೈಸೂರು: ‘ಸಂವಿಧಾನವಾಗಲಿ, ಕಾನೂನಾಗಲಿ ಯಶಸ್ವಿಯಾಗಿ ಜಾರಿಯಾಗಲು ನಮ್ಮೊಳಗೆ ಉದಾತ್ತ ಮೌಲ್ಯಗಳು ಲಭ್ಯವಿರುವುದು ಮುಖ್ಯ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದರು.
ಸಂವಿಧಾನ ಓದು ಅಭಿಯಾನ– ಕರ್ನಾಟಕವು ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿರುವ, ಜಿಲ್ಲಾಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪದಲ್ಲಿ ಭಾನುವಾರ ಶಿಬಿರಾರ್ಥಿಗಳೊಂದಿಗೆ ಪ್ರಶ್ನೋತ್ತರದಲ್ಲಿ ಮಾತನಾಡಿದರು.
‘ನಮಗೆ ಕೇಡು ಎನಿಸುವುದನ್ನು ಮತ್ತೊಬ್ಬರಿಗೂ ಬಯಸುವುದಿಲ್ಲ ಎಂಬ ಒಂದು ಮೌಲ್ಯ ನಮ್ಮಲ್ಲಿ ಜಾಗೃತವಾದರೆ ಎಷ್ಟೋ ಸಮಸ್ಯೆಗಳು ಉದ್ಭವಿಸುವುದಿಲ್ಲ. ನ್ಯಾಯಾಲಯಗಳೂ ತಪ್ಪು ತೀರ್ಪು ನೀಡಿದ ಉದಾಹರಣೆಯಿದೆ. ಆದರೆ, ಪುನರ್‌ವಿಮರ್ಶೆ ಮಾಡುವ ವಿಶಾಲ ಮನೋಭಾವವನ್ನೂ ಅವು ಹೊಂದಿರುತ್ತವೆ. ಈ ಅರಿವು ನ್ಯಾಯಾಂಗ ವ್ಯವಸ್ಥೆಯನ್ನು ಕಾಯುತ್ತದೆ’ ಎಂದು ಉದಾಹರಣೆ ನೀಡಿದರು.
‘ದೇಶಕ್ಕೆ ಮಾರಕವಾದವರನ್ನು ಶಿಕ್ಷಿಸಲು ಯುಎಪಿಎ ಅಂಥ ಕಠಿಣ ಕಾಯ್ದೆಗಳು ಇರಬೇಕು. ಆದರೆ, ಯಾವುದೇ ಕಾಯ್ದೆಗಳು ಜನತೆಗೆ ಉತ್ತರದಾಯಿಯಾಗಿರಬೇಕು. ಸಂವಿಧಾನಕ್ಕೆ ಪೂರಕವಾಗಿರಬೇಕು. ಖೈದಿಯನ್ನು ವಿಚಾರಣೆಯಿಲ್ಲದೆ ವರ್ಷಗಟ್ಟಲೇ ಕೊಳೆಸುವ ನಿಯಮ ಸೂಕ್ತವೇ, ಈ ಕಾಯ್ದೆಯಲ್ಲಿ ಬದಲಾವಣೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಶಿಕ್ಷಣ ವ್ಯವಸ್ಥೆಯಲ್ಲೂ ಮೂಲಭೂತವಾದಿಗಳು, ಕೋಮುವಾದಿಗಳು ಇದ್ದಾರೆ. ಅಸ್ಪೃಶ್ಯತೆ ಆಚರಣೆಗೆ ಮುಂದಾಗುತ್ತಾರೆ. ಇಂದು ದಲಿತ ಮಕ್ಕಳು ಶಿಕ್ಷಣದಿಂದ ಹೆಚ್ಚು ವಂಚಿತರಾಗುತ್ತಿದ್ದಾರೆ. ದಲಿತರಿಗೆ ನೀಡುವ ಸೌಲಭ್ಯವನ್ನು ವಿರೋಧಿಸಬೇಡಿ, ಎಲ್ಲ ಬಡವರಿಗೂ ಹಕ್ಕು ನೀಡಿ ಎಂದು ಒತ್ತಾಯಿಸಿ. ವಿಶಾಲ ಮನೋಭಾವ ಹೊಂದಿ. ಸಂವಿಧಾನ ಅರಿಯಿರಿ’ ಎಂದು ಮನವಿ ಮಾಡಿದರು.
‘ಸಾಮಾಜಿಕ ನ್ಯಾಯದಂತೆ ಮೀಸಲಾತಿ ಪುನರ್‌ರಚಿಸಿ’
‘ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ವರ್ಗೀಕರಣವನ್ನು ಪುನರ್ ರಚಿಸಬೇಕಾದ ಅನಿವಾರ್ಯತೆ ಇದೆ’ ಎಂದು ಸಂವಿಧಾನ ಓದು ಅಭಿಯಾನ ರಾಜ್ಯ ಸಂಚಾಲಕ ಬಿ.ರಾಜಶೇಖರಮೂರ್ತಿ ಹೇಳಿದರು.
‘ಸಂವಿಧಾನ ಮತ್ತು ಸಾಮಾಜಿಕ ನ್ಯಾಯ’ ವಿಷಯ ಮಂಡನೆ ಮಾಡಿದ ಅವರು, ‘ಮೀಸಲಾತಿಯೆಂದರೆ ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಸಾವಿರಾರು ವರ್ಷಗಳಿಂದ ಶೋಷಣೆ ಅನುಭವಿಸಿದ ಸಮುದಾಯದ ಪ್ರಾತಿನಿಧ್ಯಕ್ಕೆ ಊರುಗೋಲು. ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಮೀಸಲಾತಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧ’ ಎಂದರು.
‘ಪರಿಶಿಷ್ಟ ಜಾತಿ, ಪಂಗಡದ ಜನರಲ್ಲಿ ಸಾರ್ವಜನಿಕ ಉದ್ಯಮ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್ ಪದವಿ ಪಡೆದವರ ಸಂಖ್ಯೆ ಶೇ 1ಕ್ಕಿಂತ ಕಡಿಮೆ. ಆದರೂ ಬಲಿಷ್ಠ ಜಾತಿಗಳು ದಲಿತರು ಮುಂದೆ ಬಂದಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಬೇಸರ’ ಎಂದರು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ಪ್ರೊ.ಟಿ.ಆರ್.ಮಾರುತಿ ಮಾತನಾಡಿ, ‘ಪೌರಕಾರ್ಮಿಕನೊಬ್ಬ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದುವರಿದು ನಮಗೆ ಮೀಸಲಾತಿ ಬೇಡ ಎನ್ನುವ ತನಕ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಜಾರಿಗೆ ಬರಲಿ’ ಎಂದರು.
ಅಖಿಲ ಭಾರತ ಸಂಶೋಧಕರ ಸಂಘ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗ ಹಾಗೂ ಸಮಾನ ಮನಸ್ಕ ಜನಪರ ಸಂಘಟನೆಗಳ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ ನಿರ್ದೇಶಕ ಸಾಬೀರ ಅಹ್ಮದ್ ಮುಲ್ಲಾ, ಪ್ರೊ.ಎಂ.ಉಮಾಪತಿ, ಸಂಘಟಕರಾದ ಪ್ರೊ.ಕುಶಾಲ ಬರಗೂರು, ಉಗ್ರ ನರಸಿಂಹೇಗೌಡ, ವಕೀಲ ಪಿ.ಪಿ.ಬಾಬುರಾಜು ಉಪಸ್ಥಿತರಿದ್ದರು.
‘ದೆಹಲಿಯಿಂದ ರಾಜ್ಯವನ್ನು ಆಳಬೇಡಿ’
‘ದೆಹಲಿಯಲ್ಲಿ ಕುಳಿತು ದೇಶದ ರಾಜ್ಯಗಳ ಆಡಳಿತ ನಡೆಸಬಾರದು ಎಂಬ ಜನರ ಆಶಯವೇ ಒಕ್ಕೂಟ ವ್ಯವಸ್ಥೆ ಸೃಷ್ಟಿಗೆ ಕಾರಣ. ಆದರೆ ಇಂದು ಎಲ್ಲ ಕೆಲಸ ತಾನೇ ಮಾಡುತ್ತೇನೆ ಎಂದು ಕೇಂದ್ರ ಸರ್ಕಾರವು ರಾಜ್ಯದ ಆಡಳಿತದಲ್ಲಿ ಕೈ ಆಡಿಸುತ್ತಿರುವುದು ಆತಂಕಕಾರಿ ಮತ್ತು ಒಕ್ಕೂಟ ವ್ಯವಸ್ಥೆಯ ಶಿಥಿಲತೆಗೆ ಕಾರಣವಾಗುತ್ತಿದೆ’ ಎಂದು ಪ್ರೊ.ಕರಿಯಣ್ಣ ನಿಷಾದ ಹೇಳಿದರು.
‘ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ’ ಕುರಿತು ವಿಚಾರ ಮಂಡಿಸಿದ ಅವರು ‘ಆರ್ಥಿಕ ಕೇಂದ್ರೀಕರಣ ರಾಜಕೀಯ ಅಧಿಕಾರಕ್ಕಾಗಿ ಸಂವಿಧಾನಕ್ಕೆ ಪದೇಪದೇ ತಿದ್ದುಪಡಿ ತರುವುದು ಅಧಿಕಾರ ಹಂಚಿಕೆಯನ್ನು ಕಡೆಗಣಿಸುವುದು ರಾಜ್ಯಪಾಲರ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯು ತಪ್ಪು. ಇಂದು ರಾಷ್ಟ್ರೀಯವಾದ ಹೆಸರಿನಲ್ಲಿ ಕೆಲ ವಿಚಾರಗಳು ಯುವಜನರ ತಲೆಯಲ್ಲಿ ಹುಳುವಿನಂತೆ ಸೇರಿವೆ. ಏಕ ಸಂಸ್ಕೃತಿ ಧರ್ಮ ಆಹಾರ ಭಾಷೆ ಬೇಕು ಎಂಬ ಹಠ ದೇಶಕ್ಕೆ ಮಾರಕ. ಜನರು ಸ್ವಯಂ ಅಸ್ಮಿತೆಯನ್ನು ಕಳೆದುಕೊಳ್ಳದಿರುವುದು ಸಂವಿಧಾನ ಮತ್ತು ಒಕ್ಕೂಟಕ್ಕೆ ಶಕ್ತಿ ತುಂಬುತ್ತದೆ’ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಹೊಂಬಾಳೆ ಮಾತನಾಡಿ ‘ದೇಶದ ರಕ್ಷಣೆ ಎಷ್ಟು ಮುಖ್ಯವೋ ಪ್ರಜಾಪ್ರಭುತ್ವ ರಕ್ಷಣೆ ರಾಜ್ಯದ ಹಕ್ಕು ವ್ಯಕ್ತಿ ಸಂಸ್ಕೃತಿ ರಕ್ಷಣೆಯೂ ಮುಖ್ಯ’ ಎಂದು ಪ್ರತಿಪಾದಿಸಿದರು.
ಮತೀಯ ಸರ್ಕಾರ ತರುವ ಪ್ರಯತ್ನ: ಆತಂಕ
‘ಜಗತ್ತಿನಲ್ಲಿ ಮತೀಯ ಸರ್ಕಾರಗಳನ್ನು ತೊಲಗಿಸಿ ಜಾತ್ಯತೀತ ಸರ್ಕಾರಗಳನ್ನು ಆಡಳಿತಕ್ಕೆ ತರುತ್ತಿರುವ ಸಂದರ್ಭದಲ್ಲಿ ಭಾರತದ ಕೆಲ ಶಕ್ತಿಗಳು ಮತೀಯ ಸರ್ಕಾರ ತರಲು ಮುಂದಾಗುತ್ತಿವೆ’ ಎಂದು ಚಿಂತಕ ಆರ್.ರಾಮಕೃಷ್ಣ ಬೇಸರ ವ್ಯಕ್ತಪಡಿಸಿದರು.
‘ಸಂವಿಧಾನ ಮತ್ತು ಜಾತ್ಯತೀತತೆ’ ವಿಷಯ ಮಂಡಿಸಿದ ಅವರು ‘ಜಗತ್ತಿನಲ್ಲಿ ಮುಸ್ಲಿಂ ಕ್ರಿಶ್ಚಿಯನ್ ಧರ್ಮದ ಹತ್ತಾರು ರಾಷ್ಟ್ರಗಳಿವೆ. ಒಂದೇ ಒಂದು ಹಿಂದೂ ರಾಷ್ಟ್ರ ಬೇಡವೆ ಎಂಬ ವಾದ ಕೇಳಿ ಬರುತ್ತದೆ. ಆದರೆ ಎಷ್ಟೋ ಮುಸ್ಲಿಂ ಕ್ರಿಶ್ಚಿಯನ್ ಬಹುಸಂಖ್ಯಾತ ರಾಷ್ಟ್ರಗಳು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿಕೊಂಡಿವೆ. ಜಗತ್ತಿನ ಏಕೈಕ ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಿಕೊಂಡಿದ್ದ ನೇಪಾಳ ಕೂಡ 2006ರಿಂದ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವೆಂದು ಘೋಷಣೆ ಮಾಡಿಕೊಂಡಿದೆ’ ಎಂದರು.
‘ಹಲವು ಭಾಷೆ ಸಂಸ್ಕೃತಿ ಧರ್ಮ ಜಾತಿ ಆಚರಣೆಗಳ ಮುತ್ತಿನ ಹಾರವನ್ನು ಜೋಡಿಸಿರುವ ರೇಷ್ಮೆ ದಾರ ಜಾತ್ಯತೀತತೆ. ದಾರವನ್ನು ಕತ್ತರಿಸಿದರೆ ಹಾರ ಚೂರಾಗಲಿದೆ. ಕೋಮುವಾದ ಭೀಕರ ಸ್ವರೂಪ ಪಡೆಯಲಿದೆ’ ಎಂದು ಎಚ್ಚರಿಸಿದರು. ಅಧ್ಯಕ್ಷತೆ ವಹಿಸಿದ್ದ ನೆಸ್ಕೋ ಸಂಸ್ಥೆ ಕಾರ್ಯದರ್ಶಿ ಪ್ರೊ.ಶಬ್ಬೀರ್ ಮುಸ್ತಫ ಮಾತನಾಡಿ ‘ಸಂವಿಧಾನವನ್ನು ದುರ್ಬಲಗೊಳಿಸುವ ಕೆಲಸವವನ್ನು ಪ್ರಭುತ್ವ ಮಾಡುತ್ತಿದೆ. ಬುಲ್ಡೋಜರ್ ನ್ಯಾಯ ವಿಜೃಂಭಿಸುತ್ತಿದೆ. ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ರಾತ್ರೋರಾತ್ರಿ ತೀರ್ಪು ನೀಡುವ ನ್ಯಾಯಾಲಯ ಉಮರ್ ಖಾಲೀದ್ ಪ್ರಕರಣದಲ್ಲಿ ನಾಲ್ಕು ವರ್ಷವಾದರೂ ಜಾಮೀನು ನೀಡುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.