ADVERTISEMENT

ಮೈಸೂರಿನಲ್ಲಿ 100 ಅಡಿ ಟಿಪ್ಪು ಪ್ರತಿಮೆ ನಿರ್ಮಾಣ: ತನ್ವೀರ್ ಸೇಠ್

ಟಿಪ್ಪು ಉತ್ಸವದಲ್ಲಿ ಶಾಸಕ ತನ್ವೀರ್‌ ಸೇಠ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 18:15 IST
Last Updated 10 ನವೆಂಬರ್ 2022, 18:15 IST
ಮೈಸೂರಿನ ರಾಜೀವ್ ನಗರದ ಅಲ್ ಬದರ್ ಮೈದಾನದಲ್ಲಿ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ಮತ್ತು ರೈತಸಂಘದಿಂದ ಗುರುವಾರ ಜಂಟಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವದಲ್ಲಿ ಶಾಸಕ ತನ್ವೀರ್‌ ಸೇಠ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಎಸ್‌ಡಿಪಿಐ ರಾಜ್ಯಘಟಕದ ಅಧ್ಯಕ್ಷ ಅಬ್ದುಲ್‌ ಮಜೀದ್‌, ಮಾಜಿ ಮೇಯರ್‌ ಅಯೂಬ್‌ ಖಾನ್‌ ಇದ್ದರು–ಪ್ರಜಾವಾಣಿ ಚಿತ್ರ
ಮೈಸೂರಿನ ರಾಜೀವ್ ನಗರದ ಅಲ್ ಬದರ್ ಮೈದಾನದಲ್ಲಿ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ಮತ್ತು ರೈತಸಂಘದಿಂದ ಗುರುವಾರ ಜಂಟಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವದಲ್ಲಿ ಶಾಸಕ ತನ್ವೀರ್‌ ಸೇಠ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಎಸ್‌ಡಿಪಿಐ ರಾಜ್ಯಘಟಕದ ಅಧ್ಯಕ್ಷ ಅಬ್ದುಲ್‌ ಮಜೀದ್‌, ಮಾಜಿ ಮೇಯರ್‌ ಅಯೂಬ್‌ ಖಾನ್‌ ಇದ್ದರು–ಪ್ರಜಾವಾಣಿ ಚಿತ್ರ   

ಮೈಸೂರು: ‘ಇಸ್ಲಾಂನಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು‘ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ನಗರದ ರಾಜೀವ್ ನಗರ ಅಲ್ ಬದರ್ ಮೈದಾನದಲ್ಲಿ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ಮತ್ತು ರೈತಸಂಘದಿಂದ ಜಂಟಿಯಾಗಿ ನಡೆಸಿದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವದಲ್ಲಿ ಅವರು ಮಾತನಾಡಿದರು.

‘ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ. ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ’ ಎಂದರು.

ADVERTISEMENT

ಎಸ್‍ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ‘ಟಿಪ್ಪು ಸುಲ್ತಾನರ ಚರಿತ್ರೆಯನ್ನು ಅವರು ಸರಿಯಾಗಿ ಓದಿಲ್ಲ. ಅಂದಿನ ಟಿಪ್ಪು ಆಳ್ವಿಕೆಯಲ್ಲಿ ಬೇರೆ ಬೇರೆ ದೇಶಗಳ ಜಿಡಿಪಿಗಿಂತ ಮೈಸೂರು ರಾಜ್ಯದ ಜಿಡಿಪಿ ಐದು ಪಟ್ಟು ಹೆಚ್ಚಿತ್ತು. ತನ್ನ ರಾಜ್ಯದಲ್ಲಿ ಪಾನ ನಿಷೇಧ ಮಾಡಿದ ಜಗತ್ತಿನ ಮೊಟ್ಟ ಮೊದಲ ದೊರೆ ಟಿಪ್ಪು ಸುಲ್ತಾನರು. ರೈಲಿನ ಹೆಸರು ಬದಲಾಯಿಸಿರುವ ಸಂಸದ ಪ್ರತಾಪ್ ಸಿಂಹ ಮೊದಲು ಆರ್‌ಎಸ್‌ಎಸ್‌ನ ಭಗವಾನ್ ಎಸ್.ಗಿದ್ವಾನಿ ಬರೆದ ‘ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್ ಕೃತಿ’ ಓದಲಿ’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಸಕರಾದ ತನ್ವೀರ್ ಸೇಠ್ ಮತ್ತು ಎಚ್.ವಿಶ್ವನಾಥ್ ಅವರನ್ನು ಭಾರಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ನಂತರ ಕನ್ನಡ ಬಾವುಟ ದ್ವಜಾರೋಹಣ ನಡೆಸಿ ನಾಡಗೀತೆ ಹಾಡಲಾಯಿತು. ಕಾರ್ಯಕ್ರಮ ಮುಗಿದ ನಂತರ ಶಾಸಕ ತನ್ವೀರ್ ಸೇಠ್ ಪಕ್ಷಭೇದ ಮರೆತು ಎಲ್ಲರ ಜತೆಗೂಡಿ ಊಟ ಮಾಡಿದ್ದು ವಿಶೇಷವಾಗಿತ್ತು

ಮಾಜಿ ಮೇಯರ್ ಅಯೂಬ್‌ ಖಾನ್, ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ಆಫ್ತಾಬ್, ಸುಹೇಲ್ ಬೇಗ್, ಮಾಜಿ ಸದಸ್ಯ ಶೌಕತ್ ಪಾಷ, ಎಮ್.ಎಫ್.ಕಲೀಂ, ಇತಿಹಾಸಕಾರ ಪ್ರೊ.ಪಿ.ನಂಜರಾಜ ಅರಸು, ಪ್ರೊ.ಮಹೇಶ್ ಚಂದ್ರ ಗುರು, ಎಂ.ಕಲೀಂ ಅಹಮದ್, ಮೌಲಾನಾ ಅರ್ಷದ್ ಸಾಹೇಬ್, ಅಬ್ದುಲ್ ಖಾದರ್ ಷಾಹೀದ್ ಇದ್ದರು.

ಟಿಪ್ಪು ನಾಟಕದ ವಿರುದ್ಧ ಕಾನೂನು ಹೋರಾಟ: ತನ್ವೀರ್‌ ಸೇಠ್
ಮೈಸೂರು:
‘ಆಡಳಿತ ನಡೆಸುವವರನ್ನು ಓಲೈಸುತ್ತಿರುವ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ‘ಟಿಪ್ಪು ನಿಜ ಕನಸುಗಳು’ ನಾಟಕದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಶಾಸಕ ತನ್ವೀರ್‌ ಸೇಠ್ ತಿಳಿಸಿದರು.

ರಾಜೀವ್‌ನಗರದ ಅಲ್‌ಬದರ್‌ ಮೈದಾನದಲ್ಲಿ ಗುರುವಾರ ಟಿಪ್ಪು ಜಯಂತಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುವ ಕಲಾವಿದರಿಗೆ ನೆಲೆ ಯಾಗಬೇಕಾದ ಜಾಗದಲ್ಲಿಯೂ ಅಧಿಕಾರದ ದುರುಪಯೋಗಪಡಿಸಿಕೊಂಡು ತಮ್ಮ ಅಜೆಂಡಾಗಳನ್ನು ಮುನ್ನೆಲೆಗೆ ತರುತ್ತಿರುವುದು ವಿಷಾದನೀಯ’ ಎಂದರು.

‘ಹೈದರಾಲಿ ಮತ್ತು ಟಿಪ್ಪು ತಮ್ಮ ಅಧಿಕಾರಾವಧಿಯಲ್ಲಿ ದಸರಾವನ್ನು ಮುಂದುವರಿಸಿದರು. ವಿಶ್ವದ ಭೂಪಟದಲ್ಲಿ ಮೈಸೂರಿಗೆ ಸ್ಥಾನ ತಂದುಕೊಟ್ಟರು. ಆದರೆ ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚುವ ಕೆಲಸ ನಡೆದಿದೆ. ಟಿಪ್ಪುವಿನ ವಿರುದ್ಧ ಪ್ರಚೋದಿಸುವವರ ವಿರುದ್ಧ ಹೋರಾಟ ಅನಿವಾರ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.