ಸಹಕಾರ ಸಚಿವ ಕೆ.ಎನ್. ರಾಜಣ್ಣ
-ಪ್ರಜಾವಾಣಿ ಚಿತ್ರ
ಮೈಸೂರು: ‘ ಸಹಕಾರ ಇಲಾಖೆಯಲ್ಲಿ ಅಕ್ರಮ ನಡೆದಿರುವ ಕುರಿತು ದೂರುಗಳು ಕೇಳಿಬಂದಿದ್ದು, ಇಂತಹ ಅಕ್ರಮದಲ್ಲಿ ಭಾಗಿಯಾಗುವ ನೌಕರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸಹಕಾರ ಸಂಘಗಳಲ್ಲಿ ಅಕ್ರಮ ನಡೆದಿರುವ ಕುರಿತು ದೂರುಗಳು ದಾಖಲಾಗಿವೆ. ಇಂತಹ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ನೇರವಾಗಿ ಕ್ರಮ ಕೈಗೊಳ್ಳಲು ಕಾನೂನಿನ ತೊಡಕುಗಳಿವೆ. ಹೀಗಾಗಿ ಸಹಕಾರ ಇಲಾಖೆಯಲ್ಲಿ ತಿದ್ದುಪಡಿ ತರುತ್ತಿದ್ದು, ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಬೆಂಗಳೂರಿನಲ್ಲಿ ಮಳೆ ಆವಾಂತರದ ಕುರಿತು ಪ್ರತಿಕ್ರಿಯಿಸಿ ‘ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರವು ಕೆಲವು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಳೆ ಬಂದರೂ ಬಾರದೇ ಇದ್ದರೂ ನಿರಂತರವಾಗಿ ರಾಜಕಾಲುವೆ ಒತ್ತುವರಿ ತೆರವು ಕೆಲಸವನ್ನು ಮಾಡುತ್ತಿದ್ದೇವೆ’ ಎಂದರು.
‘ ಗೃಹಲಕ್ಷ್ಮಿ ಕಂತಿನ ಹಣ ಬಿಡುಗಡೆ ವಿಚಾರದಲ್ಲಿ ಶಿವಕುಮಾರ್ ಹೇಳಿಕೆಯನ್ನು ತಿರುಚಲಾಗಿದೆ. ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವ ಸಾಫ್ಟ್ ವೇರ್ ಬದಲಾವಣೆ ಮಾಡಲಾಗುತ್ತಿದೆ. ಹೀಗಾಗಿ ಹಣ ಬಿಡುಗಡೆ ತಡವಾಗುತ್ತಿದೆ’ ಎಂದರು.
‘ ಸಚಿವರ ಬದಲಾವಣೆ ವಿಚಾರದಲ್ಲಿ ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಜಕಾರಣ ನಿಂತ ನೀರಲ್ಲ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಸೇರಿದಂತೆ ಏನೇ ಬದಲಾವಣೆ ಇದ್ದರೂ ಕೂಡ ಎಲ್ಲವನ್ನೂ ಸೂಕ್ತ ಸಮಯದಲ್ಲಿ ನಿರ್ಧರಿಸುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ’ ಎಂದು ಹೇಳಿದರು.
ಚುನಾವಣೆಗೆ ನಿಲ್ಲುವುದಿಲ್ಲ: ‘ನನಗೀಗ 75 ವರ್ಷ ತುಂಬಿದೆ. ಮುಂದಿನ ಚುನಾವಣೆ ಹೊತ್ತಿಗೆ 78 ವರ್ಷ ಆಗುತ್ತದೆ. ಆ ವಯಸ್ಸಿನಲ್ಲಿ ಮತ್ತೆ ಚುನಾವಣೆಗೆ ನಿಂತು ಗೆದ್ದರೂ ಉತ್ಸಾಹದಿಂದ ಕೆಲಸ ಮಾಡಿ ಜನರಿಗೆ ನ್ಯಾಯ ದೊರಕಿಸಲು ಆಗುವುದಿಲ್ಲ. ಹೀಗಾಗಿ ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ’ ಎಂದು ರಾಜಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.