ADVERTISEMENT

ಮೈಸೂರು | ಕೌನ್ಸಿಲ್‌ ಸಭೆ: ‘ಉದಯರವಿ’ ಹೆಸರಿನಲ್ಲಿ ಯುದ್ಧ!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 16:47 IST
Last Updated 22 ಆಗಸ್ಟ್ 2023, 16:47 IST
ಮೈಸೂರಿನ ಪಾಲಿಕೆಯಲ್ಲಿ ಮಂಗಳವಾರ ಉಪಮೇಯರ್‌ ಡಾ.ಜಿ.ರೂಪಾ ಅಧ್ಯಕ್ಷತೆಯಲ್ಲಿ ಕೌನ್ಸಿಲ್‌ ಸಭೆ ನಡೆಯಿತು. ಹೆಚ್ಚುವರಿ ಆಯುಕ್ತೆ ರೂಪಾ ಇದ್ದರು
ಮೈಸೂರಿನ ಪಾಲಿಕೆಯಲ್ಲಿ ಮಂಗಳವಾರ ಉಪಮೇಯರ್‌ ಡಾ.ಜಿ.ರೂಪಾ ಅಧ್ಯಕ್ಷತೆಯಲ್ಲಿ ಕೌನ್ಸಿಲ್‌ ಸಭೆ ನಡೆಯಿತು. ಹೆಚ್ಚುವರಿ ಆಯುಕ್ತೆ ರೂಪಾ ಇದ್ದರು   

ಮೈಸೂರು: ‘ಉದಯರವಿ ಯಾರು? ಅವರ ಕೊಡುಗೆಯೇನು? ಯಾವಾಗ ಅಧಿಕೃತವಾಗಿ ನಾಮಕರಣ ಮಾಡಲಾಗಿದೆ? ಅಶೋಕಪುರಂನ ಎನ್‌ಐಇ ಕಾಲೇಜು ಹಾಸ್ಟೆಲ್‌ ಪಕ್ಕದಿಂದ ರಾಮಕೃಷ್ಣನಗರ ವೃತ್ತದವರೆಗಿನ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್‌ ತಂದೆ ರಾಮ್‌ಜೀ ಸಕ್ಪಾಲ್‌ ಅವರ ಹೆಸರನ್ನಿಡಲು ತೊಂದರೆಯೇನು?’

ಪಾಲಿಕೆಯಲ್ಲಿ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಸದಸ್ಯೆ ಪಲ್ಲವಿ ಬೇಗಂ ಅವರಿಂದ ಪ್ರಭಾರ ಮೇಯರ್‌ ಆಗಿದ್ದ ಉಪಮೇಯರ್‌ ಡಾ.ಜಿ.ರೂಪಾ ಅವರಿಗೆ ತೂರಿಬಂದ ಪ್ರಶ್ನೆಗಳಿವು. ಇದರೊಂದಿಗೆ ಆರಂಭಗೊಂಡ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ವಾಗ್ವಾದವು ಸಭೆಯನ್ನು 10 ನಿಮಿಷಗಳವರೆಗೆ ಮುಂದೂಡಿತು.

ಎಸ್‌.ಶಿವಪ್ಪ ಎಂಬುವರು ಈ ರಸ್ತೆಗೆ ರಾಮ್‌ಜೀ ಸಕ್ಪಾಲ್‌ ಅವರ ಹೆಸರನ್ನಿಡಬೇಕೆಂದು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಿ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಲಾಗಿತ್ತು. ಕಳೆದ ಕೌನ್ಸಿಲ್‌ ಸಭೆಯಲ್ಲಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಮೇಯರ್‌ ಶಿವಕುಮಾರ್ ಸೂಚಿಸಿದ್ದರು. ‘ರಸ್ತೆಯನ್ನು ಉದಯರವಿ ರಸ್ತೆ ಎಂದು ಕರೆಯಲಾಗುತ್ತಿದೆ. ಆದರೆ, ಪಾಲಿಕೆ ಅಧಿಕೃತವಾಗಿ ಹೆಸರನ್ನು ಇಟ್ಟಿಲ್ಲ’ ಎಂದು ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಸಿಂಧೂ ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು. ಅದು ಕೋಲಾಹಲಕ್ಕೆ ಕಾರಣವಾಯಿತು.

ADVERTISEMENT

ಪಲ್ಲವಿ ಬೇಗಂ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸದಸ್ಯ ಎಂ.ಸಿ.ರಮೇಶ್‌, ‘ಕುವೆಂಪುನಗರದ ಎಲ್ಲ ರಸ್ತೆಗಳಿಗೂ ಅವರು ಬರೆದ ಕವನಗಳ ಶೀರ್ಷಿಕೆಗಳನ್ನು, ಮುಡಾವನ್ನು ಈ ಮೊದಲು ಕರೆಯಲಾಗುತ್ತಿದ್ದ ಸಿಐಟಿಬಿ ಇಟ್ಟಿತ್ತು. ಅದು ಪಲ್ಲವಿ ಅವರಿಗೆ ಗೊತ್ತಿಲ್ಲವೇ?’ ಎಂದರು.

ಸದಸ್ಯೆ ಸುನಂದಾ ಫಾಲನೇತ್ರ, ‘ನಾಗರಿಕರು ಅರ್ಜಿ ಕೊಟ್ಟಾಗ ಕಾರ್ಯಕಾರಿ ಸಮಿತಿಗೆ ಹೋಗುತ್ತದೆ. ಅಧಿಕಾರಿಗಳು ಪರಿಶೀಲಿಸಿ ಸಭೆ ಕಾರ್ಯಸೂಚಿಗೆ ಸೇರಿಸಬೇಕು. ಕುವೆಂಪುನಗರದ ಪೂರ್ವಕ್ಕಿರುವ ಚಾಮುಂಡಿ ಬೆಟ್ಟಕ್ಕೆ ನೇರವಾಗಿದ್ದ ಕಾರಣ ರಸ್ತೆಗೆ ಉದಯರವಿ ಎಂದು ಹೆಸರಿಡಲಾಗಿದೆ. ಇದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಿತ್ತು’ ಎಂದರು.

ಆಗ ಕಾಂಗ್ರೆಸ್‌ ಸದಸ್ಯ ಆರಿಫ್‌ ಹುಸೇನ್, ‘ಅಧಿಕೃತವಾಗಿ ಹೆಸರಿಟ್ಟಿಲ್ಲ’ ಎಂದು ಹೇಳಿದರು. ಅದಕ್ಕೆ ಎಂ.ಸಿ.ರಮೇಶ್‌, ‘ಆರಿಫ್ ಸಭೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಕುವೆಂ‍ಪುನಗರ ಸಿಐಟಿಬಿ ನಿರ್ಮಿಸಿದ ಬಡಾವಣೆ. ಅದೇ ನಾಮಕರಣ ಮಾಡಿದೆ’ ಎಂದು ಪ್ರತಿಕ್ರಿಯಿಸಿದರು.

ಆಗ ಉಪಮೇಯರ್‌ ಡಾ.ಜಿ.ರೂಪಾ, ‘ಸರಿಯಾದ ಮಾಹಿತಿ ಪಡೆದು ಮುಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳೋಣ’ ಎಂದರು.

ಅದಕ್ಕೆ ಆಕ್ಷೇಪಿಸಿ ಕಾಂಗ್ರೆಸ್‌ ಸದಸ್ಯರ ಜೊತೆಯಾದ ಬಿಜೆಪಿ ಸದಸ್ಯೆ ಅಶ್ವಿನಿ ಶರತ್, ‘ಪಾಲಿಕೆಯೇ ಅಧಿಕೃತವಾಗಿ ಇಟ್ಟಿಲ್ಲ ಎಂದಾಯಿತು. ವಿಷಯ ಮುಂದೂಡಬಾರದು’ ಎಂದರು.

ಆರಿಫ್‌ ಹುಸೇನ್‌, ‘ನಾನಿರುವ ಪ್ರದೇಶವನ್ನು ಸುಭಾಷ್ ನಗರ ಎನ್ನುತ್ತಾರೆ. ಆದರೆ, ಮನೆ ಖಾತೆಯಲ್ಲಿ ಬಡಾಮಕ್ಕಾನ್ ನಗರ ಎಂದಿದೆ. ಕುವೆಂಪುನಗರವು ಅದೇ ಹೆಸರಿನಲ್ಲಿ ಇರಲಿ. ಆದರೆ, ಉದಯರವಿ ರಸ್ತೆಗೆ ರಾಮ್‌ಜೀ ಸಕ್ಪಾಲ್ ಅವರ ಹೆಸರಿಡಿ’ ಎಂದು ಒತ್ತಾಯಿಸಿದರು.

ಬಿಜೆಪಿ ಸದಸ್ಯರಾದ ಸುನಂದಾ ಫಾಲನೇತ್ರ, ಬಿ.ವಿ.ಮಂಜುನಾಥ್, ಸುಬ್ಬಯ್ಯ, ರಮೇಶ್‌ ಅವರು, ‘ಕಾಂಗ್ರೆಸ್ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡುತ್ತಿದೆ’ ಎಂದು ಹೇಳಿದರು.

ಆಕ್ರೋಶಗೊಂಡ ಆರಿಫ್ ಹುಸೇನ್, ಗೋಪಿ, ಸಿ.ಶ್ರೀಧರ್, ಸತ್ಯರಾಜ್, ಪಲ್ಲವಿ ಬೇಗಂ, ಶೋಭಾ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ‍ಪ್ರತಿಭಟನೆ ನಡೆಸಿದರು. ‘ಅಂಬೇಡ್ಕರ್ ವಿರೋಧಿ ಬಿಜೆಪಿ’ ಎಂಬ ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು.

ಅದರಿಂದ ಎದ್ದುನಿಂತ ಉಪಮೇಯರ್ ರೂಪಾ, ‘ಮುಡಾದಿಂದ ಮಾಹಿತಿ ‍ಪಡೆದು ಖಂಡಿತವಾಗಿ ನಿರ್ಣಯ ಕೈಗೊಳ್ಳೋಣ’ ಎಂದು ಸಂಜೆ 6.22ಕ್ಕೆ 10 ನಿಮಿಷ ಸಭೆ ಮುಂದೂಡಿದರು. 

ಒಂದೇ ನಿಮಿಷದಲ್ಲಿ ಸಭೆ ಮುಕ್ತಾಯ: ವಿರಾಮದ ನಂತರ 6.50ಕ್ಕೆ ಸಭೆ ಪುನಾರಂಭವಾಯಿತು. ರೂಪಾ ಅವರು ಪ್ರತಿ ವಾರ್ಡ್‌ಗೆ ₹ 10 ಲಕ್ಷ ಅನುದಾನ ಘೋಷಣೆ ಮಾಡಿ ಒಂದೇ ನಿಮಿಷಕ್ಕೆ ಸಭೆ ಮುಕ್ತಾಯಗೊಳಿಸಿದರು.

ಚರ್ಚಿಸದೇ ವಿಷಯಗಳಿಗೆ ಒಪ್ಪಿಗೆ: ಆಕ್ಷೇಪ

ಕಳೆದ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸದ ಮೂರು ವಿಷಯಗಳಿಗೆ ಮೇಯರ್‌ ಒಪ್ಪಿಗೆ ಸೂಚಿರುವ ಕ್ರಮ ಅವೈಜ್ಞಾನಿಕವೆಂದು ಕೌನ್ಸಿಲ್‌ ಕಾರ್ಯದರ್ಶಿ ಸರ್ಕಾರಕ್ಕೆ ಪತ್ರ ಬರೆದಿರುವುದು ಸದಸ್ಯರಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ‘ಹಿಂದಿನ ಸಭೆಯಲ್ಲಿ ಗದ್ದಲದ ನಡುವೆ ಮೂರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸದೇ ಒಪ್ಪಲಾಗಿದೆ ಎಂದು ಮೇಯರ್ ಪ್ರಕಟಿಸಿದ್ದರು. ಈ ಬಗ್ಗೆ ಸಭೆಯ ಅನುಮೋದನೆಗೆ ವಿಷಯ ಪ್ರಸ್ತಾಪಿಸಲಾಗಿದೆ’ ಎಂದು ರೂಪಾ ಅವರು ಹೇಳಿದಾಗ ಗದ್ದಲ ನಡೆಯಿತು. ಸದಸ್ಯರಾದ ಕೆ.ವಿ.ಶ್ರೀಧರ್ ಎಸ್‌ಬಿಎಂ ಮಂಜು ಪ್ರೇಮಾ ಶಂಕರೇಗೌಡ ಅವರು ‘ಪಾಲಿಕೆ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ ಸೇರಿದಂತೆ ಮೂರು ನಿರ್ಣಯಗಳ ಸಂಪೂರ್ಣ ವಿವರ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.  ಕೌನ್ಸಿಲ್‌ ಕಾರ್ಯದರ್ಶಿ ರಂಗಸ್ವಾಮಿ ‘ಮೇಯರ್ ಅವರು ವಿಷಯಗಳನ್ನು ಸಭೆಯಲ್ಲಿ ಮಂಡಿಸದೇ ಅನುಮೋದನೆ ಕೊಟಿದ್ದಾರೆ. ಇದು ಸರಿಯಾದ ಕ್ರಮ ಅಲ್ಲವೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಮಾಹಿತಿ ನೀಡಿದರು. ಅದಕ್ಕೆ ‘ಈ ಕ್ರಮ ಅವೈಜ್ಞಾನಿಕ’ ಎಂದು ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಪಾಲಿಕೆ ವಿರೋಧ ಪಕ್ಷದ ನಾಯಕ ಅಯೂಬ್‌ ಖಾನ್ ‘ವಿಷಯ ಚರ್ಚಿಸದೇ ನಿರ್ಣಯ ಮಾಡಲಾಗಿದೆ. ಇದು ಅಕ್ಷಮ್ಯ. ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಬರೆಯಬೇಕು’ ಎಂದು ಒತ್ತಾಯಿಸಿದರು. ಆಡಳಿತ ಪಕ್ಷದ ನಾಯಕ ಮಾ.ವಿ.ರಾಮಪ್ರಸಾದ್ ‘₹ 2.70 ಕೋಟಿ ವೆಚ್ಚದಲ್ಲಿ ಪಾಲಿಕೆ ಕಟ್ಟಡಕ್ಕೆ ಶಾಶ್ವತ ವಿದ್ಯುತ್‌ ದೀಪಾಲಂಕಾರ ಮಾಡುವುದರಿಂದ ಶನಿವಾರ ಭಾನುವಾರವೂ ಅರಮನೆಯಂತೆ ಬೆಳಗಿಸಬಬಹುದು. ಅದಕ್ಕೆ ವಿರೋಧವೇಕೆ’ ಎಂದರು. ಕೆ.ವಿ. ಶ್ರೀಧರ್ ‘ದೀಪಾಲಂಕಾರ ಪ್ರಸ್ತಾವನೆಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಬಿ.ವಿ.ಮಂಜುನಾಥ್ ‘‍ಪಾಲಿಕೆ ಕಟ್ಟಡಕ್ಕೆ ನೂರು ವರ್ಷ ಆಗಿದೆ. ನೆನಪಿನಾರ್ಥವಾಗಿ ದೀಪಾಲಂಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಶ್ವತ ದೀಪಾಲಂಕಾರಕ್ಕೆ ಒಪ್ಪಿಗೆ ಕೊಡಬೇಕು’ ಎಂದು ಒತ್ತಾಯಿಸಿದರು.

ಉದ್ಯಾನಕ್ಕೆ ವಿಷ್ಣುವರ್ಧನ್‌ ಹೆಸರು: ಆಗದ ನಿರ್ಣಯ

ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಉದ್ಯಾನಕ್ಕೆ ನಟ ವಿಷ್ಣುವರ್ಧನ್ ಹೆಸರು ನಾಮಕರಣ ಪ್ರತಿಮೆ ನಿರ್ಮಾಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವ ವಿಷಯವೂ ಸಭೆಯಲ್ಲಿ ನಿರ್ಣಯವಾಗಲಿಲ್ಲ. ಬಿಜೆಪಿ ಸದಸ್ಯ ಬಿ.ವಿ. ಮಂಜುನಾಥ್ ‘ಉದ್ಯಾನದ ಆಸ್ತಿ ಸಂಬಂಧ ಹೈಕೋರ್ಟ್‌ನಲ್ಲಿ ಪ್ರಕರಣವಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ತೀರ್ಮಾನ ಕೈಗೊಳ್ಳುವುದು ತಪ್ಪಾಗುತ್ತದೆ. ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಪಾಲಿಕೆಗೆ ಅವಕಾಶ ಇಲ್ಲ’ ಎಂದರು. ಅಯೂಬ್‌ ಖಾನ್ ‘ನಾಮಕರಣಕ್ಕೆ ಸಂಸದ ಪ್ರತಾಪಸಿಂಹ ಪತ್ರ ಬರೆದಿದ್ದಾರೆ. ಬಿಜೆಪಿಯ ಮೇಯರ್ ಒಪ್ಪಿಗೆ ಕೊಟ್ಟಿದ್ದಾರೆ. ಈಗ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು. ಸದಸ್ಯ ಕೆ.ವಿ. ಶ್ರೀಧರ್ ‘ತಪ್ಪಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಮರು ಪರಿಶೀಲಿಸಬೇಕು’ ಎಂದರು. ಉಪ ಮೇಯರ್ ರೂಪಾ ‘ಈ ವಿಷಯವನ್ನು ಬಿಟ್ಟು ಉಳಿದಿದ್ದನ್ನು ಕಾಯಂ ಮಾಡಲಾಗಿದೆ’ ಎಂದರು.

ಸಭೆಯಲ್ಲಿ ಜೆಡಿಎಸ್‌ ಸದಸ್ಯ ಎಸ್‌ಬಿಎಂ ಮಂಜು ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.