ADVERTISEMENT

ಕೋವಿಡ್‌ ಹೆಚ್ಚಳ: ಮೈಸೂರಿನಲ್ಲಿ ಶಾಲೆ ಬಂದ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 19:31 IST
Last Updated 11 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ: ಮೈಸೂರಿನ ವಿದ್ಯಾರಣ್ಯಪುರಂ ಮೈದಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಆಯೋಜಿಸಿದ್ದ ಉದ್ಯೋಗ ಸೃಷ್ಟಿಸುವ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ.
ಸಾಂದರ್ಭಿಕ ಚಿತ್ರ: ಮೈಸೂರಿನ ವಿದ್ಯಾರಣ್ಯಪುರಂ ಮೈದಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಆಯೋಜಿಸಿದ್ದ ಉದ್ಯೋಗ ಸೃಷ್ಟಿಸುವ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ.   

ಮೈಸೂರು/ಬೆಂಗಳೂರು: ಹೆಚ್ಚಿನ ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗುತ್ತಿರುವುದರಿಂದ ಮೈಸೂರು ನಗರ ಮತ್ತು ತಾಲ್ಲೂಕಿನಲ್ಲಿ ಅಂಗನವಾಡಿಯಿಂದ 10ನೇ ತರಗತಿಯವರೆಗಿನ ಭೌತಿಕ ತರಗತಿಗಳನ್ನು ಜ.12ರ ಬುಧವಾರದಿಂದಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ.

ಈ ಅವಧಿಯಲ್ಲಿ ಆನ್‌ಲೈನ್ ತರಗತಿಗಳು ನಡೆಯಲಿವೆ. ಕಳೆದ ಮೂರು ದಿನಗಳಿಂದ ಒಟ್ಟು 138 ಮಕ್ಕಳು ಸೋಂಕಿತರಾಗಿದ್ದಾರೆ. ಮಂಗಳವಾರ 562 ಮಂದಿಗೆ ಸೋಂಕು ತಗುಲಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಮೈಸೂರಿನಲ್ಲಿ 1,868ಕ್ಕೆ ಹೆಚ್ಚಿದೆ.

ಈಗಾಗಲೇ ಬೆಂಗಳೂರಿನಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 80 ಮಕ್ಕಳು ಮತ್ತು ಸುಮಾರು 10 ಶಿಕ್ಷಕ– ಶಿಕ್ಷೇತರ ಸಿಬ್ಬಂದಿಯಲ್ಲಿ ಕೋವಿಡ್‌ ದೃಢಪಟ್ಟ ಕಾರಣಕ್ಕೆ ಈ ವಸತಿ ಶಾಲೆ ಬಂದ್‌ ಮಾಡಲಾಗಿದೆ.

ADVERTISEMENT

ಶಾಲೆ ಬಂದ್‌ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ಬೆಂಗಳೂರು, ಬೆಳಗಾವಿ ಬಿಟ್ಟು ಬೇರೆಡೆ ಶಾಲಾ ತರಗತಿಗಳನ್ನು ಬಂದ್ ಮಾಡುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ಅಲ್ಲದೆ, ಬೆಂಗಳೂರಿನಲ್ಲಿ ಶಾಲೆಗಳ ರಜೆ ವಿಸ್ತರಿಸುವ ಕುರಿತು ಶೀಘ್ರದಲ್ಲಿ ನಿರ್ಧರಿಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.