ADVERTISEMENT

ಮದುವೆ ಮನೆಯಲ್ಲಿ ಕೋವಿಡ್‌ ಜಾಗೃತಿ

ಯಳಂದೂರು: ಆಮಂತ್ರಣ ಪತ್ರಿಕೆಯಲ್ಲೂ ಜಾಗೃತಿ ಸಂದೇಶ ಮುದ್ರಿಸಿದ ವಧುವಿನ ಪೋಷಕರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 4:02 IST
Last Updated 3 ಡಿಸೆಂಬರ್ 2020, 4:02 IST
ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವ ಕೋವಿಡ್‌ ಜಾಗೃತಿ ಸಂದೇಶಗಳು
ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವ ಕೋವಿಡ್‌ ಜಾಗೃತಿ ಸಂದೇಶಗಳು   

ಯಳಂದೂರು: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಇಳಿಮುಖವಾಗುತ್ತಿದೆ. ಅಂದ ಮಾತ್ರಕ್ಕೆ ಜನರು ಮೈಮರೆಯುವ ಹಾಗಿಲ್ಲ. ಈಗ ಮೊದಲಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಯಳಂದೂರು ಪಟ್ಟಣದ ಎಸ್‌.ರಾಧ ಮತ್ತು ಗೋಪಾಲಕೃಷ್ಣ ದಂಪತಿ ತಮ್ಮ ಮಗಳ ಮದುವೆಯನ್ನು ಕೋವಿಡ್‌ ಜಾಗೃತಿ ಕಾರ್ಯಕ್ರಮವಾಗಿ ಪರಿವರ್ತಿಸಿದ್ದಾರೆ. ಮದುವೆಯ ನೆಪದಲ್ಲಿ ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸೋಂಕು ಹರಡುವುದನ್ನು ತಡೆಯುವ ಮಾರ್ಗಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ನಡೆಸಿದ್ದಾರೆ.ಅದಕ್ಕಾಗಿ ಆಮಂತ್ರಣ ಪತ್ರವನ್ನು ಬಳಸಿಕೊಂಡಿದ್ದಾರೆ. ಮದುವೆ ಸಮಾರಂಭ ನಡೆಯುವ ಹಾಲ್‌ನಲ್ಲೂ ಸೋಂಕಿನ ತಡೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಆಮಂತ್ರಣ ಪತ್ರದಲ್ಲಿ ಕೋವಿಡ್‌ ಜಾಗೃತಿ ಸಂದೇಶಗಳನ್ನು ಮುದ್ರಿಸಿದ್ದಾರೆ. ‘ಸಾಮಾಜಿಕ ಅಂತರ ಪಾಲಿಸುವ ವರ್ಷ, ಅಂತರ ಕಾಪಾಡಿದರೆ ಮುಂದೆ ಬರಲಿದೆ ಹರ್ಷ’, ‘ಸಾಮಾಜಿಕ ಅಂತರ ಪಾಲಿಸುತ್ತ ಸಾಂಪ್ರದಾಯಿಕ ವಿವಾಹ ಆಚರಿಸೋಣ’, ‘ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೈ ಜೋಡಿಸಿ ನಮಿಸೋಣ’, ‘ಆರೋಗ್ಯವಂತ ಸಮಾಜಕ್ಕಾಗಿ ನಾವೆಲ್ಲಾ ಮಾಸ್ಕ್ ಧರಿಸಿ, ಅಂತರ ಪಾಲಿಸೋಣ’ ಎಂಬ ಘೋಷ ವಾಕ್ಯಗಳನ್ನುಮುದ್ರಿಸಲಾಗಿದೆ. ಮುಖಗವಸು ತೊಟ್ಟು ವಿವಾಹಕ್ಕೆ ಬಂದವರನ್ನು ಸ್ವಾಗತಿಸುವ ಹೆಣ್ಣು ಮತ್ತು ಗಂಡಿನ ಚಿತ್ರಗಳೂ ಆಹ್ವಾನ ಪತ್ರಿಕೆಯಲ್ಲಿದೆ.

ADVERTISEMENT

‘ಮಕ್ಕಳ ಮದುವೆ ಸಂಭ್ರಮ ತಂದುಕೊಡುತ್ತದೆ. ನೆಂಟರಿಷ್ಟರನ್ನು ಹತ್ತಿರಕ್ಕೆಕರೆತರುತ್ತದೆ. ಕೋವಿಡ್-19 ಕಾರಣದಿಂದ ಸರ್ಕಾರ ಸರಳ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.ಹೀಗಾಗಿ, ಆಹ್ವಾನಿತರ ಆರೋಗ್ಯಕ್ಕೂ ಮನ್ನಣೆ ನೀಡಬೇಕು. ಇದನ್ನು ಮನಗಂಡು ಆಹ್ವಾನ ಪತ್ರಿಕೆಯಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸಲು ಯತ್ನಿಸಲಾಗಿದೆ’ ಎಂದು ವಧುವಿನ ತಂದೆ ಹಾಗೂ ಏಕಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್. ಗೋಪಾಲಕೃಷ್ಣ ಹೇಳಿದರು.

ಹಾಲ್‌ನಲ್ಲೂ ಸಿದ್ಧತೆ: ಕೊಳ್ಳೇಗಾಲದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ (ಡಿ.3) ಮದುವೆ ಸಮಾ ರಂಭ ನಡೆಯಲಿದ್ದು, ಅಲ್ಲೂ ಕೋವಿಡ್‌ ಜಾಗೃತಿ ಮೂಡಿಸಲು ಗೋಪಾಲಕೃಷ್ಣ ಅವರು ಸಿದ್ಧತೆ ನಡೆಸಿದ್ದಾರೆ.ಆಹ್ವಾನಿತ ಸ್ನೇಹಿತರಿಗೆ ಮಾಸ್ಕ್ ವಿತರಿಸಿ, ಸ್ಯಾನಿ ಟೈಸರ್ ಸಿಂಪಡಿಸಿ, ಥರ್ಮಲ್‌ ಸ್ಕ್ರೀನಿಂಗ್‌ ಮಾ‌ಡಿಯೇ ಸ್ವಾಗತಿಸಲಿ ದ್ದಾರೆ. ಮದುವೆ ಮನೆಯಲ್ಲಿ ಕೋವಿಡ್‌ ಜಾಗೃತಿ ಹಾಡುಗಳೂ ಕೇಳಿ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.