ಮೈಸೂರು: ತಾಲ್ಲೂಕಿನ ಕಡಕೊಳ ಸಮೀಪ ಸೋಮವಾರ ನಸುಕಿನಲ್ಲಿ ಐವರು ಜಾನುವಾರುಗಳ್ಳರನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿ, ಒಂದು ಹಸುವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಇನ್ನೂ ಎರಡು ಹಸುಗಳನ್ನು ಕದ್ದು ಗುಂಡ್ಲುಪೇಟೆ ವರ್ತಕರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿನಗರದ ನಿವಾಸಿ ಸೈಯದ್ ಇರ್ಫಾನ್ (32), ಈದ್ಗಾನಗರದ ನಿವಾಸಿ ಸೈಯದ್ ರಿಯಾಜ್ (30), ಕಲ್ಯಾಣಗಿರಿ ನಿವಾಸಿ ನವೀದ್ ಪಾಷಾ (36), ಅಜೀಜ್ ಸೇಠ್ ನಗರದ ನಿವಾಸಿ ಮಹಮ್ಮದ್ ಇಸ್ಮಾಯಿಲ್ (34) ಹಾಗೂ ಶಾಂತಿನಗರದ ನಿವಾಸಿ ಶಕೀರ್ ಅಹಮ್ಮದ್ (30) ಬಂದಿತರು.
ಸರಕು ಸಾಗಣೆ ವಾಹನವೊಂದರಲ್ಲಿ ಹಸುವೊಂದನ್ನು ಮೈಸೂರಿನಿಂದ ಗುಂಡ್ಲುಪೇಟೆಗೆ ಸಾಗಿಸುತ್ತಿದ್ದರು. ಈ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಮೈಸೂರು ದಕ್ಷಿಣ ಠಾಣೆ ಸಬ್‌ಇನ್‌ಸ್ಪೆಕ್ಟರ್ ಜಯಪ್ರಕಾಶ್ ಹಾಗೂ ಸಿಬ್ಬಂದಿ ವಿಚಾರಣೆ ನಡೆಸಿದಾಗ ಕಳಲವಾಡಿ ಹಾಗೂ ನಂಜನಗೂಡು ತಾಲ್ಲೂಕಿನ ಗೋಳೂರಿನಲ್ಲಿಯೂ ಹಸುಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿದ್ದ ಜಾನುವಾರು ಕಳ್ಳತನವನ್ನು ಭೇದಿಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹಾ ಹಾಗೂ ಡಿಎಸ್‌ಪಿ ಕ್ಷಮಾ ಮಿಶ್ರಾ ಅವರು ಮೈಸೂರು ಸರ್ಕಲ್ ಇನ್‌ಸ್ಪೆಕ್ಟರ್ ಕರೀಂ ರಾವ್ಸರ್ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದರು. ಸಬ್‌ಇನ್‌ಸ್ಪೆಕ್ಟರ್ ಜಯಪ್ರಕಾಶ್, ಸಿಬ್ಬಂದಿಯಾದ ಜಹೂರ್, ಹರೀಶ್, ಅಶೋಕ, ಭಾಸ್ಕರ್, ನಾರಾಯಣ ಹಾಗೂ ರಮೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.
ಜ.21ರಂದು ಸಂಚಾರ ನಿಯಮಗಳ ಉಲ್ಲಂಘನೆ ಕುರಿತು ತಪಾಸಣೆ ನಡೆಸುತ್ತಿದ್ದ ಆಲನಹಳ್ಳಿ ಹಾಗೂ ಸಿರ್ಧಾರ್ಥನಗರ ಸಂಚಾರ ಠಾಣೆ ಪೊಲೀಸರು ಮೂವರು ಜಾನುವಾರು ಕಳ್ಳರನ್ನು ಬಂಧಿಸಿ, ₹ 1.5 ಲಕ್ಷ ಮೌಲ್ಯದ 4 ಹಸುಗಳನ್ನು ರಕ್ಷಿಸಿದ್ದರು. ಜ. 10ರಂದು ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ಹಸುವೊಂದನ್ನು ಕಳ್ಳರು ಕದ್ದು, ಹೊರ ವಲಯದಲ್ಲಿ ಕೊಂದು ಅದರ ಮಾಂಸವನ್ನು ತೆಗೆದುಕೊಂಡು ಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.