ADVERTISEMENT

ದೀಪಾವಳಿಗೆ ಕುಸಿದ ಪಟಾಕಿ ಮಾರಾಟ

ಗಗನಕ್ಕೇರಿದ ಬೆಲೆಯಿಂದ ಬೇಸರಗೊಂಡಿರುವ ಗ್ರಾಹಕ

ನೇಸರ ಕಾಡನಕುಪ್ಪೆ
Published 4 ನವೆಂಬರ್ 2018, 20:30 IST
Last Updated 4 ನವೆಂಬರ್ 2018, 20:30 IST
ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ‍‍ಪಟಾಕಿ ಮಳಿಗೆಗಳ ಬಳಿ ಗ್ರಾಹಕರು ಕಡಿಮೆ ಇರುವುದು
ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ‍‍ಪಟಾಕಿ ಮಳಿಗೆಗಳ ಬಳಿ ಗ್ರಾಹಕರು ಕಡಿಮೆ ಇರುವುದು   

ಮೈಸೂರು: ಈ ವರ್ಷದ ದೀಪಾವಳಿಗೆ ಪಟಾಕಿ ಖರೀದಿಸಲು ನಾಗರಿಕರಲ್ಲಿ ನಿರಾಸಕ್ತಿ ಮೂಡಿದೆ. ಪಟಾಕಿ ಮಾರಾಟ ಮಳಿಗೆಗಳತ್ತ ಗ್ರಾಹಕರು ಸುಳಿಯದೇ ವ್ಯಾಪಾರಿಗಳು ಬೇಸರಗೊಂಡಿದ್ದಾರೆ.

ಸಾಮಾನ್ಯವಾಗಿ ದೀಪಾವಳಿಗೆ ಒಂದು ವಾರ ಇರುವಂತೆಯೇ ಪಟಾಕಿ ಮಾರಾಟ ಬಿರುಸಾಗಿರುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಮಳೆಯಿದ್ದರೂ ಪಟಾಕಿ ಮಾರಾಟ ಜೋರಿತ್ತು. ಈ ವರ್ಷ ಮಳೆಯಿಲ್ಲದೇ, ಪಟಾಕಿ ಸಿಡಿಸಲು ಪೂರಕ ವಾತಾವರಣವಿದ್ದರೂ ಪಟಾಕಿ ಸದ್ದು ಕ್ಷೀಣವಾಗಿದೆ.

ಬೆಲೆ ಹೆಚ್ಚಳವೇ ಮುಖ್ಯ ಕಾರಣ: ಪಟಾಕಿ ಬೆಲೆಗಳು ಗಗನಕ್ಕೆ ಏರಿರುವುದೇ ಮುಖ್ಯ ಕಾರಣ ಎಂದು ಪಟಾಕಿ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ನಗರದ ಜೆ.ಕೆ.ಮೈದಾನದಲ್ಲಿ ಕನಿಷ್ಠ 25 ಪಟಾಕಿ ಸ್ಟಾಲ್‌ಗಳನ್ನು ತೆರೆಯಲಾಗುತ್ತಿತ್ತು. ಅದಕ್ಕೆ ತಕ್ಕಂತೆಯೇ ಮಾರಾಟವೂ ಅಧಿಕವಾಗಿಯೇ ಇರುತ್ತಿತ್ತು. ಆದರೆ, ಈ ವರ್ಷ ಕೇವಲ 17 ಮಳಿಗೆಗಳನ್ನು ತೆರೆಯಲಾಗಿದೆ. ಏಕೆಂದರೆ, ಪಟಾಕಿ ಕೊಳ್ಳಲು ನಾಗರಿಕರು ಆಸಕ್ತಿ ತೋರಿಲ್ಲ. ಜತೆಗೆ, ಜೆ.ಕೆ.ಮೈದಾನದಲ್ಲಿ ಬಾಡಿಗೆಯೂ ಹೆಚ್ಚು. ಹಾಗಾಗಿ, ವ್ಯಾಪಾರಿಗಳು ಬಡಾವಣೆಗಳತ್ತ ಮುಖ ಮಾಡಿದ್ದಾರೆ.

ADVERTISEMENT

ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ವಿಪರೀತ ಹೆಚ್ಚಾಗಿದೆ. ಸಣ್ಣಹೂ ಕುಂಡದ ಪೊಟ್ಟಣ ಕೊಳ್ಳಬೇಕಾದರೂ ಸುರುಸುರು ಬತ್ತಿ ಜತೆಗೆ ಕನಿಷ್ಠವೆಂದರೂ ₹ 250 ನೀಡಬೇಕಾಗುತ್ತದೆ. ಗಿಫ್ಟ್ ಬಾಕ್ಸ್‌ ಬೆಲೆ ಶುರುವಾಗುವುದೇ ₹ 1,500 ಮೇಲ್ಪಟ್ಟು. ಹಾಗಾಗಿ, ಪಟಾಕಿ ಸುಡುವುದಕ್ಕಿಂತ, ನೋಡುವುದೇ ಕ್ಷೇಮ ಎಂದು ನಾಗರಿಕರು ಭಾವಿಸಿದ್ದಾರೆ ಎಂದು ವ್ಯಾಪಾರಿ ರಘು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷದಿಂದಲೇ ಮಾರಾಟ ಕುಸಿತ ಶುರುವಾಗಿದೆ. ಸಾಕಷ್ಟು ಮಾರಾಟಗಾರರು ನಷ್ಟ ಅನುಭವಿಸಿದ್ದಾರೆ. ಈ ವರ್ಷವೂ ಮಾರಾಟ ಚುರುಕಾಗಿಲ್ಲ. ನಮಗೆ ಮಾರಾಟಕ್ಕೆ ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದಲೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ’ ಎಂದರು.

ನಿರ್ಬಂಧ ಕಾರಣವಲ್ಲ:‘ಪಟಾಕಿಯನ್ನು ದಿನಕ್ಕೆ ಎರಡು ಗಂಟೆ ಮಾತ್ರ ಸಿಡಿಸಬೇಕೆಂಬ ಸರ್ಕಾರದ ಆದೇಶ ಪಟಾಕಿ ಮಾರಾಟ ಕುಸಿಯಲು ಮುಖ್ಯ ಕಾರಣವಾಗಿಲ್ಲ. ಪರಿಸರ ಉಳಿಸಲು ಆದೇಶ ಪೂರಕವಾಗಿಯೇ ಇದೆ. ಬೆಲೆ ಹೆಚ್ಚಳದಿಂದಲೇ ಪಟಾಕಿ ಕೊಳ್ಳಲು ಹಿಂದೇಟು ಹಾಕುವಂತಾಗಿದೆ’ ಎಂದು ಗ್ರಾಹಕ ಬಿ.ಎಸ್.ಪಿನಾಕಿ ಹೇಳಿದರು.

ನಗರದಲ್ಲಿ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸುಡಬಹುದು. ಸರ್ಕಾರದ ಆದೇಶವೂ ಅಂತೆಯೇ ಇದೆ. ಅಲ್ಲದೇ, ಅಧಿಕ ಶಬ್ದ ಹೊಮ್ಮಿಸುವ ಪಟಾಕಿಗಳನ್ನು ಸಿಡಿಸಿದೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುವುದು ಎಂದು ಪೊಲೀಸ್ ಕಮಿಷನರ್‌ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.