ADVERTISEMENT

ಬೆಳೆ ಕಟಾವು ಪ್ರಯೋಗಕ್ಕೆ ಚಾಲನೆ

ಜಿಲ್ಲೆಯಲ್ಲಿ 4,500 ಕಡೆಗಳಲ್ಲಿ ಕಾರ್ಯಕ್ರಮ ಆರಂಭ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:07 IST
Last Updated 19 ಡಿಸೆಂಬರ್ 2018, 12:07 IST

ಮೈಸೂರು: ಕರ್ನಾಟಕ ರೈತ ಸುರಕ್ಷಾ ಹಾಗೂ ಪ್ರಧಾನ ಮಂತ್ರಿಗಳ ಫಸಲ್‌ ಬಿಮಾ ಯೋಜನೆಗಳ ಅಂಗವಾಗಿ ಜಿಲ್ಲೆಯಲ್ಲಿ ಬೆಳೆ ಕಟಾವು ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ದೊರಕಿತು.

ಇಲ್ಲಿನ ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೆಸರೆ ಗ್ರಾಮದ ರೈತ ಈಶ್ವರ ಅವರ ಗದ್ದೆಯಲ್ಲಿ ಭತ್ತದ ಬೆಳೆ ಕಟಾವು ಪ್ರಯೋಗ ನಡೆಸಲಾಯಿತು. ಜಮೀನಿನ 5 ಚದರ ಮೀಟರ್ ಭಾಗವನ್ನು ಆಯ್ಕೆ ಮಾಡಿಕೊಂಡು ಧಾನ್ಯ ಹಾಗೂ ಹುಲ್ಲನ್ನು ತೂಕ ಮಾಡಲಾಯಿತು. ತೂಕದ ಅಂಕಿ ಅಂಶವನ್ನು ‘ಸಂರಕ್ಷಣೆ’ ಮೊಬೈಲ್‌ ಅಪ್ಲಿಕೇಷನ್ ಸಹಾಯದಿಂದ ಫಲಸ್ ಬಿಮಾ ಯೋಜನೆ ದತ್ತಾಂಶ ಕೋಶಕ್ಕೆ ಸೇರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್ ಮಾತನಾಡಿ, ‘ಈ ಯೋಜನೆಯ ಲಾಭ ಅಂತಿಮವಾಗಿ ರೈತರಿಗೆ ಆಗಲಿದೆ. ವಿವಿಧ ಧಾನ್ಯಗಳ ಇಳುವರಿಯ ಅಂಕಿ ಅಂಶ ಇದರಿಂದ ಸಿಗುತ್ತದೆ. ಅಲ್ಲದೇ, ‘ಸಂರಕ್ಷಣಾ’ ಅಪ್ಲಿಕೇಷನ್ ಮೂಲಕ ದತ್ತಾಂಶ ಸೇರಿಸುವ ಪ್ರಕ್ರಿಯೆಯಲ್ಲಿ ಕಟಾವಿನ ಚಿತ್ರಗಳನ್ನು ಸೇರಿಸುವ ಕಾರಣ, ಒಂದು ವೇಳೆ ರೈತರಿಗೆ ವಿವಿಧ ಕಾರಣಗಳಿಂದ ಬೆಳೆ ನಷ್ಟವಾದಲ್ಲಿ ವಿಮೆ ಮೂಲಕ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ ಎಂದು ವಿವರಣೆ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಒಟ್ಟು 4,500 ಕಡೆ ರೈತರ ಜಮೀನುಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ. ಒಟ್ಟು 21 ವಿಧದ ತಳಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯ ಎಲ್ಲ ಪಿಡಿಒಗಳಿಗೆ ಈ ಜವಾಬ್ದಾರಿ ನೀಡಲಾಗಿದೆ. ಕೃಷಿ ಇಲಾಖೆ, ಸಾಂಖ್ಯಿಕ ಇಲಾಖೆಗಳು ನೇತೃತ್ವ ವಹಿಸಿಕೊಂಡಿವೆ. ತಹಶೀಲ್ದಾರ್‌ ರಮೇಶ್‌ ಬಾಬು ಅವರು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಈಶ್ವರ ಅವರ ಜಮೀನಿನಲ್ಲಿ 5 ಚದರ ಅಡಿಯಲ್ಲಿ 10.94 ಕೆ.ಜಿ ಭತ್ತದ ಧಾನ್ಯ ಹಾಗೂ 28 ಕೆ.ಜಿ ಭತ್ತದ ಹುಲ್ಲು ದಾಖಲಾಯಿತು. ತ್ರಿಭುಜಾಕೃತಿಯಲ್ಲಿ ಗದ್ದೆಯನ್ನು ಗುರುತು ಮಾಡಿ ಬೆಳೆಯನ್ನು ಕಟಾವ್‌ ಮಾಡಲಾಯಿತು.

ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸದಸ್ಯರಾದ ಮರಿಸ್ವಾಮಿ, ಎಂ.ಮುರುಡೇಶ್, ಭಾಸ್ಕರ್, ಗ್ರಾಮ ಲೆಕ್ಕಾಧಿಕಾರಿ ಸರ್ವೇಶ್‌, ಕಂದಾಯ ಇನ್‌ಸ್ಪೆಕ್ಟರ್ ಪ್ರಶಾಂತ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ, ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್, ಸಾಂಖ್ಯಿಕ ಇನ್‌ಸ್ಪೆಕ್ಟರ್ ಸುರೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ, ಪಿಡಿ ಬೋರೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.