
ಮೈಸೂರು: ಗೋಮಾಳ, ಅರಣ್ಯ ಭೂಮಿ ಹಾಗೂ ಸರ್ಕಾರಿ ಜಾಗಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ‘ಸಾಗುವಳಿ ಪತ್ರ’ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ(ಎಐಕೆಎಸ್)ದ 3ನೇ ಜಿಲ್ಲಾ ಸಮ್ಮೇಳನ ಹಕ್ಕೊತ್ತಾಯ ಮಂಡಿಸಿತು.
ಇಲ್ಲಿನ ಕೃಷ್ಣಮೂರ್ತಿಪುರಂನ ಅಶೋಕ ವೃತ್ತದ ಬುದ್ಧ ವಿಹಾರದಲ್ಲಿ ನಡೆದ ಸಮ್ಮೇಳನದಲ್ಲಿ, ಜಿಲ್ಲೆಯ ಎಲ್ಲಾ ಜಮೀನುಗಳನ್ನೂ ಪಕ್ಕಾಪೋಡಿ ಮಾಡಿಕೊಡಬೇಕು, ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಹಾಗೂ ರೈತರ ಎಲ್ಲಾ ರೀತಿಯ ಸಾಲವನ್ನೂ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.
‘ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಜೆ ಒತ್ತಾಯಿಸಿ ಮೈಸೂರಿನಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಏಪ್ರಿಲ್‌ನಲ್ಲಿ ಮುತ್ತಿಗೆ ಹಾಕಲು, ಫೆ.12ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಬೇಕು’ ಎಂಬಿತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸರ್ಕಾರಗಳ ವಿರುದ್ಧ ಆಕ್ರೋಶ
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್.ಆರ್. ನವೀನ್‌ಕುಮಾರ್, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತರು ಹಾಗೂ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ದೇಶದ ದುಡಿಯುವ ವರ್ಗದ ಜನ ಅತ್ಯಂತ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.
‘ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ, ರೈತರನ್ನು ಕೃಷಿಯಿಂದ ಬಿಡಿಸಲು ಬೇಕಾದ ವಿದ್ಯುತ್ ಖಾಸಗೀಕರಣ ಮಸೂದೆ ಮತ್ತು ಬೀಜ ಮಸೂದೆಗಳನ್ನು ಜಾರಿಗೊಳಿಸಿದ್ದಾರೆ. ರೈತ ವಿರೋಧಿ ಮತ್ತು ಕಾರ್ಪೋರೆಟ್ ಕಂಪನಿಗಳ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ನೀತಿಗಳನ್ನು ಹಿಮ್ಮೆಟ್ಟಿಸಿದರೆ ಮಾತ್ರ ಭಾರತದಲ್ಲಿ ರೈತಾಪಿ ವರ್ಗ ಹಾಗೂ ಕೃಷಿ ಉಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಫೆ.12ರಂದು ದೇಶದಾದ್ಯಂತ ರೈತ, ಕಾರ್ಮಿಕರು ಎಲ್ಲಾ ದುಡಿಯುವ ಜನ ಒಗ್ಗಟ್ಟಾಗಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಇದನ್ನು ಯಶಸ್ವಿಗೊಳಿಸಬೇಕು’ ಎಂದರು.
20 ಲಕ್ಷಕ್ಕೂ ಹೆಚ್ಚು
‘ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು, ಹತ್ತಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ವಹಕ್ಕುಪತ್ರಗಳಿಗಾಗಿ ಕಾಯುತ್ತಿವೆ. ಇವರಿಗೆ ಭೂಮಿಕೊಡುವ ಬದಲು, ಅಭಿವೃದ್ಧಿಯ ಹೆಸರಿನಲ್ಲಿ ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಡೆಸುತ್ತಿದೆ’ ಎಂದು ದೂರಿದರು.
‘ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೊಳಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಆಶಯಗಳಿಗೆ ವಿರುದ್ಧವಾಗಿ ಈಗಿನ ಮುಖ್ಯಮಂತ್ರಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ಚಿಕ್ಕಣ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಉಪಾಧ್ಯಕ್ಷ ಕೆ.ಬಸವರಾಜ್, ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಪ್ಪ, ದೇವರಾಜಮ್ಮ, ಬೀರೇಶ್ವರ್, ಪ್ರಶಾಂತ್ ಪಡುಕೋಟೆ, ಚಂದ್ರಶೇಖರ್, ಪುಟ್ಟರಾಜು, ಕಣಗಾಲು ಲೋಕೇಶ್ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ, ರಾಮಸ್ವಾಮಿ ವೃತ್ತದಿಂದ ಬುದ್ಧವಿಹಾರದವರೆಗೆ ರೈತರ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.