ಮೈಸೂರು: ವಿಜಯದಶಮಿ ಅಂಗವಾಗಿ ಗುರುವಾರ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ನಾಡಿನ ಕಲೆ–ಜಾನಪದ ಸಂಸ್ಕೃತಿ ಮೇಳೈಸಿತು. ರಾಜ್ಯದ ವಿವಿಧ ಭಾಗಗಳ ಕಲಾ ತಂಡಗಳು ಸಾಂಸ್ಕೃತಿಕ ಹಿರಿಮೆ ಸಾರಿದವು.
ಮೆರವಣಿಗೆಯ ಆರಂಭದಿಂದ ಕೊನೆವರೆಗೆ ನೆರೆದ ಲಕ್ಷಾಂತರ ಪ್ರೇಕ್ಷಕರನ್ನು ಕಲಾತಂಡಗಳು ತಮ್ಮ ಸಾಂಸ್ಕೃತಿಕ ಪ್ರದರ್ಶನದ ಮೂಲಕ ರಂಜಿಸಿದವು. ಹಳೇ ಮೈಸೂರು ಸೀಮೆಯ ಜಾನಪದ ಸೊಗಡಿನ ಜೊತೆಗೆ ಕರಾವಳಿಯ ಕೋಲ–ಯಕ್ಷಗಾನ, ಉತ್ತರ ಕರ್ನಾಟಕದ ದೇಸಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕುಣಿತಗಳು ಜಂಬೂ ಸವಾರಿಯ ರಂಗು ಹೆಚ್ಚಿಸಿದವು. ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಿದವು.
ಅರಮನೆ ಆವರಣದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಮೆರವಣಿಗೆ ಆರಂಭಗೊಂಡಿದ್ದು, ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಅರಮನೆಯಿಂದ ಹೊರಡುವ ವೇಳೆಗೆ ಸಂಜೆ ಐದಾಗಿತ್ತು. ಈ ನಡುವಿನ ಮೂರೂವರೆ ತಾಸು ಕಲಾತಂಡಗಳದ್ದೇ ಅಬ್ಬರ ಹೆಚ್ಚಿತ್ತು. ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸುಮಾರು ಐದು ಕಿಲೋಮೀಟರ್ ಉದ್ದಕ್ಕೆ ಬರಿಗಾಲಲ್ಲಿ ಹೆಜ್ಜೆ ಹಾಕಿದ ಕಲಾವಿದರು, ಬಿಸಿಲು ಹಾಗೂ ತುಂತುರು ಮಳೆಯನ್ನೂ ಲೆಕ್ಕಿಸದೇ ಹಾದಿಯುದ್ದಕ್ಕೂ ಪ್ರದರ್ಶನ ನೀಡಿದರು.
259 ಮಹಿಳೆಯರು ಸೇರಿದಂತೆ ಒಟ್ಟು 1,479 ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಒಟ್ಟು 61 ತಂಡಗಳು ಪ್ರದರ್ಶನ ನೀಡಿದವು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ತಂಡಗಳು ಇದ್ದವು.
ಮೈಸೂರಿನ ಗೌರಿಶಂಕರ ನಂದಿಧ್ವಜ ಕಲಾತಂಡದ ನಂದಿಧ್ವಜ ಕುಣಿತದೊಂದಿಗೆ ಮೆರವಣಿಗೆಗೆ ಚಾಲನೆ ದೊರೆಯಿತು. ನಂತರದಲ್ಲಿ ವೀರಭದ್ರ ನೃತ್ಯ ತಂಡದ ಕಲಾವಿದರಿಂದ ವೀರಭದ್ರ ಕುಣಿತ ಮೂಡಿಬಂದಿತು. ಕೊಂಬು ಕಹಳೆ, ನಂದಿ ಕೋಲು, ಜಗ್ಗಲಗಿ ಮೇಳ, ಕುಡುಬಿ ಗುಮಟೆ ನೃತ್ಯ, ಜಡೆ ಕೋಲಾಟ, ಕರಬಲ ನೃತ್ಯ, ದೊಣ್ಣೆ ವರಸೆ, ಗಾರುಡಿ ಗೊಂಬೆ, ಜೋಗತಿ ನೃತ್ಯ, ಕಂಗಿಲು ಕುಣಿತ, ಕರಗ ತಪ್ಪಟಂ, ದಾಲಪಟ, ಢಕ್ಕೆ ಕುಣಿತ, ಹೂವಿನ ನೃತ್ಯ, ಹಗಲು ವೇಷ, ಡೊಳ್ಳು ಕುಣಿತ ಮೊದಲಾದ ಕುಣಿತ ಹಾಗೂ ಸಾಹಸ ಪ್ರದರ್ಶನಗಳು ಪ್ರೇಕ್ಷಕರ ಕರತಾಡನ ಗಿಟ್ಟಿಸಿಕೊಂಡವು.
ಸತ್ತಿಗೆ ಕುಣಿತ, ಕರಂಗೋಲು ಕುಣಿತ, ಹಲಗೆ ಮೇಳ, ಸೋಮನ ಕುಣಿತ, ಹುಲಿ ವೇಷ, ಕೊಡವ ಒಕ್ಕಲಿಗರ ಸುಗ್ಗಿ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಮಹಿಳಾ ಕೋಲಾಟ, ಪಟ ಕುಣಿತ, ಮಹಿಳಾ ವೀರಗಾಸೆ, ಸಿದ್ದಿ ಡಮಾಮಿ ನೃತ್ಯ, ಕರಡಿ ಮಜಲು, ಕರಗ ನೃತ್ಯ, ಪೂಜಾ ಕುಣಿತ, ನವಿಲು ನೃತ್ಯ, ಹೆಜ್ಜೆ ಮೇಳ, ಗೊರವರ ಕುಣಿತ, ದಟ್ಟಿ ಕುಣಿತ, ಲೆಂಗಿ ನೃತ್ಯ, ತಮಟೆ , ನಗಾರಿ, ಕೋಲಾಟ, ಲಂಬಾಣಿ ನೃತ್ಯ, ಪುರವಂತಿಕೆ, ಉರುಮೆ ವಾದನ, ಸರಪಣಿ ನೃತ್ಯ, ಚಿಲಿಪಿಲಿ ಗೊಂಬೆ, ಬೀಸು ಕಂಸಾಳೆ, ಝಾಂಜ್ ಪಥಕ್, ರಾಮಫಲಕ ನೃತ್ಯ, ಕರಗ ಕೋಲಾಟ, ಹಕ್ಕಿಪಿಕ್ಕಿ ನೃತ್ಯ, ಕಥಕ್ಕಳಿ ಗೊಂಬೆ, ಮರಗಾಲು, ತಪ್ಪಟಗುಲು, ವೀರಮಕ್ಕಳ ಕುಣಿತ, ಚಂಡೆ ವಾಹನ, ಕಣಿ ವಾದನ, ತಮಟೆ ವಾದನ, ಬೇಡರ ವೇಷ, ಶಹನಾಯ್ ವಾದನ, ಗಾರುಡಿ ಗೊಂಬೆ, ರತ್ವಾ ಬುಡಕಟ್ಟು ನೃತ್ಯ, ಸ್ಯಾಕ್ಸೋಫೋನ್ ಮೊದಲಾದ ಕಲಾಪ್ರಕಾರಗಳು ಅನಾವರಣಗೊಂಡವು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಲಾತಂಡಗಳೊಂದಿಗೆ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಡೊಳ್ಳು, ಕೋಲಾಟ, ವೀರಗಾಸೆ, ಕಂಸಾಳೆ ಮೊದಲಾದ ಪ್ರದರ್ಶನದ ಮೂಲಕ ರಂಜಿಸಿದರು. ಬಾಯಿಂದ ಬೆಂಕಿ ಉಗುಳುವ, ದೇಹದ ಮೇಲೆ ಹಣ್ಣು ಇಟ್ಟು ಕತ್ತಿಯಿಂದ ಕತ್ತರಿಸುವುದು ಸೇರಿದಂತೆ ವಿವಿಧ ನಾಜೂಕಿನ ಸಾಹಸ ಕಲೆಗಳನ್ನು ಕಂಡು ಪ್ರೇಕ್ಷಕರು ಬೆರಗಾದರು.
ಮೆರವಣಿಗೆಯ ಕೊನೆಯಲ್ಲಿ ಅಶ್ವರೋಹಿ ದಳ, ಕೆಎಸ್‌ಆರ್‌ಪಿ ಇಂಗ್ಲಿಷ್ ಬ್ಯಾಂಡ್, ನಾದಸ್ವರ ತಂಡಗಳು ಜೊತೆಯಾಗಿ ಸಾಗಿದವು.
ಅಡ್ಡಾದಿಡ್ಡಿ ಓಡಾಟಕ್ಕೆ ‘ಲಗಾಮು’
ಮೆರವಣಿಗೆಯ ಸಂದರ್ಭ ಅರಮನೆ ಆವರಣದಲ್ಲಿ ಜನರ ಅಡ್ಡಾದಿಡ್ಡಿ ಓಡಾಟಕ್ಕೆ ಪೊಲೀಸರು ಲಗಾಮು ಹಾಕಿದ್ದು ಇದರಿಂದ ಪ್ರೇಕ್ಷಕರು ಆರಾಮವಾಗಿ ಕುಳಿತು ಜಂಬೂ ಸವಾರಿಯ ಅಂದ ಕಣ್ತುಂಬಿಕೊಳ್ಳಲು ಸಾಧ್ಯವಾಯಿತು. ಮೆರವಣಿಗೆ ಸಾಗುವ ಪಥದಲ್ಲಿ ಮೆರವಣಿಗೆ ಸಮಿತಿ ಸದಸ್ಯರ ಓಡಾಟ ಇರಲಿಲ್ಲ. ಮಾಧ್ಯಮದವರ ಓಡಾಟವನ್ನೂ ನಿರ್ಬಂಧಿಸಿದ್ದು ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮದ ಕ್ಯಾಮೆರಾಮನ್‌ಗಳಿಗೆ ಚಿತ್ರೀಕರಣಕ್ಕೆ ಪ್ರತ್ಯೇಕ ವ್ಯವಸ್ಥೆ ಇತ್ತು. ಜನರು ಆಚೀಚೆ ಓಡಾಡದಂತೆ ಪೊಲೀಸರು ತಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.