ADVERTISEMENT

ಸೈಬರ್‌ ಅಪರಾಧ | ಮುನ್ನೆಚ್ಚರಿಕೆಯೇ ಮದ್ದು: ಎಸ್‌.ಎಲ್‌.ಚನ್ನಬಸವಣ್ಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 3:52 IST
Last Updated 17 ಅಕ್ಟೋಬರ್ 2025, 3:52 IST
ಮೈಸೂರಿನ ಸೆನೆಟ್‌ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯವು ಗುರುವಾರ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಎಸ್.ಎಲ್.ಚನ್ನಬಸವಣ್ಣ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಸೆನೆಟ್‌ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯವು ಗುರುವಾರ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಎಸ್.ಎಲ್.ಚನ್ನಬಸವಣ್ಣ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಸೈಬರ್‌ ಅಪರಾಧಗಳಿಗೆ ಮುನ್ನೆಚ್ಚರಿಕೆಯೇ ಮದ್ದು’ ಎಂದು ಕರ್ನಾಟಕ ಪೊಲೀಸ್‌ ಅಕಾಡಮಿ ನಿರ್ದೇಶಕ ಎಸ್‌.ಎಲ್‌.ಚನ್ನಬಸವಣ್ಣ ಹೇಳಿದರು.

ಮೈಸೂರು ವಿಶ್ವವಿದ್ಯಾಲಯವು ಸೆನೆಟ್‌ ಭವನದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಯುವ ಸಮೂಹ ದೇಶದ ಭವಿಷ್ಯ ರೂಪಿಸುವ ವರ್ಗ. ಆದರೆ ಸೈಬರ್ ಅಪರಾಧ, ಗಾಂಜಾ ಸರಬರಾಜು ಮೂಲಕ ಸಮೂಹವನ್ನು ಬಲಿ ಪಡೆಯುವ ತಂತ್ರಗಳು ನಡೆಯುತ್ತಿದ್ದು, ಮುನ್ನೆಚ್ಚರಿಕೆಯಿದ್ದಾಗ ಇವುಗಳಿಂದ ದೂರವಿರಲು ಸಾಧ್ಯ. ಹೀಗಾಗಿ ಪೊಲೀಸ್‌ ವಿದ್ಯಾರ್ಥಿಗಳ ನಡುವಿನ ಸಂವಾದವು ಜವಾಬ್ದಾರಿಯುತ ನಾಗರಿಕನ ಕರ್ತವ್ಯಗಳ ವಿಮರ್ಶೆಯಿಂದ ಕೂಡಿರಬೇಕು’ ಎಂದರು.

ADVERTISEMENT

‘ನಾವು ಡಿಜಿಟಲ್‌ ಸೃಷ್ಟಿಕರ್ತರಲ್ಲ, ಬದಲಾಗಿ ಬಳಕೆದಾರರಾಗಿದ್ದೇವೆ. ಮೊಬೈಲ್‌ ಆ್ಯಪ್‌ಗಳಿಗೆ ನೀಡುವ ಮಾಹಿತಿಗಳು ಸೋರಿಕೆಯಾಗುತ್ತಿದೆ. ಇದೇ ಕಾರಣದಿಂದ ಈಚೆಗೆ ಟೆಕ್ನಾಲಜಿ ಬಳಸಿಕೊಂಡು ಮಾಡುವ ಅಪರಾಧಗಳು ಹೆಚ್ಚಿವೆ. ಹೀಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ಬಳಸುವಾಗ ಎಚ್ಚರವಹಿಸಿ’ ಎಂದು ಸಲಹೆ ನೀಡಿದರು.

‘ಇಂಟರ್‌ನೆಟ್‌ಗೆ ಜೋಡಿಸಿಕೊಂಡಿರುವ ಎಲ್ಲಾ ಸಾಧನಗಳನ್ನು ಹ್ಯಾಕ್‌ ಮಾಡಬಹುದು. ಆ ಮೂಲಕ ವಿವಿಧ ರೀತಿಯಲ್ಲಿ ನಮ್ಮನ್ನು ವಂಚಿಸುವ ಪ್ರಯತ್ನ ನಡೆಯುತ್ತಿರುತ್ತವೆ. ವಿದ್ಯಾವಂತರೇ ಈ ರೀತಿಯ ಬಲೆಗೆ ಬೀಳುತ್ತಿದ್ದಾರೆ. ವಂಚನೆಗೊಳಗಾಗಿ ಅಪಾಯದಿಂದ ಹೊರಬರಲಾರದೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನೆರೆ ರಾಷ್ಟ್ರಗಳು ನಾರ್ಕೋಟಿಕ್ ಡ್ರಗ್ಸ್ ಮೂಲಕ ಭಯೋತ್ಪಾದನೆ ನಡೆಸುತ್ತಿದೆ. ಇದು ಯುವ ಜನರನ್ನು ನಿಧಾನವಾಗಿ ಬಲಿ ಪಡೆಯುತ್ತಿದ್ದು, ಅವುಗಳಿಂದ ದೂರವಿರಬೇಕು. ಅದರೊಂದಿಗೆ ಸ್ನೇಹಿತರಲ್ಲೂ ಜಾಗೃತಿ ಮೂಡಿಸಬೇಕು. ಅಪರಿಚಿತ ಕರೆ ಬಂದಾಗ ಮಾತೃಭಾಷೆಯಲ್ಲಿ ಮಾತನಾಡಿದರೆ, ವಂಚನೆಯಿಂದ ದೂರವಿರಬಹುದು. ಆ್ಯಪ್‌ ಪಾಸ್‌ವರ್ಡ್‌ಗಳನ್ನು ಗೂಗಲ್‌ನಲ್ಲಿ ನಮೋದಿಸಬೇಡಿ’ ಎಂದರು.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಕೌಶಲಾಭಿವೃದ್ಧಿ ತರಬೇತುದಾರರಾದ ದೇವಿಪ್ರಭಾ ಆಳ್ವ, ಐಕ್ಯುಎಸಿ ನಿರ್ದೇಶಕ ಕೆ.ಎನ್.ಅಮೃತೇಶ್, ಆಡಳಿತಾಧಿಕಾರಿ ಪ್ರೊ.ಎಸ್‌.ಟಿ.ರಾಮಚಂದ್ರ ಇದ್ದರು.

‘ಓದಿನೊಂದಿಗೆ ಆರೋಗ್ಯ ಕಾಳಜಿ ಇರಲಿ’
‘ವಿದ್ಯಾರ್ಥಿಗಳು ಓದಿನ ಜೊತೆಗೆ ಆರೋಗ್ಯದ ಕಾಳಜಿಯೂ ಇರಬೇಕು’ ಎಂದು ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ತಿಳಿಸಿದರು. ‘ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲೂ ಹೆದರಬಾರದು. ಧೈರ್ಯದಿಂದ ಪರಿಸ್ಥಿತಿ ಎದುರಿಸಬೇಕು. ಸಮಸ್ಯೆಗಳಿಗೆ ಸಿಲುಕಿ ಕೊಳ್ಳದವರು ಈ ಜಗತ್ತಿನಲ್ಲಿ ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಸಮಸ್ಯೆಗಳಿಗೆ ಸಿಲುಕಿಕೊಂಡಿರುತ್ತಾರೆ. ಆದರೆ ಅದರಿಂದ ಹೊರಬಂದು ಸಾಧನೆ ಮಾಡುವುದೇ ಜೀವನದ ದೊಡ್ಡ ಜಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.