ADVERTISEMENT

ನಾನು ದಲಿತ ವಿರೋಧಿಯಲ್ಲ: ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ; ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:34 IST
Last Updated 26 ಆಗಸ್ಟ್ 2025, 7:34 IST
   

ಮೈಸೂರು: 'ನಾನು ದಲಿತ ವಿರೋಧಿಯಲ್ಲ. ದಲಿತರ ಪರವಾಗಿ ಅನೇಕ ಕೆಲಸ ಮಾಡಿದ್ದೇನೆ. ಆದರೂ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ. ಟೀಕಿಸುವವರು ನನ್ನ ಪಾಲಿನ ದೇವರು' ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ವಿಧಾನಸಭಾ ಕಲಾಪದಲ್ಲಿ ಜಿಟಿಡಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆಂಬ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಇಲ್ಲಿನ ಜಲದರ್ಶಿನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ ಹಿಂದುಳಿದ ವರ್ಗದವರಿಗೂ ಸ್ಥಾನಮಾನ ನೀಡಿ ಎಂದು ಕಲಾಪದಲ್ಲಿ ವಿನಂತಿಸಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಹಲವರು ಟೀಕೆಗಾಗಿ ಕೆಟ್ಟ ಪದಗಳನ್ನು ಬಳಸಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ' ಎಂದರು.

'ರಾಜಕೀಯ ಜೀವನದಲ್ಲಿ ನನ್ನ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ. ಈ ವಿಚಾರವಾಗಿ ದಾಖಲಾದರೂ, ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡುವರ ವಿರುದ್ಧ ದೂರು ನೀಡುವುದಿಲ್ಲ. ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ' ಎಂದರು.

ADVERTISEMENT

ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಪ್ರತೀ ವರ್ಷವೂ ದಸರಾವನ್ನು ಸಾಹಿತಿ, ಮಠಾಧೀಶರು, ಹಿರಿಯರಿಂದ ಉದ್ಘಾಟಿಸಲಾಗುತ್ತದೆ. ಹಿಂದೆ ನಿಸಾರ್ ಅಹಮದ್ ಕೂಡ ಉದ್ಘಾಟಿಸಿದ್ದರು. ದಸರಾದ ಉನ್ನತ ಮಟ್ಟದ ಸಮಿತಿಯು ಮುಖ್ಯಮಂತ್ರಿಗಳು ಉದ್ಘಾಟಕರನ್ನು ಆಯ್ಕೆ ಮಾಡಲು ಅನುಮತಿ ನೀಡಿತ್ತು, ಅದಕ್ಕೆ ಸರಿಯಾಗಿ ಅವರು ಆಯ್ಕೆ‌ ಮಾಡಿದ್ದಾರೆ. ಚಾಮುಂಡೇಶ್ವರಿ ಮೇಲೆ‌ ನಂಬಿಕೆ‌ ಇಲ್ಲದಿದ್ದರೆ ಉದ್ಘಾಟಕರು ಬರೋದೆ‌ ಇಲ್ವಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.