ADVERTISEMENT

ಬೇಡದ್ದನ್ನು ಚರಿತ್ರೆಗೆ ಅಂಟಿಸುವ ಬೆಳವಣಿಗೆ ಅರಿಯಿರಿ: ಎಚ್‌.ಎಲ್‌.ಪುಷ್ಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:50 IST
Last Updated 1 ಸೆಪ್ಟೆಂಬರ್ 2025, 2:50 IST
ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನೂರು ಚನ್ನಪ್ಪ ಅವರ ‘ಕಬ್ಬಿಣದ ಕುದುರೆಗಳು’ ಕೃತಿಯನ್ನು ವಡ್ಡಗೆರೆ ನಾಗರಾಜಯ್ಯ ಬಿಡುಗಡೆಗೊಳಿಸಿದರು
ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನೂರು ಚನ್ನಪ್ಪ ಅವರ ‘ಕಬ್ಬಿಣದ ಕುದುರೆಗಳು’ ಕೃತಿಯನ್ನು ವಡ್ಡಗೆರೆ ನಾಗರಾಜಯ್ಯ ಬಿಡುಗಡೆಗೊಳಿಸಿದರು   

ಮೈಸೂರು: ‘ಚರಿತ್ರೆಯ ತಪ್ಪು ತಿದ್ದಲು ಹೊರಟ ವರ್ಗವು ದಲಿತ ಮಹಿಳೆಯರಿಗಾದ ಅನ್ಯಾಯ ಸರಿಪಡಿಸಲು ಯಾಕೆ ಹೋಗುವುದಿಲ್ಲ. ಬೇಕಾದುದನ್ನು ಒಪ್ಪಿಕೊಳ್ಳುವ, ಬೇಡವಾದುದನ್ನು ಚರಿತ್ರೆಗೆ ಅಂಟಿಸುವ ಬೆಳವಣಿಗೆ ಬಗ್ಗೆ ಗಮನಿಸಬೇಕು’ ಎಂದು ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌.ಪುಷ್ಪ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ, ನೆಲೆ ಹಿನ್ನೆಲೆ ಸಂಸ್ಥೆ ಹಾಗೂ ಚಾಮರಾಜನಗರದ ಜೋಳಿಗೆ ಪ್ರಕಾಶನವು ಇಲ್ಲಿನ ರಾಣಿಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಹನೂರು ಚನ್ನಪ್ಪ ಅವರ ‘ಕಬ್ಬಿಣದ ಕುದುರೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬಾನು ಮುಷ್ತಾಕ್‌ ಮಹಿಳೆ ಹಾಗೂ ಪ್ರಗತಿಪರರು ಎಂಬ ಕಾರಣಕ್ಕೆ ಅವರು ದಸರಾ ಉದ್ಘಾಟಿಸಬಾರದು ಎಂಬ ಮಾತುಗಳು ಕೇಳಿ ಬರುತ್ತಿದೆ. ಅವರಿಗೆ ಪ್ರಶಸ್ತಿ ಲಭಿಸಿದಾಗ ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ದಸರಾ ಉದ್ಘಾಟನೆಗೆ ಆಯ್ಕೆಯಾದಾಗ ಕೆಲವು ಪಕ್ಷಗಳು ವಿರೋಧಿಸುತ್ತಿವೆ. ಇದು ಸಮಾಜದಲ್ಲಿ ಮೌನವಾಗಿ ನಡೆಯುತ್ತಿರುವ ಕ್ರೌರ್ಯಕ್ಕೆ ಉದಾಹರಣೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಹಿಂದೆ ಕೃತಿಗಳು ಆಪ್ತರ ಸಮ್ಮುಖದಲ್ಲಿ ಬಿಡುಗಡೆಗೊಳ್ಳುತ್ತಿದ್ದವು. ಆದರೆ ಈಚೆಗೆ ಬರಹಗಾರರು ಹೆಚ್ಚಿದ್ದು, ಪುಸ್ತಕ ಬಿಡುಗಡೆಯೂ ವಿಜೃಂಭಣೆಯಿಂದ ನಡೆಯುತ್ತಿದೆ. ಆ ಪುಸ್ತಕದ ವಿಚಾರಗಳು ತಲುಪಬೇಕಾದವರನ್ನು ತಲುಪುತ್ತಿವೆಯೇ ಎಂಬುದನ್ನು ಪ್ರಶ್ನಿಸಬೇಕಾಗಿದೆ’ ಎಂದರು.

‘ಕಾದಂಬರಿಯು ಇತಿಹಾಸದ ಹಾದಿ, ಭವಿಷ್ಯದ ದಾರಿಯ ಬಗ್ಗೆ ತಿಳಿಸಿದಾಗ ಎಲ್ಲ ಕಾಲಕ್ಕೂ ಒಪ್ಪಿತವಾಗಲು ಸಾಧ್ಯ. ಪ್ರಸ್ತುತ ಸಂವಿಧಾನ, ಕಾನೂನಿನ ನಡುವೆ ಬದುಕುತ್ತಿರುವ ನಾವು ಜಾತಿ, ಮತದ ಸಂಕೋಲೆ ಕಳಚಿ ಹೊರಬರುವ ಕಾಲದಲ್ಲಿದ್ದೇವೆ. ಆದರೆ ಈಗಲೂ ಮರ್ಯಾದೆ ಹತ್ಯೆ, ಕೋಮು ಸಂಘರ್ಷ ಯಾಕೆ ನಡೆಯುತ್ತಿದೆ ಎಂಬುದನ್ನು ‘ಕಬ್ಬಿಣದ ಕುದುರೆಗಳು’ ಕೃತಿಯು ತಿಳಿಸಿದೆ. ಅದು ಇಂದಿನ ಸಮಸ್ಯೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡು ಮೌನವಾಗಿಯೇ ಪ್ರಶ್ನೆ ಕೇಳುತ್ತಿದೆ’ ಎಂದು ವಿಶ್ಲೇಷಿಸಿದರು.

ಸಾಹಿತಿ ಭಗವಾನ್‌, ರಂಗಾಯಣ ಮಾಜಿ ನಿರ್ದೇಶಕ ಎಚ್‌.ಜನಾರ್ದನ್ (ಜೆನ್ನಿ) ಮೊದಲ ಕೃತಿ ಸ್ವೀಕರಿಸಿದರು.

ಸಾಹಿತಿ ವಡ್ಡಿಗೆರೆ ನಾಗರಾಜ್, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ನೆಲ್ಲುಕುಂಟೆ ವೆಂಕಟೇಶಯ್ಯ, ಲೇಖಕ ಹನೂರು ಚನ್ನಪ್ಪ, ಮಾಜಿ ಮೇಯರ್ ಪುರುಷೋತ್ತಮ ಭಾಗವಹಿಸಿದ್ದರು.

ಕೃತಿ ಪರಿಚಯ

ಹೆಸರು: ಕಬ್ಬಿಣದ ಕುದುರೆಗಳು

ಲೇಖಕರು: ಹನೂರು ಚನ್ನಪ್ಪ

ಪುಟಗಳು: 264

ಬೆಲೆ: ₹325

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.