ADVERTISEMENT

ಮೈಸೂರಿನ ಪೆಟ್ಟದಪುರದಲ್ಲಿ ಹದಗೆಟ್ಟ ರಸ್ತೆ: ಸಂಚಾರ ದುಸ್ತರ

ಕೆಸರುಗದ್ದೆಯಾದ ಪಾಕನಾಡ ಕೊಪ್ಪಲು ಗ್ರಾಮದ ಮುಖ್ಯದಾರಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:03 IST
Last Updated 10 ಆಗಸ್ಟ್ 2020, 4:03 IST
ಬೆಟ್ಟದಪುರ ಸಮೀಪದ ಪಾಕನಾಡ ಕೊಪ್ಪಲು ಗ್ರಾಮದ ಕೆರೆಯ ಏರಿಯಲ್ಲಿ ಗ್ರಾಮಸ್ಥರು ಓಡಾಡಲಾಗದ ಪರಿಸ್ಥಿತಿಯನ್ನು ತೋರಿಸಿದರು
ಬೆಟ್ಟದಪುರ ಸಮೀಪದ ಪಾಕನಾಡ ಕೊಪ್ಪಲು ಗ್ರಾಮದ ಕೆರೆಯ ಏರಿಯಲ್ಲಿ ಗ್ರಾಮಸ್ಥರು ಓಡಾಡಲಾಗದ ಪರಿಸ್ಥಿತಿಯನ್ನು ತೋರಿಸಿದರು   

ಬೆಟ್ಟದಪುರ: ಸಮೀಪದ ಪಾಕನಾಡ ಕೊಪ್ಪಲು ಗ್ರಾಮದ ಮುಖ್ಯ ರಸ್ತೆಯ ಕೆರೆ ಏರಿಯ ದಡದಲ್ಲಿ ಮಣ್ಣು ಹಾಕಿದ್ದರಿಂದ ರಸ್ತೆ ಕೆಸರು ಗದ್ದೆಯಾಗಿದ್ದು ಓಡಾಡಲು ಆಗದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರೈತರಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಾಕನಾಡ ಕೊಪ್ಪಲು ಗ್ರಾಮದಿಂದ ಹೊಸಹಳ್ಳಿ, ಹಂಪಾಪುರ, ಆಯಚನಹಳ್ಳಿ, ಹೊಸೂರು ಗ್ರಾಮಗಳ ಮೂಲಕ ರಾಮನಾಥಪುರಕ್ಕೆ ಸಾಗುವ ರಸ್ತೆ ಇದಾಗಿದ್ದು ಸುಮಾರು ಒಂದೂವರೆ ಕಿ.ಮೀ. ಉದ್ದದ ರಸ್ತೆ ಕೆಸರು ಗದ್ದೆಯಾಗಿದೆ. ಪಕ್ಕದಲ್ಲಿ ಕೆರೆ ಮತ್ತೊಂದು ಕಡೆ ತೋಟ ಇದ್ದು ಸಂಚರಿಸುವಾಗ ಆಯ ತಪ್ಪಿದರೆ ಕೆರೆ ಅಥವಾ ತೋಟಕ್ಕೆ ಬೀಳುವ ಭಯ ಸಹ ಎದುರಾಗಿದೆ. ಅಲ್ಲದೇ ಇದಕ್ಕೆ ಯಾವುದೇ ತಡೆಗೋಡೆ ಸಹ ನಿರ್ಮಿಸಿಲ್ಲ ಹೀಗಾಗಿ ನಿತ್ಯ ಸಣ್ಣಪುಟ್ಟ ಅವಘಡಗಳು ಆಗುತ್ತಲೇ ಇವೆ.

ADVERTISEMENT

ಮಕ್ಕಳು, ವೃದ್ಧರು ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸಲು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಹಾಳಾಗಿರುವ ಬಗ್ಗೆ ಅರಿವಿಲ್ಲದೆ ಸಾಕಷ್ಟು ಬಾರಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ ಉದಾಹರಣೆಗಳು ಇವೆ.

‘ಜಿಲ್ಲಾ ಪಂಚಾಯಿತಿ ವತಿಯಿಂದ ಈ ಕಾಮಗಾರಿ ಮಾಡಿಸಿದ್ದು, ಕಳೆದ ಒಂದು ತಿಂಗಳಿಂದ ಅವರ ಗಮನಕ್ಕೆ ತಂದು ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲ. ಇದರಿಂದ ನಾಲ್ಕಾರು ಗ್ರಾಮಗಳಿಂದ ನಮ್ಮ ಗ್ರಾಮಕ್ಕೆ ಬರುತ್ತಿದ್ದ ಹಾಲು ಸರಬರಾಜು ಬೇರೆ ಡೇರಿಗೆ ಹೋಗುತ್ತಿದೆ. ಇದರಿಂದ ನಮಗೆ 6 ರಿಂದ 7 ಕ್ಯಾನ್ ಹಾಲಿನ ಸರಬರಾಜು ಕಡಿಮೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸಿ ಗ್ರಾಮಸ್ಥರು ಸಮಸ್ಯೆಗೆ ಸ್ಪಂದಿಸುವಂತೆ’ ಹಾಲಿನ ಡೇರಿ ಕಾರ್ಯದರ್ಶಿ ಚಂದ್ರಪ್ಪ ಒತ್ತಾಯಿಸಿದ್ದಾರೆ.

‘ನಾವು ಪ್ರತಿನಿತ್ಯ ಈ ಏರಿ ಮೂಲಕವೇ ನಮ್ಮ ಜಮೀನುಗಳಿಗೆ ತೆರಳಬೇಕು ದನ– ಕರು ಹಿಡಿದುಕೊಂಡು ಹೋಗುವುದಕ್ಕೆ ಬಹಳ ತೊಂದರೆಯಾಗುತ್ತದೆ. ಕೆರೆಯ ಮಣ್ಣನ್ನು ಏರಿಗೆ ಹಾಕಿದ್ದು ಮಳೆ ಬಿದ್ದಿರುವುದರಿಂದ ಈ ಜಾಗದಲ್ಲಿ ಓಡಾಡಲು ಸಮಸ್ಯೆಯಾಗಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣವೇ ಓಡಾಡಲು ಅನುಕೂಲ ಮಾಡಿಕೊಡುವಂತೆ’ ಗ್ರಾಮಸ್ಥರಾದ ಗುರುಲಿಂಗಪ್ಪ ಮನವಿ ಮಾಡಿದರು.

ಸ್ಥಳೀಯರಾದ ಗುರುಬಸಪ್ಪ ‘ನಾನು ಆಡು ಕುರಿ ಮೇಯಿಸಲು ಪ್ರತಿನಿತ್ಯ ಈ ದಾರಿಯಲ್ಲೇ ಓಡಾಡುತ್ತಿದ್ದೇನೆ. ನಾನು ಅನೇಕ ಬಾರಿ ಜಾರಿ ಬಿದ್ದು ಕೈ ಕಾಲುಗಳು ನೋವಾಗಿವೆ. ನಮ್ಮ ಕಷ್ಟಗಳನ್ನು ಯಾರು ಕೇಳುತ್ತಾರೆ’ ಎಂದು ಹಿಡಿಶಾಪ ಹಾಕಿದರು.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ಅನೇಕ ಪ್ರದೇಶಗಳ ರಸ್ತೆಗಳು ಕೆಸರು ಗದ್ದೆಯಾಗಿ ಪರಿವರ್ತನೆಗೊಂಡಿದ್ದು ಸಂಚಾರಕ್ಕೆ ಭಾರಿ ಪ್ರಯಾಸ ಪಡಬೇಕಾಗಿದೆ . ಅಗತ್ಯ ಮುಂಜಾಗ್ರತೆ ಕ್ರಮ ವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.