ADVERTISEMENT

ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಒತ್ತಾಯ

ಜಾತಿ ನಿಂದನೆ: ಶಾಸಕ ಮುನಿರತ್ನ ವಿರುದ್ಧ ದಸಂಸ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:27 IST
Last Updated 15 ಸೆಪ್ಟೆಂಬರ್ 2024, 14:27 IST
ಜಾತಿ ನಿಂದಿಸಿ, ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ತಿ. ನರಸೀಪುರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಜಾತಿ ನಿಂದಿಸಿ, ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ತಿ. ನರಸೀಪುರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ತಿ.ನರಸೀಪುರ: ಜಾತಿ ನಿಂದನೆ ಮಾಡಿರುವುದಲ್ಲದೇ, ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಬೆಂಗಳೂರು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರನ್ನು ಅನರ್ಹಗೊಳಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಗುತ್ತಿಗೆದಾರರ ಜತೆ ದೂರವಾಣಿ ಕರೆಯಲ್ಲಿ ಮಾತನಾಡುವ ವೇಳೆ ಶಾಸಕ ಮುನಿರತ್ನ ಅವರು ಶೋಷಿತ ಸಮುದಾಯವನ್ನು ನಿಂದಿಸಿ ಮಹಿಳೆಯರ ಬಗ್ಗೆ ಅನುಚಿತವಾಗಿ ಮಾತನಾಡಿರುವುದನ್ನು ದಸಂಸ ಖಂಡಿಸುತ್ತದೆ ಎಂದು ಪ್ರತಿಭಟನಕಾರರು ಹೇಳಿದರು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಬಹುಸಂಖ್ಯಾತ ತಳ ಸಮುದಾಯಗಳ ಮತಗಳನ್ನು ಪಡೆದು ಶಾಸಕರಾದ ಮೇಲೆ ಮುನಿರತ್ನ ಜನಪ್ರತಿನಿಧಿ ಎಂಬುದನ್ನು ಮರೆತಿದ್ದಾರೆ.  ಶೋಷಣೆಗೆ ಒಳಗಾಗಿದ್ದ ದಲಿತ ಸಮುದಾಯದ ಬಗ್ಗೆ ಜಾತಿ ಸೂಚಕ ಪದ ಬಳಸಿ, ಮಹಿಳೆಯರ ಬಗ್ಗೆ ಕೀಳಾಗಿ ನಿಂದಿಸಿರುವುದು ಅಕ್ಷಮ್ಯ ಅಪರಾಧ. ಇದು ವಿಕೃತ ಮನಸ್ಸಿನ ಸ್ಥಿತಿ ತೋರಿಸುತ್ತದೆ ಎಂದರು.

ADVERTISEMENT

ಸಂವಿಧಾನದ ಆಶಯಗಳ ಮೇಲೆ ಆಯ್ಕೆಯಾದ ವ್ಯಕ್ತಿ ಕೀಳು ಅಭಿರುಚಿಯ ಮಾತಗಳಾಡಿರುವುದು ಖಂಡನೀಯ. ಕೂಡಲೇ ರಾಜ್ಯಪಾಲರು ಹಾಗೂ ವಿಧಾನಸಭಾಧ್ಯಕ್ಷರು ಮುನಿರತ್ನ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಿ, ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದಂತೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ , ತಾಲ್ಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿದರು. ಪ್ರತಿಭಟನೆಯಲ್ಲಿ ದಸಂಸ ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್, ಎಡದೊರೆ ಮಹದೇವಯ್ಯ, ಹಿರಿಯೂರು ರಾಜೇಶ್ ನಾಗರಾಜು, ಗಿರಿಯಪ್ಪ, ಕೃಷ್ಣ, ಸೋಮಣ್ಣ, ನಾಗರಾಜಮೂರ್ತಿ, ಬನ್ನಹಳ್ಳಿಹುಂಡಿ ಉಮೇಶ್, ಹೊನ್ನಯ್ಯ, ಸುಜ್ಜಲೂರು ಶಿವಯ್ಯ, ಕಿರಗಸೂರು ರಜನಿ, ನವೀನ್, ಪುಟ್ಟರಾಜು, ವಾಟಾಳು ಕೃಷ್ಣ, ನಾಗರಾಜು, ಮನು, ಕರೋಹಟ್ಟಿ ನಾಗೇಶ, ನಾರಾಯಣ್, ರಂಗಸಮುದ್ರ ನಂಜುಂಡ, ಎಂ.ಮಲ್ಲಯ್ಯ, ಅರ್ಜುನ್, ಮಾವಿನಹಳ್ಳಿ ಕುಮಾರ್, ಎಂ.ಬಿ.ಲಿಂಗರಾಜು, ಶಾಂತಕುಮಾರ್, ರಘು, ಕೇತಹಳ್ಳಿ ಹರೀಶ್ ಸಿದ್ದರಾಜು, ರಾಮು, ಅರುಣ್, ದೇವರಾಜು, ರಾಜು, ಬಿಲಿಗೆರೆಹುಂಡಿ ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.