ADVERTISEMENT

ಮೈಸೂರು: ಗರಿಗೆದರದ ಹೋಟೆಲ್‌ ಉದ್ಯಮ

ಕೊಠಡಿಗಳ ಮುಂಗಡ ಬುಕ್ಕಿಂಗ್‌ಗೆ ಪ್ರವಾಸಿಗರ ನಿರಾಸಕ್ತಿ; ಅ.15ರ ನಂತರ ಚೇತರಿಕೆ ನಿರೀಕ್ಷೆ

ಆರ್.ಜಿತೇಂದ್ರ
Published 11 ಅಕ್ಟೋಬರ್ 2023, 6:08 IST
Last Updated 11 ಅಕ್ಟೋಬರ್ 2023, 6:08 IST
ಸಿ.ನಾರಾಯಣಗೌಡ
ಸಿ.ನಾರಾಯಣಗೌಡ   

ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆಗೆ ಇನ್ನು ಐದು ದಿನವಷ್ಟೇ ಬಾಕಿ ಉಳಿದಿದ್ದು, ಹೋಟೆಲ್‌ಗಳಲ್ಲಿ ಶೇ 10–15ರಷ್ಟು ಕೊಠಡಿಗಳು ಮಾತ್ರವೇ ಬುಕ್ಕಿಂಗ್‌ ಆಗಿವೆ. ಕಾವೇರಿ ವಿವಾದದ ಕಾರಣಕ್ಕೆ ಪ್ರವಾಸಿಗರು ಕೊಠಡಿ ಕಾಯ್ದಿರಿಸಲು ಕೊಂಚ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಉದ್ಯಮಿಗಳು.

ದಸರಾ ಒಂಭತ್ತು ದಿನಗಳ ಕಾಲ ನಡೆಯುವ ಉತ್ಸವ. ಇಷ್ಟೂ ದಿನವೂ ದೀಪಗಳ ಬೆಳಕಲ್ಲಿ ಕಂಗೊಳಿಸುವ ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳಲು ದೇಶ–ವಿದೇಶಗಳ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಈ ಸಂದರ್ಭ ನಡೆಯುವ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ, ಕ್ರೀಡಾಕೂಟ, ಚಲನಚಿತ್ರೋತ್ಸವ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ ಎಲ್ಲವೂ ಜನಾಕರ್ಷಣೆಯ ಕಾರ್ಯಕ್ರಮಗಳಾಗಿವೆ. ಅದರಲ್ಲೂ ಜಂಬೂಸವಾರಿಯ ದಿನ ನಗರದ ರಾಜಬೀದಿಗಳಲ್ಲಿ ಕಾಲಿಡಲು ಜಾಗವಿಲ್ಲದಂತಹ ಪರಿಸ್ಥಿತಿ ಇರುತ್ತದೆ. ಈ ಸಂದರ್ಭ ಮೈಸೂರಿನಲ್ಲೇ ತಂಗಲು ಪ್ರವಾಸಿಗರು ನಗರದ ಹೋಟೆಲ್‌ಗಳಲ್ಲಿ ಸಾಕಷ್ಟು ಮುಂಚೆಯೇ ಕೊಠಡಿ ಕಾಯ್ದಿರಿಸುತ್ತಾರೆ. ಬಹುತೇಕ ವರ್ಷಗಳಲ್ಲಿ ದಸರಾ ವೇಳೆ ಪ್ರವಾಸಿಗರಿಗೆ ಕೊಠಡಿಗಳು ಸಿಗದಂತಹ ಪರಿಸ್ಥಿತಿ ಇರುತ್ತದೆ.

ಮೈಸೂರಿನಲ್ಲಿ ವಸತಿಗೃಹಗಳು, ಹೋಟೆಲ್‌–ರೆಸ್ಟೋರೆಂಟ್ ಸೇರಿಸಿ 1500ಕ್ಕೂ ಹೆಚ್ಚು ಉದ್ಯಮಗಳು ಇವೆ. ಇವರಿಗೆಲ್ಲ ದಸರೆ ಉತ್ತಮ ವ್ಯಾಪಾರ ಮತ್ತು ಆದಾಯದ ಮೂಲವಾಗಿದೆ. ಈ ವರ್ಷ ದೊಡ್ಡ ಮಟ್ಟದ ಸ್ಟಾರ್ ಹೋಟೆಲ್‌ಗಳಲ್ಲಿ ತಂಗಲು ಗ್ರಾಹಕರು ತಕ್ಕ ಮಟ್ಟಿಗೆ ಆಸಕ್ತಿ ತೋರಿದ್ದರೂ, ಮಧ್ಯಮ ಹಾಗೂ ಸಾಮಾನ್ಯ ದರ್ಜೆಯ ವಸತಿಗೃಹಗಳತ್ತ ಇನ್ನೂ ಪ್ರವಾಸಿಗರು ಮನಸ್ಸು ಮಾಡಿಲ್ಲ ಎನ್ನುತ್ತಾರೆ ಹೋಟೆಲ್‌ ಉದ್ಯಮಿಗಳು.

ADVERTISEMENT

ಮೈಸೂರು ನಗರದಲ್ಲಿ 400ಕ್ಕೂ ಹೆಚ್ಚು ವಸತಿಗೃಹಗಳು ಇದ್ದು, ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಕೊಠಡಿಗಳು ಇವೆ. ಈವರೆಗೆ 1000–1500 ಕೊಠಡಿಗಳನ್ನು ಮಾತ್ರವೇ ಗ್ರಾಹಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎನ್ನುತ್ತಾರೆ ಮೈಸೂರು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ.

ಕೋವಿಡ್ ಕಾರಣಕ್ಕೆ ಹಿಂದಿನ ವರ್ಷಗಳಲ್ಲಿ ಹೋಟೆಲ್‌ ಉದ್ಯಮ ನೆಲ ಕಚ್ಚಿತ್ತು. ಕಳೆದ ವರ್ಷ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು. ಈ ವರ್ಷ ಸಹ ಉತ್ತಮ ವಹಿವಾಟು ನಡೆಯುವ ನಿರೀಕ್ಷೆ ಇತ್ತು. ಆದರೆ ಕಾವೇರಿ ವಿವಾದ ಮೊದಲಾದ ಕಾರಣಗಳಿಗೆ ಹೆಚ್ಚು ಬುಕ್ಕಿಂಗ್‌ ನಡೆದಿಲ್ಲ. ಅ.15ರ ನಂತರ ಪ್ರವಾಸಿಗರು ಮೈಸೂರಿಗೆ ಬರಲು ಆರಂಭಿಸುತ್ತಾರೆ. ಆಗಲಾದರೂ ಹೋಟೆಲ್‌ಗಳು ಭರ್ತಿ ಆಗಬಹುದು ಎನ್ನುತ್ತಾರೆ ಅವರು.

400ಕ್ಕೂ ಹೆಚ್ಚು ವಸತಿಗೃಹ ಶೇ 10–15ರಷ್ಟು ಮಾತ್ರವೇ ಬುಕ್ಕಿಂಗ್ ದಸರಾ ಉದ್ಘಾಟನೆ ಬಳಿಕ ಹೆಚ್ಚಳ ನಿರೀಕ್ಷೆ

ಮೈಸೂರಿನ 400 ವಸತಿಗೃಹಗಳಲ್ಲಿ ಈ ಬಾರಿ ದಸರೆಗೆ ಶೇ 10–15ರಷ್ಟು ಮಾತ್ರವೇ ಬುಕ್ಕಿಂಗ್ ಆಗಿದೆ. ದಸರಾ ಉದ್ಘಾಟನೆ ಬಳಿಕ ಈ ಪ್ರಮಾಣ ಹೆಚ್ಚಬಹುದು

-ಸಿ. ನಾರಾಯಣ ಗೌಡ ಅಧ್ಯಕ್ಷ ಮೈಸೂರು ಹೋಟೆಲ್ ಮಾಲೀಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.