ADVERTISEMENT

ದಸರಾ 2024: ಆನೆ ಆಯ್ಕೆ ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:37 IST
Last Updated 20 ಜುಲೈ 2024, 13:37 IST
ಆನೆ ಶಿಬಿರದಲ್ಲಿ ಆನೆಗಳನ್ನು ಪರಿಶೀಲಿಸಿದ ಡಿಸಿಎಫ್‌ ಬಿ.ಎಂ.ಶರಣಬಸಪ್ಪ ನೇತೃತ್ವದ ತಂಡ
ಆನೆ ಶಿಬಿರದಲ್ಲಿ ಆನೆಗಳನ್ನು ಪರಿಶೀಲಿಸಿದ ಡಿಸಿಎಫ್‌ ಬಿ.ಎಂ.ಶರಣಬಸಪ್ಪ ನೇತೃತ್ವದ ತಂಡ   

ಮೈಸೂರು: ನಾಡಹಬ್ಬ ದಸರೆಯ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆಯು ಪೂರ್ಣಗೊಳಿಸಿದ್ದು, 18 ಆನೆಗಳ ಪಟ್ಟಿ ಸಿದ್ಧಪಡಿಸಿದೆ. ಅವುಗಳಲ್ಲಿ 14 ಆನೆ ಮಾತ್ರ ಭಾಗವಹಿಸಲಿವೆ.

‘ಇದೇ ತಿಂಗಳೊಳಗೆ ಬೆಂಗಳೂರಿನ ವಿಧಾನಸಭೆಯಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಆನೆಗಳ ಆಯ್ಕೆ ಪ್ರಕ್ರಿಯೆ ಮುಗಿದಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಗುವುದು. ನಂತರ ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಆಯ್ಕೆ ಪಟ್ಟಿ ಸಲ್ಲಿಸಲಾಗುವುದು’ ಎಂದು ಡಿಸಿಎಫ್‌ ಬಿ.ಎಂ.ಶರಣಬಸಪ್ಪ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಒಂದು ತಿಂಗಳಿಂದ ಇಲಾಖೆಯ ತಜ್ಞರ ತಂಡವು ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಆನೆಯ ಶಿಬಿರಗಳಿಗೆ ತೆರಳಿ ಅವುಗಳ ಆರೋಗ್ಯ, ಕಾರ್ಯಕ್ಷಮತೆ ಗಮನಿಸಿ ಆಯ್ಕೆ ಮಾಡಿದೆ. ಗರ್ಭ ಧರಿಸಿಲ್ಲದಿರುವುದನ್ನು ಖಚಿತಪಡಿಸಿಕೊಂಡೇ ಹೆಣ್ಣಾನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮೇಲಧಿಕಾರಿಗಳ ಒಪ್ಪಿಗೆಯ ನಂತರ ಆನೆಗಳ ಅಂತಿಮ ಪಟ್ಟಿಯನ್ನು ಆಯಾ ಶಿಬಿರ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಗೆ ಕಳುಹಿಸಲಾಗುವುದು’ ಎಂದರು.

ಗಜಪಡೆಯಲ್ಲಿ ಹೊಸ ಆನೆಗಳು: ಕಳೆದ ವರ್ಷದ ದಸರೆಯಲ್ಲಿ ಬಂದಿದ್ದ ಆನೆಗಳನ್ನು ಈ ಬಾರಿಯೂ ಅನುಭವದ ಕಾರಣ ಉಳಿಸಿಕೊಳ್ಳಲಾಗಿದ್ದು, ಮಾಸ್ಟರ್‌ ‘ಅರ್ಜುನ’ ಆನೆಯು ಮೃತಪಟ್ಟಿರುವುದರಿಂದ ಅವನ ಸ್ಥಾನ ತುಂಬುವ ಸಮರ್ಥ ಆನೆಗಳ ಇಲಾಖೆಯು ಹುಡುಕಿದೆ.

ಅನುಭವಿ ಆನೆಗಳಲ್ಲದೇ ಹೊಸ ಆನೆಗಳನ್ನು ಕರೆತರುವ ಸಿದ್ಧತೆ ನಡೆದಿದೆ. ಹೊಸ ತಯಾರಿ ಸಿಗುವುದಲ್ಲದೆ, ಭವಿಷ್ಯದ ಗಜಪಡೆಯನ್ನು ಕಟ್ಟಲು ಸಹಾಯವಾಗಲಿದೆ. ಪಟ್ಟಿಯಲ್ಲಿರುವ ಹೊಸ ಆನೆಗಳು ಯಾವುವೆಂಬುದು ದಸರಾ ಉನ್ನತ ಸಮಿತಿ ಸಭೆಯ ನಂತರವಷ್ಟೇ ಗೊತ್ತಾಗಲಿದೆ.

ಅಂಬಾರಿ ಹೊರಲು ಅಭಿಮನ್ಯು ಜೊತೆ ಎರಡನೇ ಆನೆಯನ್ನು ಸಜ್ಜುಗೊಳಿಸುವ ಗುರಿ ಅರಣ್ಯ ಇಲಾಖೆಗೆ ಈ ಬಾರಿ ಇದೆ. ದ್ರೋಣನ ಜೊತೆ ಬಲರಾಮ, ಬಲರಾಮನೊಂದಿಗೆ ಅರ್ಜುನ, ಅವನೊಂದಿಗೆ ಅಭಿಮನ್ಯುವಿಗೆ ಅಂಬಾರಿ ಹೊರುವ ತಾಲೀಮನ್ನು ಮೊದಲು ನೀಡಲಾಗುತ್ತಿತ್ತು. ಈ ತಾಲೀಮು ಹಲವು ದಶಕಗಳಿಂದ ನಡೆದಿದ್ದು, ಕಳೆದೆರಡು ವರ್ಷದಿಂದ ಅಭಿಮನ್ಯು ಜೊತೆ ಮಹೇಂದ್ರ, ಭೀಮ, ಧನಂಜಯರನ್ನು ಇಲಾಖೆಯು ಸಿದ್ಧಗೊಳಿಸುತ್ತಿದೆ. 

ಅಭಿಮನ್ಯುಗೆ 58 ವರ್ಷವಾಗಿದ್ದು, ಅಂಬಾರಿಯನ್ನು ಇನ್ನೂ 2 ಬಾರಿ ಹೊರಬಹುದಾಗಿದೆ. ಅವನಷ್ಟೇ ಶಾಂತ ಚಿತ್ತದ, ಗಾಂಭೀರ್ಯದ ಆನೆಯನ್ನು ಇಲಾಖೆಯು ಹುಡುಕಲಿದೆ. 

ನವರಾತ್ರಿ ಆರಂಭಕ್ಕೆ 84 ದಿನವಷ್ಟೇ ಬಾಕಿಯಿದ್ದು, ಅಕ್ಟೋಬರ್‌ 12ರ ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದೆ. ಈ ಬಾರಿ ಆನೆಗಳಿಗೆ ಹೆಚ್ಚಿನ ತರಬೇತಿ, ಸಿದ್ಧತೆ ನೀಡಲು ಇಲಾಖೆ ನಿರ್ಧರಿಸಿದೆ. ಹೀಗಾಗಿ 60 ದಿನ ಮುಂಚಿತವಾಗಿ ಆನೆಗಳನ್ನು ಕರೆತರಲಿದೆ. ಗಜಪಯಣ ಆಗಸ್ಟ್‌ ಎರಡನೇ ವಾರದಲ್ಲಿ ಮೈಸೂರಿನತ್ತ ಹೊರಡಲಿದೆ.

ದಸರಾದಲ್ಲಿ ಪಾಲ್ಗೊಳ್ಳುವ ಕ್ಷಮತೆಯಿರುವ 18 ಆನೆ ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ 14 ಆನೆಗಳನ್ನು ಅಂತಿಮ ಪಟ್ಟಿಗೆ ಮೇಲಧಿಕಾರಿಗಳು ಸೇರಿಸಲಿದ್ದಾರೆ
ಶರಣಬಸಪ್ಪ ಡಿಸಿಎಫ್ (ವನ್ಯಜೀವಿ)

ಗಜಪಯಣ ಆ.9 ಅಥವಾ 11?

ಅರಮನೆ ಪುರೋಹಿತರು ಗಜಪಯಣಕ್ಕೆ ಆಗಸ್ಟ್ 9 ಅಥವಾ 11ಕ್ಕೆ ನಿಗದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಎರಡು ಹಂತದಲ್ಲಿ ಆನೆಗಳು ಅರಮನೆ ನಗರಿಗೆ ಬರಲಿವೆ. ಕ್ಯಾಪ್ಟನ್ ಅಭಿಮನ್ಯು ಜೊತೆ ಕಳೆದ ಬಾರಿ ಬಂದಿದ್ದ ಭೀಮ ಮಹೇಂದ್ರ ಧನಂಜಯ ಗೋಪಿ ಕಂಜನ್ ಸುಗ್ರೀವ ಪ್ರಶಾಂತ ರೋಹಿತ್‌ ಹೆಣ್ಣಾನೆಗಳಾದ ಹಿರಣ್ಯ ಲಕ್ಷ್ಮಿ, ವರಲಕ್ಷ್ಮಿ, ದೊಡ್ಡ ಹರವೆ ಶಿಬಿರದ ಲಕ್ಷ್ಮಿ ಬರಲಿವೆ ಎನ್ನಲಾಗಿದೆ.

ವಿಕ್ರಂ ಆನೆಗೆ ಮದ ಬಂದಿದ್ದು ಆತ ಸ್ಥಾನ ಪಡೆದಿಲ್ಲ. ಮತ್ತಿಗೋಡು ಶಿಬಿರದ ಏಕಲವ್ಯ ಸೇರಿದಂತೆ ಮೂರು ಹೊಸ ಆನೆಗಳು ಪಟ್ಟಿಯಲ್ಲಿವೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.