ADVERTISEMENT

Dasara 2025: ಈ ಬಾರಿ ‘ಪಾಸ್ ಉಳ್ಳವರ’ ದಸರಾ!

ಹೆಚ್ಚಿನ ಕಾರ್ಯಕ್ರಮಗಳಿಗೆ ಪಾಸ್‌ ಇದ್ದರಷ್ಟೆ ಪ್ರವೇಶ, ಎಲ್ಲಿ ಸಿಗುತ್ತದೆಂಬ ಮಾಹಿತಿ ಇಲ್ಲ!

ಎಂ.ಮಹೇಶ್
Published 19 ಸೆಪ್ಟೆಂಬರ್ 2025, 23:28 IST
Last Updated 19 ಸೆಪ್ಟೆಂಬರ್ 2025, 23:28 IST
Dasara-logo
Dasara-logo   

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳಿಗೆ ಈ ಬಾರಿ ಜಿಲ್ಲಾಡಳಿತವು ಟಿಕೆಟ್ ಹಾಗೂ ‘ಪಾಸ್ ವ್ಯವಸ್ಥೆ’ ಮಾಡಿದೆ. ಹೀಗಾಗಿ, ಜನಸಾಮಾನ್ಯರು ವೀಕ್ಷಿಸಲು ಅವಕಾಶ ದೊರೆಯುವುದು ಕಷ್ಟಸಾಧ್ಯ ಎನ್ನುವಂತಾಗಿದೆ.

ಹಣವುಳ್ಳವರು ಹಾಗೂ ಪ್ರಭಾವಿಗಳಿಗೆ ಮಾತ್ರವೇ ಅವಕಾಶ ಸಿಗಲಿದ್ದು, ಹೊರ ಜಿಲ್ಲೆಗಳಿಂದ ಬರಲಿರುವ ಸಾವಿರಾರು ಮಂದಿಗೆ ಕಾರ್ಯಕ್ರಮ ವೀಕ್ಷಣೆ ತೀವ್ರ ತೊಡಕಾಗಿ ಪರಿಣಮಿಸಲಿದೆ.

ನಾಡಹಬ್ಬ ಸೆ.22ರಿಂದ ಅ.2ರವರೆಗೆ ನಡೆಯಲಿದೆ. ಚಾಮುಂಡಿಬೆಟ್ಟದಲ್ಲಿ ಉದ್ಘಾಟನಾ ಸಮಾರಂಭಕ್ಕೂ ಮೊದಲ ಬಾರಿಗೆ ಪಾಸ್‌ ಕಡ್ಡಾಯಗೊಳಿಸಲಾಗಿದೆ. ಆದರೆ, ಪಾಸ್‌ ಅನ್ನು ಎಲ್ಲಿ, ಯಾರು ಕೊಡುತ್ತಾರೆ? ಮಾನದಂಡವೇನು, ಒಬ್ಬರಿಗೆ ಎಷ್ಟು ಪಾಸ್‌ ವಿತರಿಸಲಾಗುತ್ತದೆ ಎಂದು ಜಿಲ್ಲಾಡಳಿತದಿಂದ ಈವರೆಗೂ ಮಾಹಿತಿ ನೀಡಿಲ್ಲ. ಇದು ಗೊಂದಲ ಮೂಡಿಸಿದೆ.

ADVERTISEMENT

ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯನ್ನು ಅಂಬಾವಿಲಾಸ ಅರಮನೆ ಆವರಣದಲ್ಲಿ ವೀಕ್ಷಿಸಲು ಹಿಂದಿನಿಂದಲೂ ಟಿಕೆಟ್‌ ಹಾಗೂ ಪಾಸ್‌ ವ್ಯವಸ್ಥೆ ಇದೆ. ಗೋಲ್ಡ್‌ ಕಾರ್ಡ್‌, ಜಂಬೂಸವಾರಿ ಟಿಕೆಟ್‌ ಅಥವಾ ಪಾಸ್‌ ಇದ್ದವರಿಗಷ್ಟೆ ಅವಕಾಶ ನೀಡಲಾಗುತ್ತದೆ.

ಆದರೆ, ಇದೇ ಪ್ರಥಮ ಬಾರಿಗೆ ಇತರ ಹಲವು ಕಾರ್ಯಕ್ರಮಗಳಿಗೂ ಪಾಸ್‌ ಕಡ್ಡಾಯಗೊಳಿಸಲಾಗಿದೆ. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಅಧಿಕೃತ ಜಾಲತಾಣದ (mysoredasara.gov.in) ಮೂಲಕ ಮಾರಾಟ ಮಾಡಲಾಗುತ್ತಿದೆ. ಆದರೆ, ಪಾಸ್‌ಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ.

ಷೋಗಳಿಗೂ ಬೇಕು ಟಿಕೆಟ್

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ. 27ರ ಸಂಜೆ 4ಕ್ಕೆ ವೈಮಾನಿಕ ಪ್ರದರ್ಶನ, ಸೆ.28 ಹಾಗೂ 29ರಂದು ಸಂಜೆ 6ಕ್ಕೆ ಡ್ರೋನ್‌ ಷೋ, ಅ.1ರಂದು ಸಂಜೆ 4ಕ್ಕೆ ವೈಮಾನಿಕ ಪ್ರದರ್ಶನ, ಡ್ರೋನ್‌ ಷೋ, ಪಂಜಿನ ಕವಾಯತು ಪೂರ್ವಾಭ್ಯಾಸ ಮತ್ತು ಅ. 2ರಂದು ಸಂಜೆ 6ಕ್ಕೆ ಪಂಜಿನ ಕವಾಯತು, ಡ್ರೋನ್‌ ಷೋ ನಡೆಯಲಿದೆ.

ಈ ಬಾರಿ ಡ್ರೋನ್‌ ಷೋಗೂ ಜಿಲ್ಲಾಡಳಿತದಿಂದ ಟಿಕೆಟ್‌ ಮಾರಲಿದ್ದು, ಟಿಕೆಟ್‌ಗೆ ₹1 ಸಾವಿರ ದರ ನಿಗದಿಪಡಿಸಲಾಗಿದೆ. ಪಂಜಿನ ಕವಾಯತುಗೆ ಟಿಕೆಟ್‌ ದರ ₹1,500ನಿಗದಿಪಡಿಸಲಾಗಿದೆ. 

ಮೈಸೂರು ನಗರ ಹೊರವಲಯದ ಉತ್ತನಹಳ್ಳಿ ಬಳಿ ಸೆ.23ರಿಂದ 27ರವರೆಗೆ ನಡೆಯುವ ‘ಯುವ ದಸರಾ’ದಲ್ಲಿ ಪಾಲ್ಗೊಳ್ಳಲು ದಿನದ ಟಿಕೆಟ್‌ಗೆ ₹ 5ಸಾವಿರ ಹಾಗೂ ₹ 2,500 ಟಿಕೆಟ್‌ ನಿಗದಿಪಡಿಸಲಾಗಿದ್ದು, ಅವುಗಳನ್ನು ‘ಬುಕ್‌ ಮೈ ಷೋ’ ಮೂಲಕ ಪಡೆಯಬಹುದು. ಇದರ ಮೂಲಕ ಜಿಲ್ಲಾಡಳಿತ ‘ವರಮಾನ’ ಸಂಗ್ರಹಕ್ಕೆ ಯೋಜಿಸಿದೆ.

ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ‘ಫಲಪುಷ್ಪ ಪ್ರದರ್ಶನ’ ಹಾಗೂ ‘ದಸರಾ ವಸ್ತುಪ್ರದರ್ಶನ’ಕ್ಕೂ ಟಿಕೆಟ್‌ ಇದೆ.

ಉಳಿದಂತೆ, ಅರಮನೆ ಆವರಣ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ರೈತ ದಸರಾ, ಮಹಿಳಾ ದಸರಾ, ಯೋಗ ದಸರಾ, ಕವಿಗೋಷ್ಠಿ, ಕನ್ನಡ ಪುಸ್ತಕ ಮೇಳ, ಕ್ರೀಡಾಕೂಟ, ಕುಸ್ತಿ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶವಿದೆ.

ಸೀಮಿತ ಆಸನಗಳ ವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ಪಾಸ್ ಕಡ್ಡಾಯಗೊಳಿಸಲಾಗಿದೆ. ಟಿಕೆಟ್‌ ಖರೀದಿಸಿಯೂ ಪ್ರವೇಶ ಪಡೆಯಬಹುದು.
– ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

ಎಷ್ಟೆಷ್ಟು ದರ?

  • ಗೋಲ್ಡ್‌ ಕಾರ್ಡ್‌; ₹ 6500

  • ಅರಮನೆ ಆವರಣದಲ್ಲಿ ಜಂಬೂಸವಾರಿ ಟಿಕೆಟ್; ₹ 3500

  • ಪಂಜಿನ ಕವಾಯತು; ₹1500

  • ಯುವ ದಸರಾ; ₹5000, ₹2000

  • ಡ್ರೋನ್‌ ಷೋ; ₹1000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.