
ದಸರಾ ಆನೆ ತಬ್ಬಿಕೊಂಡು ರೀಲ್ಸ್ ಮಾಡಿದ ಯುವತಿ: ಅರಣ್ಯ ಇಲಾಖೆಯಿಂದ ಕೇಸ್
ಮೈಸೂರು: ‘ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಗುರುವಾರ ರಾತ್ರಿ ಅನುಮತಿ ಪಡೆಯದೆ ತೆರಳಿ ಆನೆಗಳೊಂದಿಗೆ ಅಪಾಯಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವತಿ ವಿರುದ್ಧ ಪ‍್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುವುದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅರಮನೆ ಆವರಣದಲ್ಲಿ ಆನೆ ಹಾಗೂ ಮಾವುತರ ಕುಟುಂಬದ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದ್ದು, ಅಲ್ಲಿಗೆ ಹೋಗಲು ಅನುಮತಿ ಪಡೆಯುವುದು ಕಡ್ಡಾಯ. ಇದನ್ನು ಉಲ್ಲಂಘಿಸಿ ಯುವತಿ ಆನೆಯ ಬಳಿಗೆ ತೆರಳಿ, ಸೊಂಡಿಲನ್ನು ತಬ್ಬಿಕೊಂಡು ಮುದ್ದಾಡಿರುವ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೊ ನೋಡಿದ ಹಲವರು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
‘ಸಿಬ್ಬಂದಿಯ ಕಣ್ತಪ್ಪಿಸಿ ಆನೆಯ ಬಳಿಗೆ ತೆರಳಿದ್ದ ಯುವತಿಯನ್ನು ಪತ್ತೆ ಹಚ್ಚಲಾಗುವುದು. ಅನುಮತಿ ಪಡೆಯದೆ ಆನೆ ಬಳಿ ತೆರಳಿ ವಿಡಿಯೊ ಹಾಗೂ ಫೊಟೊ ತೆಗೆದವರ ವಿರುದ್ಧ ಈ ಹಿಂದೆ ಮೂರು ಪ್ರಕರಣ ದಾಖಲಿಸಿಕೊಂಡು ₹1 ಸಾವಿರ ದಂಡ ವಿಧಿಸಿದ್ದೇವೆ’ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಬಿ. ಪ್ರಭುಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.