ADVERTISEMENT

ಮೈಸೂರು ದಸರಾ ಚಲನಚಿತ್ರೋತ್ಸವ ಸೆ.29ರಿಂದ

ಸೆ.20ರಿಂದ ಚಿತ್ರಕಥಾ ಕಾರ್ಯಾಗಾರ; ಕಿರು ಚಲನಚಿತ್ರಗಳ ಸ್ಪರ್ಧೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 13:04 IST
Last Updated 18 ಸೆಪ್ಟೆಂಬರ್ 2019, 13:04 IST
   

ಮೈಸೂರು: ‘ದಸರಾ ಚಲನಚಿತ್ರೋತ್ಸವವನ್ನು ವಿಭಿನ್ನವಾಗಿ ರೂಪಿಸಿದ್ದು, ಮೂರು ಹಂತಗಳಲ್ಲಿ ನಡೆಸಲಾಗುವುದು’ ಎಂದು ದಸರಾ ಚಲನಚಿತ್ರೋತ್ಸವ ಉಪ ಸಮಿತಿಯ ವಿಶೇಷಾಧಿಕಾರಿ ಬಿ.ಎನ್.ಗಿರೀಶ್ ಬುಧವಾರ ಇಲ್ಲಿ ತಿಳಿಸಿದರು.

‘ಸೆ.20ರಿಂದ 22ರವರೆಗೆ ಮೂರು ದಿನ ಚಿತ್ರಕಥೆ ಕಾರ್ಯಾಗಾರ ಆಯೋಜಿಸಲಾಗಿದೆ. ನಿರ್ದೇಶಕ ಪಿ.ಶೇಷಾದ್ರಿ ನೇತೃತ್ವದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. 150 ಆಸಕ್ತರಿಗೆ ಮಾತ್ರ ನೋಂದಣಿಗೆ ಅವಕಾಶವಿದ್ದು, ಈಗಾಗಲೇ 120 ಜನರು ನೋಂದಾಯಿಸಿಕೊಂಡಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದೇ ಮೊದಲ ಬಾರಿಗೆ 5 ನಿಮಿಷದ ಅವಧಿಯ ಕಿರು ಚಿತ್ರಗಳ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ತಮ್ಮ ಸ್ವಂತ ನಿರ್ಮಾಣದ ಕಿರು ಚಲನಚಿತ್ರಗಳನ್ನು ಸಿ.ಡಿ.ಯಲ್ಲಿ ಅಳವಡಿಸಿ, ಸೆ.25ರ ಬುಧವಾರ ಸಂಜೆ 5 ಗಂಟೆಯೊಳಗಾಗಿ ಸಿ.ಡಿ.ಯನ್ನು ಉಪ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತ್ರಿ ರಸ್ತೆ, ಮೈಸೂರು ಇಲ್ಲಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

60 ಚಿತ್ರ ಪ್ರದರ್ಶನ:

ದಸರಾ ಚಲನಚಿತ್ರೋತ್ಸವ ಸೆ.29ರಿಂದ ಅ.3ರವರೆಗೆ ಐದು ದಿನ ನಡೆಯಲಿದ್ದು, ಚಲನಚಿತ್ರ ನಟ ಗಣೇಶ್‌ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿ.ಎನ್‌.ಗಿರೀಶ್‌ ಹೇಳಿದರು.

‘ಐದು ದಿನದ ಉತ್ಸವದಲ್ಲಿ ಕನ್ನಡ ಸಿನಿಮಾ ಸೇರಿದಂತೆ ಕಲಾತ್ಮಕ ಸಿನಿಮಾಗಳು, ಭಾರತೀಯ ಸಿನಿಮಾಗಳು, ವಿಶ್ವ ಶ್ರೇಷ್ಠ ಸಿನಿಮಾಗಳು ಮಾಲ್ ಆಫ್ ಮೈಸೂರಿನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

‘ಐದು ದಿನದ 60 ಪ್ರದರ್ಶನ ವೀಕ್ಷಿಸ ಬಯಸುವವರಿಗೆ ₹ 400 ಮೌಲ್ಯದ ಪಾಸ್‌ ನೀಡಲಾಗುತ್ತದೆ. ಒಂದು ದಿನದ ಪಾಸ್‌ ದರ ₹ 100. ಚಿತ್ರಕಥಾ ಕಾರ್ಯಾಗಾರಕ್ಕೆ ನೋಂದಣಿ ಮಾಡಿಸಿಕೊಂಡವರು ಇದೇ ಪಾಸ್‌ನಲ್ಲಿ ಎಲ್ಲ ಚಲನಚಿತ್ರಗಳನ್ನು ವೀಕ್ಷಿಸಬಹುದು’ ಎಂದು ತಿಳಿಸಿದರು.

ದಸರಾ ಚಲನಚಿತ್ರೋತ್ಸವ ಸಮಿತಿಯ ಕಾರ್ಯಧ್ಯಕ್ಷ ಗೋವಿಂದರಾಜು ಬಿ.ಜಿ, ಕಾರ್ಯದರ್ಶಿ ರಾಜು.ಆರ್, ಕಲಾತ್ಮಕ ನಿರ್ದೇಶಕ ಮನು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.