ADVERTISEMENT

12ರಂದು ದಸರಾ ಕವಿಗೋಷ್ಠಿ ಉದ್ಘಾಟನೆ

ಅವಕಾಶ ಸಿಕ್ಕಿಲ್ಲದವರಿಗೆ ವೇದಿಕೆ ಕಲ್ಪಿಸಲು ಆದ್ಯತೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 9:06 IST
Last Updated 5 ಅಕ್ಟೋಬರ್ 2018, 9:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭವನ್ನು ಅ. 12ರಂದು ಬೆಳಿಗ್ಗೆ 10ಕ್ಕೆ ಮೈಸೂರು ವಿಶ್ವವಿದ್ಯಾಲಯದ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕವಿಗೋಷ್ಠಿ ‍ಉಪಸಮಿತಿಯ ವಿಶೇಷಾಧಿಕಾರಿ, ಮೈಸೂರು ವಿ.ವಿ ಕುಲಸಚಿವ ಪ್ರೊ.ಆರ್‌.ರಾಜಣ್ಣ ತಿಳಿಸಿದರು.

ಸಾಹಿತಿ ಪ್ರೊ.ಹಂಪಾ ನಾಗರಾಜಯ್ಯ ಅವರು ಕವಿಗೋಷ್ಠಿಯನ್ನು ಉದ್ಘಾಟಿಸುವರು. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು ಅತಿಥಿಯಾಗಿ ಭಾಗವಹಿಸುವರು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ದಿನದಂದು ಬೆಳಿಗ್ಗೆ 11.30ಕ್ಕೆ ಚಿಗುರು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕವಿ ಚಿಂತಾಮಣಿ ಕೂಡ್ಲೆಕೆರೆ ಕವಿಗೋಷ್ಠಿಯ ಅಧ್ಯಕ್ಷತೆವಹಿಸುವರು. ಕವಿ ಡಾ.ಟಿ.ಯಲ್ಲಪ್ಪ ಅತಿಥಿಯಾಗಿ ಭಾಗವಹಿಸುವರು ಎಂದರು.

ADVERTISEMENT

ಹೊಸಬರಿಗೆ ಅವಕಾಶ: ಕವಿಗೋಷ್ಠಿಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ದಸರಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿದವರಿಗೇ ಮತ್ತೆ ಮತ್ತೆ ಅವಕಾಶ ನೀಡುವ ಬದಲು ಪ್ರತಿಭಾವಂತ ಅವಕಾಶ ವಂಚಿತರಿಗೆ ವೇದಿಕೆ ನೀಡಲಾಗುತ್ತಿದೆ ಎಂದು ಪ್ರೊ.ರಾಜಣ್ಣ ಹೇಳಿದರು.

ಸೆ. 13ರಂದು ಬೆಳಿಗ್ಗೆ 10.30ಕ್ಕೆ ರಾಣಿಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕವಿ ಕೆ.ಷರೀಫಾ ಅಧ್ಯಕ್ಷತೆವಹಿಸುವರು. ಸಾಹಿತಿ ಶೂದ್ರ ಶ್ರೀನಿವಾಸ ಅತಿಥಿಯಾಗಿ ಭಾಗವಹಿಸುವರು. 30 ಕವಿಗಳು ಕವಿತೆ ವಾಚಿಸಲಿದ್ದಾರೆ.

ಸೆ. 15ರಂದು ಬೆಳಿಗ್ಗೆ 10.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಪ್ರಧಾನ ಕವಿಗೋಷ್ಠಿ ನಡೆಯಲಿದೆ. ಕವಯತ್ರಿ ಸುಕನ್ಯಾ ಮಾರುತಿ ಅಧ್ಯಕ್ಷತೆವಹಿಸುವರು. ಕನ್ನಡದ ಕವಿಗಳಿಗೆ ಆದ್ಯತೆ ಇದೆ. ಕೊಡವ, ತುಳು, ಅರಭಾಷೆ, ಕೊಂಕಣಿ, ಸಂಸ್ಕೃತ, ಹಿಂದಿ ಹಾಗೂ ಉರ್ದು ಭಾಷೆಯ ತಲಾ ಒಬ್ಬೊಬ್ಬರು ಕವಿಗಳು ಕವಿತೆ ವಾಚನ ಮಾಡಲಿದ್ದಾರೆ. ಸಾಹಿತಿ ಪ್ರೊ.ಶ್ರೀಕಂಠ ಕೂಡಿಗೆ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಉಪಸಮಿತಿಯ ಕಾರ್ಯಾಧ್ಯಕ್ಷ, ಮೈಸೂರು ವಿ.ವಿ ಪ್ರಸಾರಾಂಗದ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ ಕಾರ್ಯದರ್ಶಿ, ಭೂ ದಾಖಲೆ ಇಲಾಖೆಯ ಜಂಟಿ ನಿರ್ದೇಶಕ ಮರಿಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.