ಮೈಸೂರು: ಸಾಹಿತ್ಯಾಸಕ್ತರಿಗೆ ‘ಪಂಚ ಕಾವ್ಯದೌತಣ’ ಉಣಬಡಿಸುವ ದಸರಾ ಕವಿಗೋಷ್ಠಿಯು ಸೆ. 23ರಿಂದ 27ರವರೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆಯಲಿದೆ.
ಶನಿವಾರ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ವೇದಿಕೆಯಲ್ಲಿ ಕವಿಗೋಷ್ಠಿಯ ಪೋಸ್ಟರ್ ಬಿಡುಗಡೆ ಆಯಿತು. ಈ ವೇಳೆ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ. ಲೋಲಾಕ್ಷಿ ಮಾಹಿತಿ ಹಂಚಿಕೊಂಡರು.
‘ಈ ಬಾರಿಯ ದಸರಾ ಕವಿಗೋಷ್ಠಿಯನ್ನು ‘ಪಂಚ ಕಾವ್ಯದೌತಣ’ ಪರಿಕಲ್ಪನೆಯಡಿಯಲ್ಲಿ ಆಯೋಜಿಸಲಾಗುತ್ತಿದೆ. ಉದ್ಘಾಟನಾ ಕಾರ್ಯಕ್ರಮ ಸೆ. 23ರಂದು ಬೆಳಿಗ್ಗೆ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಾಹಿತಿ ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದಾರೆ. ಉಳಿದೆಲ್ಲ ಗೋಷ್ಠಿಗಳು ಬಿಎಂಶ್ರೀ ಸಭಾಂಗಣದಲ್ಲಿ ನಡೆಯಲಿವೆ’ ಎಂದರು.
ಪ್ರಭಾತ ಗೋಷ್ಠಿ:
ಸೆ.23ರಂದು ‘ಪ್ರಭಾತ’ ಎಂಬ ಪರಿಕಲ್ಪನೆಯಲ್ಲಿ ಮೊದಲ ಗೋಷ್ಠಿ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಜಿಲ್ಲೆಗಳಾದ ಮೈಸೂರು, ಹಾಸನ, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಪ್ರತಿಭಾವಂತ ಹಿರಿಯ–ಕಿರಿಯರ ಭಾವ ಸಮ್ಮಿಲನ ಇದಾಗಲಿದೆ.
ಸೆ.24ರಂದು ‘ಪ್ರಚುರ’ ಗೋಷ್ಠಿಯನ್ನು ಚಲನಚಿತ್ರ ಗೀತ ರಚನೆಕಾರ ಜೋಗಿ ಪ್ರೇಮ್ ಉದ್ಘಾಟಿಸಲಿದ್ದು, ‘ಕನ್ನಡ ಅಸ್ತಿತ್ವ’ ಕುರಿತು ಕವಿಗಳಿಂದ ನಾಡು-ನುಡಿ ಚಿಂತನೆಗೆ ವೇದಿಕೆಯಾಗಲಿದೆ. ಅನಾಥಾಶ್ರಮ ವಾಸಿಗಳು, ಅಂಕವಿಕಲರು, ಲಿಂಗತ್ವ ಅಲ್ಪಸಂಖ್ಯಾತರು, ಪೌರಕಾರ್ಮಿಕರು ಸೇರಿದಂತೆ ಅಂಚಿಗೆ ಸರಿದಿದ್ದ ವರ್ಗಗಳ ಕವಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದರು.
ಸೆ.25ರಂದು ‘ಪ್ರಜ್ವಲ’ ಗೋಷ್ಠಿಯನ್ನು ಗೀತ ರಚನೆಕಾರ ಪ್ರಮೋದ ಮರವಂತೆ ಉದ್ಘಾಟಿಸಲಿದ್ದು, ಚುಟುಕು ಕವನಗಳ ಜುಗಲ್‌ಬಂಧಿ ಇದೆ. ಸೆ.26ರಂದು ‘ಪ್ರತಿಭಾ’ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಜಾನಪದ ತಜ್ಞ ಪ್ರೊ. ನಂಜಯ್ಯ ಹೊಂಗನೂರು ಉದ್ಘಾಟಿಸಲಿದ್ದು, ಇದೇ ಮೊದಲ ಬಾರಿಗೆ ಈ ನೆಲದ ಮಣ್ಣಿನ ಮಕ್ಕಳು ಕಟ್ಟಿದ ಜಾನಪದ, ತತ್ವಪದಗಳ ಕಾವ್ಯವಾಚನ ಮತ್ತು ಗಾಯನ ಇರಲಿದೆ ಎಂದು ಮಾಹಿತಿ ನೀಡಿದರು.
ಕವಿಗೋಷ್ಠಿಯ ಕಡೆಯ ದಿನವಾದ ಸೆ. 27ರಂದು ‘ಪ್ರಬುದ್ಧ’ ಗೋಷ್ಠಿಯನ್ನು ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಉದ್ಘಾಟಿಸಲಿದ್ದಾರೆ. 31 ಜಿಲ್ಲೆಗಳ ಪ್ರತಿಭಾನ್ವಿತರು ಕವಿತೆ ವಾಚಿಸಲಿದ್ದಾರೆ ಎಂದರು.
ಸಮಿತಿಯ ಉಪವಿಶೇಷಾಧಿಕಾರಿ ಜಿ.ಸೋಮಶೇಖರ್, ಸದಸ್ಯರಾದ ನಾಗರಾಜ್ ಭೈರಿ, ಪ್ರೊ. ಎಂ.ಎಸ್. ಸಪ್ನಾ, ಪ್ರೊ. ಜ್ಯೋತಿ, ಪ್ರೊ. ನವಿತಾ ತಿಮ್ಮಯ್ಯ, ಪ್ರೊ.ಗೀತಾ ಹಾಗೂ ಪ್ರೊ. ಶುಭಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.