ADVERTISEMENT

ಮೈಸೂರು: ಪರಂಪರೆಯ ಕಾಳಜಿಗೆ ಬಹುಮಾನದ ಕೊಡುಗೆ

‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್‌’ ದಸರಾ ಕ್ವಿಜ್, ಬೊಂಬೆ ಫೋಟೊ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:59 IST
Last Updated 26 ಅಕ್ಟೋಬರ್ 2025, 7:59 IST
<div class="paragraphs"><p>–ಪ್ರಜಾವಾಣಿ ಚಿತ್ರ</p></div>
   

–ಪ್ರಜಾವಾಣಿ ಚಿತ್ರ

ಮೈಸೂರು: ‘ನಂಬಿದವರ ಮನೆಯ ಒಳಗೆ ತುಂಬಿ ತುಳುಕಾಡು ಬಾಪ್ಪ, ಸಿದ್ದಯ್ಯ ಸ್ವಾಮಿ ಬನ್ನಿ...’ ಹಾಡಿನ ಮಧುರ ಅಲೆಯೊಂದಿಗೆ ಆರಂಭಗೊಂಡ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್‌’ ಆಯೋಜನೆಯ ದಸರಾ ಕ್ವಿಜ್ ಹಾಗೂ ಬೊಂಬೆ ಫೋಟೊ ಸ್ಪರ್ಧೆ– 2025ರ ಬಹುಮಾನ ವಿತರಣೆಯು ಓದುಗರ ಸಂಭ್ರಮಕ್ಕೆ ವೇದಿಕೆಯಾಯಿತು.

ಖ್ಯಾತ ಗಾಯಕರಾದ ದೇವಾನಂದ ವರಪ್ರಸಾದ್ ಮತ್ತು ಸಿದ್ದೇಶ್ ಬದನವಾಳು ಅವರ ಗಾಯನವು ಮುನ್ನಡಿ ಬರೆದ ಕಾರ್ಯಕ್ರಮವು, ನಾಡಹಬ್ಬದ ನೆನಪು, ಪತ್ರಿಕೆಯ ಒಡನಾಟ, ಬಹುಮಾನ ಪಡೆದವರ ಸಂತಸದ ಮೆರುಗು ವಿಶೇಷ ಕ್ಷಣಗಳನ್ನು ಸೃಷ್ಟಿಸಿತು. 

ADVERTISEMENT

ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮ ಓದುಗರೊಂದಿಗೆ ಪತ್ರಿಕೆಯು ಹೊಂದಿರುವ 7 ದಶಕಕ್ಕೂ ಮೀರಿದ ನಂಟಿಗೆ, ನೆನಪಿಗೆ ಭಾವುಕ ಮಾತುಗಳ ಸ್ಪರ್ಶವನ್ನು ನೀಡಿತು. ಪರಂಪರೆಯನ್ನು ಮುಂದುವರಿಸುತ್ತಿರುವ ಓದುಗರಿಗೆ ಬಹುಮಾನದ ಕೊಡುಗೆಯನ್ನು ನೀಡಲಾಯಿತು.

ಬಹುಮಾನ ವಿತರಿಸಿದ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಾಗೇಶ ವಿ.ಬೆಟ್ಟಕೋಟೆ ಮಾತನಾಡಿ, ‘ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ನಮ್ಮ ಪರಂಪರೆಯನ್ನೇ ಮರೆಯುತ್ತಿರುವ ಜನರನ್ನು ‘ಪ್ರಜಾವಾಣಿ’ ಬಳಗವು ದಸರಾ ಬೊಂಬೆ, ರಸಪ್ರಶ್ನೆ ಸ್ಪರ್ಧೆ ಮೂಲಕ ಎಚ್ಚರಿಸುತ್ತಿದೆ. ನಮ್ಮ ಸಂಸ್ಕೃತಿ ಪರಿಚಯಿಸುವುದರೊಂದಿಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ’ ಎಂದರು.

ವಸ್ತುನಿಷ್ಠವಾಗಿ: ‘ಬೊಂಬೆ ಜೋಡಣೆಗೆ ವಿಜಯನಗರ ಕಾಲದಿಂದಲೂ ಇತಿಹಾಸವಿದೆ. ಇದು ಮೈಸೂರಿನ ಸಂಸ್ಕೃತಿಯನ್ನೂ ಬಿಂಬಿಸುತ್ತದೆ. ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ರೈತರ, ಬಡಜನರ ಬವಣೆಯನ್ನು ತೋರುವಲ್ಲಿ ‘ಪ್ರಜಾವಾಣಿ’ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುತ್ತಿದೆ. ಡಿಜಿಟಲ್‌ ಹಿಂದೆ ಬೀಳದೇ ಪತ್ರಿಕೆ ಓದಿಗೆ ಜನರು ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಬೀದಿ ನಾಟಕಗಳು ಸ್ವಾತಂತ್ರ್ಯ ಹೋರಾಟದಲ್ಲಿ, ಸಾಮಾಜಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇಂದು ಕಡೆಗಣಿಸಲ್ಪಟ್ಟಿದೆ. ಸರ್ಕಾರಗಳು ಪ್ರದರ್ಶಕ ಕಲೆಗಳಿಗೆ ಅಥವಾ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿಲ್ಲ. ಯಾವ ದೇಶದಲ್ಲಿ ಶಿಕ್ಷಣ, ವಿಜ್ಞಾನ ಬೆಳೆಯುದಿಲ್ಲವೋ ಅದು ಅಭಿವೃದ್ಧಿ ಹೊಂದಲೂ ಸಾಧ್ಯವಿಲ್ಲ. ನಿರುದ್ಯೋಗವೂ ಹೆಚ್ಚಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೊಂಬೆ ಪ್ರದರ್ಶನ ಗಲ್ಲಿ–ಗಲ್ಲಿಗೆ ತಲುಪಲಿ: ಬೊಂಬೆ ಫೋಟೊ ಸ್ಪರ್ಧೆಯ ತೀರ್ಪುಗಾರರಾಗಿದ್ದ ಪದ್ಮಾ ವೆಂಕಟೇಶ್ ಮಾತನಾಡಿ, ‘ಬೊಂಬೆ ಕೂರಿಸುವುದು ಎಂದರೆ ಕಥೆಗಳನ್ನು ಹೇಳುವ ಪದ್ಧತಿ. ಮಹಿಷಾಸುರರನ್ನು ಸಂಹರಿಸಲು ಹೊರಟ ಚಾಮುಂಡಿಗೆ ದೇವ, ದೇವತೆಗಳು, ಸಕಲ ಜೀವಿಗಳು ತಮ್ಮ ಶಕ್ತಿಯನ್ನು ನೀಡುತ್ತವೆ. ಹಾಗೆ ಶಕ್ತಿಯನ್ನು ಕಳೆದುಕೊಂಡು ನಿಸ್ತೇಜ ಬೊಂಬೆಗಳಂತಾದ ಅವುಗಳ ಆರಾಧಿಸುವ ಪರಂಪರೆಯಿದು. ಈ ಪ್ರದರ್ಶನ ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ನಡೆಯಬೇಕು. ಜೋಡಣೆಯು ಪೌರಾಣಿಕ, ಐತಿಹಾಸಿಕ ಹಿನ್ನೆಲೆಯನ್ನು ಪ್ರತಿಬಿಂಬಿಸಬೇಕು’ ಎಂದು ತಿಳಿಸಿದರು. 

‘ಬೊಂಬೆಗಳನ್ನು ಬೆಸ ಸಂಖ್ಯೆಯ ಹಂತಗಳಲ್ಲಿ ಜೋಡಿಸುವ ಪದ್ಧತಿ ಇದೆ. ಮೇಲಿನ ಹಂತದಲ್ಲಿ ರಾಜ–ರಾಣಿ ಬೊಂಬೆ, ದಶಾವಾತಾರ, ಬಳಿಕ ಒಂದೊಂದು ಅವತಾರಗಳಾದ ರಾಮಾಯಣ, ಕೃಷ್ಣಾವತಾರ, ಮಹಾಭಾರತ ಹೀಗೆ ಕ್ರಮಬದ್ಧವಾಗಿ ಇಡಲಾಗುತ್ತದೆ. ಇಂದಿಗೂ ಪಟ್ಟದ ಬೊಂಬೆಗಳನ್ನು ಮಗಳಿಗೆ ಮದುವೆಯಲ್ಲಿ ನೀಡಿ ಪರಂಪರೆ ಮುಂದುವರಿಸುವಂತೆ ಸೂಚಿಸುವ ಸಂಪ್ರದಾಯವಿದೆ. ತೀರ್ಪು ನೀಡುವಾಗ ಹಂತಗಳ ಜೋಡಣೆಯಲ್ಲಿನ ಪರಿಪಕ್ವತೆ, ಧಾರ್ಮಿಕ ಹಿನ್ನೆಲೆ, ಮೈಸೂರಿನ ರಾಜ ಸಂಸ್ಕೃತಿಯ ಪ್ರಭಾವ, ಜನಜೀವನದ ಆಯಾಮವನ್ನು ಪರಿಗಣಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಟಿಪಿಎಂಎಲ್‌ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ.ರವಿ ಹಾಗೂ ಟಿಪಿಎಂಎಲ್‌ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್ ಮಾತನಾಡಿ, ಪ್ರಜಾವಾಣಿ ಹಾಗೂ ಡೆಕ್ಕನ್‌ಹೆರಾಲ್ಡ್‌ ಪತ್ರಿಕೆಗಳು ಓದುಗರಿಗಾಗಿ ರೂಪಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಪ್ರಾಯೋಜಕ, ಎಪಿಎನ್‌ ಪ್ರಾಪರ್ಟೀಸ್‌ ಪಾಲುದಾರ ಎ.ಪಿ.ನಾಗೇಶ್ ಪಾಲ್ಗೊಂಡಿದ್ದರು.

‘ಡೆಕ್ಕನ್‌ ಹೆರಾಲ್ಡ್’ ಮೈಸೂರು ಬ್ಯುರೋ ಮುಖ್ಯಸ್ಥ ಟಿ.ಆರ್.ಸತೀಶ್‌ ಕುಮಾರ್‌ ಸ್ವಾಗತಿಸಿದರು. ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್‌.ಪ್ರಕಾಶ್‌ ವಂದಿಸಿದರು. ‘ಪ್ರಜಾವಾಣಿ’ ಹಿರಿಯ ವರದಿಗಾರ ಎಂ.ಮಹೇಶ್ ನಿರೂಪಿಸಿದರು.‘ವೈಯಕ್ತಿಕ ಅಭಿವೃದ್ಧಿಗೆ ಸಹಕರಿಸಿದ ಪತ್ರಿಕೆ’ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿಜ್ಞಾನ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಸಿದಂತೆ ಅನೇಕ ಲೇಖನಗಳನ್ನು ಬರೆದಿರುವೆ. ಪ್ರಕಟಿಸಿ ಗೌರವಧನ ನೀಡಿ ಬೆನ್ನು ತಟ್ಟಿದೆ ವೈಯಕ್ತಿಕ ಅಭಿವೃದ್ಧಿಗೆ ಸಹಕರಿಸಿದೆ. ಪತ್ರಿಕೆಯ ಗುಣಮಟ್ಟ ಪ್ರಶಂಸನೀಯ ಎಲ್.ಶಶಿಕುಮಾರ್ ವಿಧಿವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ

ದೇವಾನಂದ ವರಪ್ರಸಾದ್ ಸಿದ್ದೇಶ್ ಬದನವಾಳು ಅವರ ಗಾಯನ
‘ಸಂದೇಹವಿಲ್ಲದೆ ಮಾಹಿತಿ ಬಳಕೆ’ ದೇಶದ ಆರ್ಥಿಕ ಸ್ಥಿತಿಗತಿ ಮಾರುಕಟ್ಟೆ ವಿಶ್ಲೇಷಣೆ ಮತ್ತು ಸರ್ಕಾರದ ಯೋಜನೆಗಳ ಮಾಹಿತಿ ಒದಗಿಸುವಲ್ಲಿ ‘ಪ್ರಜಾವಾಣಿ’ ಅತ್ಯಂತ ವಿಶ್ವಾಸಾರ್ಹವಾಗಿದೆ. ಪತ್ರಿಕೆಯಲ್ಲಿನ ಮಾಹಿತಿಯನ್ನು ಸಂದೇಹವಿಲ್ಲದೇ ಬಳಸಬಹುದು ಎನ್ನುವುದೇ ಹೆಮ್ಮೆಯ ಸಂಗತಿ
ಎನ್.ಮಂಜುನಾಥ ಕುವೆಂಪುನಗರ
ಜನಪರವಾದ ‘ಪ್ರಜೆಗಳ ವಾಣಿ’ ‘ಪ್ರಜಾವಾಣಿ’ಯು ಜನಪರ ಕೆಲಸ ಮಾಡುತ್ತಿರುವ ‘ಪ್ರಜೆಗಳ ವಾಣಿ’. ಯಾವುದೇ ಉತ್ಪ್ರೇಕ್ಷೆಯಿಲ್ಲದೆ ವಾಸ್ತವ ವರದಿ ನೀಡುತ್ತದೆ. ಇಲ್ಲಿ ಪ್ರಕಟವಾಗುವ ಸಾಧಕರ ಪರಿಚಯ ಅನೇಕರನ್ನು ಪ್ರೋತ್ಸಾಹಿಸಿದೆ. ವಿದ್ಯಾರ್ಥಿಗಳಿಗಂತೂ ಮಹತ್ವದ ಮಾಹಿತಿ ತಾಣ
ರಾಮಚಂದ್ರ ಭಟ್‌ ಪ್ರಾಂಶುಪಾಲ ಸದ್ವಿದ್ಯಾ ಪ್ರೌಢಶಾಲೆ
‘ತವರಿನಿಂದಲೂ ಅನುಬಂಧ’ ತಾಯಿ ಮನೆಯಲ್ಲಿದ್ಧಾಗಿನಿಂದಲೂ ಪ್ರಜಾವಾಣಿ ಓದುತ್ತಿದ್ದು ಒಂದು ಅನುಂಬಂಧವಾಗಿ ನಮ್ಮಲ್ಲಿ ಬೆರೆತಿದೆ. ಪುರವಣಿಯಲ್ಲಿನ ಅಂಕಣಗಳೂ ಆಪ್ತವಾಗಿರುತ್ತದೆ. ವೈವಿಧ್ಯಮಯ ಸುದ್ದಿ ಮಾಧ್ಯಮ. ಜ್ಞಾಪಕ ಶಕ್ತಿ ಅರಿವನ್ನು ಮೂಡಿಸುವ ರಸಪ್ರಶ್ನೆ ಸ್ಪರ್ಧೆ ಉಪಯುಕ್ತ.
ಬಿ.ಆರ್.ನಾಗರತ್ನಾ ಗೋಕುಲಂ
‘ಪತ್ರಿಕೆಯೊಂದಿಗೆ ಬೆರೆಯುವ ಅವಕಾಶ’ ಪತ್ರಿಕೆಯೂ ಇಂಥ ಕಾರ್ಯಕ್ರಮಗಳನ್ನೂ ಹೆಚ್ಚು ರೂಪಿಸಬೇಕು. ಓದುಗರಿಗೂ ಪತ್ರಿಕೆಯೊಂದಿಗೆ ಬೆರೆಯಲು ಹೆಚ್ಚು ಅವಕಾಶ ದೊರೆಯುತ್ತದೆ. ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಸಂತಸ ಮೂಡಿಸಿದೆ.
ನಾಗಶ್ರೀ ಎಂ.ಎಸ್‌ ಹೆಬ್ಬಾಳ 3ನೇ ಹಂತ
‘ಪ್ರಜಾವಾಣಿ–ಮಿನಿ ಗ್ರಂಥಾಲಯ’ ‘ಪ್ರಜಾವಾಣಿ’ ಒಂದು ಮಿನಿ ಗ್ರಂಥಾಲಯ ಕ್ಷೇಮ ಕುಶಲ ತ್ರಂತ್ರಜ್ಞಾನ ಭೂಮಿಕಾ ಹೆಚ್ಚು ಉಪಯುಕ್ತವಾಗಿದೆ. ಪತ್ರಿಕೆ ಓದುವುದು ಒಂದು ಸಂಸ್ಕಾರ. ಸಾರ್ವಕಾಲಿಕ ಸತ್ಯ
ಎಂ. ಗಣಪತಿ ಕಿಣಿ ಸೋಮನಾಥ ನಗರ
‘ವೈಯಕ್ತಿಕ ಅಭಿವೃದ್ಧಿಗೆ ಸಹಕರಿಸಿದ ಪತ್ರಿಕೆ’ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿಜ್ಞಾನ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಸಿದಂತೆ ಅನೇಕ ಲೇಖನಗಳನ್ನು ಬರೆದಿರುವೆ. ಪ್ರಕಟಿಸಿ ಗೌರವಧನ ನೀಡಿ ಬೆನ್ನು ತಟ್ಟಿದೆ ವೈಯಕ್ತಿಕ ಅಭಿವೃದ್ಧಿಗೆ ಸಹಕರಿಸಿದೆ. ಪತ್ರಿಕೆಯ ಗುಣಮಟ್ಟ ಪ್ರಶಂಸನೀಯ
ಎಲ್.ಶಶಿಕುಮಾರ್ ವಿಧಿವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ
‘ಬೊಂಬೆಗಳ ಜೋಡಣೆ ಸುಲಭವಲ್ಲ’ ನವರಾತ್ರಿಯಲ್ಲಿ ಬೊಂಬೆಗಳ ಜೋಡಣೆ ಸುಲಭವಲ್ಲ. ಇದು ಸಾಕಷ್ಟು ಶ್ರಮ ಬೇಡುತ್ತದೆ. ಪತ್ರಿಕೆಯು ಸ್ಪರ್ಧೆ ಆಯೋಜನೆ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಈ ಬಾರಿ ಗ್ರಂಥಾಲಯ ಪರಿಕಲ್ಪನೆಯಲ್ಲಿ ಬೊಂಬೆ ಜೋಡಣೆ ಮಾಡಿದ್ದೆ
ಎಂ.ಎಸ್.ಕೌಸಲ್ಯ ನಿವೇದಿತಾ ನಗರ
‘ನನಗೆ ಪ್ರಜಾವಾಣಿಯಷ್ಟೇ ಇಷ್ಟ’ ಒಬ್ಬೊಬ್ಬರಿಗೆ ಒಂದೊಂದು ಇಷ್ಟವಿರುತ್ತದೆ. ನನಗೆ ಮಾತ್ರ ಪ್ರಜಾವಾಣಿ ಓದುವುದೇ ಇಷ್ಟ. ಇಲ್ಲಿನ ಸುಡೊಕು ಅಭಿಮತ ಅಂಕಣ ಇಷ್ಟ. ಪತ್ರಿಕೆ ಇನ್ನಷ್ಟು ಹೆಚ್ಚು ಬೆಳಗಲಿ ಬಾಳಲಿ
ಎಸ್.ಕೆ.ಮೋಹನ್‌ಕುಮಾರ್ ಸುಭಾಷ ನಗರ

ದಸರಾ ಕ್ವಿಜ್–2025 ಬಹುಮಾನ ವಿಜೇತರು

ಪ್ರಥಮ: ಜಿ.ಮಾನಸಾ ಬೋಗಾದಿ

ದ್ವಿತೀಯ: ವೆಂಕಟೇಶ ಜೆ.ಪಿ.ನಗರ

ತೃತೀಯ: ಅಭಿಷೇಕ್ ಸಿ.ಕೆ ರಾಮಕೃಷ್ಣನಗರ

ಸಮಾಧಾನಕರ ಬಹುಮಾನ: ಮಂಜುನಾಥ್‌ ಎನ್‌ ಕುವೆಂಪುನಗರ ಕಲಾವತಿ ಕುವೆಂಪುನಗರ ಕೆ.ವಿ.ಮಂಜುಳಾ ಮೇಟಗಳ್ಳಿ  ಸುಧಾ ಬಿ.ಎಸ್ ವಿಜಯನಗರ 4ನೇ ಹಂತ ಪದ್ಮಶ್ರೀ ಎಸ್‌.ಜಿ ಹೆಬ್ಬಾಳ 2ನೇ ಹಂತ ಫಯಾಜ್ ವಿ. ಜ್ಯೋತಿ ನಗರ ಮಂಜುನಾಥ ಎಂ.ಕೆ ಬಸವೇಶ್ವರ ನಗರ  ಎಸ್‌.ಸುರೇಂದ್ರ ಕನಕ ಬಡಾವಣೆ ಬಿ.ಇಂದಿರಾಮಣಿ ಶ್ರೀರಾಂಪುರ 2ನೇ ಹಂತ  ನಾಗಶ್ರೀ ಎಂ.ಎಸ್ ಹೆಬ್ಬಾಳ 3ನೇ ಹಂತ

ಬೊಂಬೆ ಸ್ಪರ್ಧೆ ವಿಜೇತರು

ಪ್ರಥಮ: ಹೇಮಲತಾ ಕುಮಾರಸ್ವಾಮಿ ರಾಮಚಂದ್ರ ಅಗ್ರಹಾರ

ದ್ವಿತೀಯ: ಬಿ.ಜಿ.ವಿಜಯಲಕ್ಷ್ಮಿ ರಾಮಕೃಷ್ಣ ನಗರ

ತೃತೀಯ: ಉಷಾ ನಾಗರಾಜ್‌ ಎಸ್‌ಬಿಎಂ ಕಾಲೊನಿ

ಸಮಾಧಾನಕರ ಬಹುಮಾನ: ಕುಸುಮಾ ರಘೋತ್ತಮ ರಾಮಕೃಷ್ಣ ನಗರ ‘ಐ’ ಬ್ಲಾಕ್‌ ಲಕ್ಷ್ಮಿ ಶಿವರಾಮ್‌ ಜೆ.ಪಿ.ನಗರ ಪೂರ್ಣಿಮಾ ರಾಜೇಂದ್ರ ಶಾರದಾನಗರ ರೈಲ್ವೆ ಬಡಾವಣೆ ಶ್ರೀಲಕ್ಷ್ಮಿ ವಿಶ್ವನಾಥ್‌ ಜಯನಗರ 2ನೇ ಹಂತ ಸುವರ್ಣಾ ನಾಗರಾಜ್‌ ಜೆ.ಪಿ.ನಗರ ಅಶ್ವಿನಿ ಪ್ರಶಾಂತ್ ಕುವೆಂಪುನಗರ ಲತಾ ಶಶಿಶೇಖರ್ ದೀಕ್ಷಿತ್ ಚಾಮುಂಡಿ ಬೆಟ್ಟ ವಿಶ್ವಾಸ್‌ ಸರ್ವೀಸ್‌ ಸ್ಟೇಷನ್‌ ಸಿದ್ಧಾರ್ಥನಗರ ಸದ್ವಿದ್ಯಾ ಶಿಕ್ಷಣ ಸಂಸ್ಥೆ ನಾರಾಯಣಶಾಸ್ತ್ರಿ ರಸ್ತೆ ಶಮಂತಕಮಣಿ ಲಕ್ಷ್ಮಿಪುರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.